- ಚಾಮುಂಡಿ ಬೆಟ್ಟದಲ್ಲಿ ಮೊದಲ ಆಷಾಢ ಶುಕ್ರವಾರದ ಪೂಜೆ
- ಭಕ್ತ್ತಿಭಾವ ಮೆರೆದ ಭಕ್ತಗಣ
- ವಿವಿಧ ಪೂಜಾ ಕೈಂಕರ್ಯ:
ಮೈಸೂರು: ಆಷಾಢ ಮಾಸದ ಮೊದಲ ಶುಕ್ರವಾರದ ಶುಭಸಂದರ್ಭದಲ್ಲಿ ‘ಶ್ರೀಲಕ್ಷ್ಮೀ’ ಅಲಂಕಾರದಲ್ಲಿ ಕಂಗೊಳಿಸಿದ ನಾಡದೇವತೆ ಶ್ರೀ ಚಾಮುಂಡೇಶ್ವರಿ ತಾಯಿಯ ದರ್ಶನವನ್ನು ಸಹಸ್ರಾರು ಭಕ್ತರು ಪಡೆದರು.
ದೇವಿಯ ಸನ್ನಿಧಾನದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಶಾಸ್ತ್ರೋಕ್ತವಾಗಿ ನೆರವೇರಿದವು. ಇದಕ್ಕೆ ಭಕ್ತ ಸಮೂಹ ಸಾಕ್ಷಿಯಾಯಿತು.
ಈ ಸಲದ ಅಚ್ಚುಕಟ್ಟಾದ ವ್ಯವಸ್ಥೆ ಇದ್ದುದರಿಂದ ಯಾವುದೇ ಗೊಂದಲವಿರಲಿಲ್ಲ. ಆಗಮನದಿಂದ ನಿರ್ಗಮನ ವರೆಗೂ ಬ್ಯಾರಿಕೇಡ್‌ನಲ್ಲಿ ಭಕ್ತರು ಬಂಧಿಯಾದರು. ಹೀಗಾಗಿ ಹಿಂದಿನಂತೆ ಎಲ್ಲೆಂದರಲ್ಲಿ ತಿರುಗಾಡಿ ಬೆಟ್ಟದ ಸೌಂದರ್ಯ ಆಸ್ವಾದಿಸಲಾಗಲಿಲ್ಲ.
ವಿವಿಧ ಪೂಜಾ ಕೈಂಕರ್ಯ:
ನಾಡದೇವಿಯ ಮೂರ್ತಿಗೆ ನಸುಮುಂಜಾನೆ 3.30ಕ್ಕೆ ರುದ್ರಾಭಿಷೇಕದೊಂದಿಗೆ ಮೊದಲ ಆಷಾಢ ಶುಕ್ರವಾರಕ್ಕೆ ಚಾಲನೆ ಕೊಡಲಾಯಿತು. ಬಳಿಕ ಮಹಾನ್ಯಾಸಪೂರ್ವಕ ರುದ್ರಾಭಿಷೇಕ, ಸಹಸ್ರ ನಾಮಾರ್ಚನೆ ಸೇರಿದಂತೆ ವಿವಿಧ ಪೂಜಾ ಕಾರ್ಯ ನೆರವೇರಿಸಲಾಯಿತು.
ಬಳಿಕ ಅಲಂಕಾರ ಮಾಡಿ, ಮಹಾಮಂಗಳಾರತಿ ಬೆಳಗಲಾಯಿತು. ಬೆಳಗಿನ ಪೂಜಾ ವಿಧಾನ ಮುಗಿದ ಬಳಿಕ 5.30ರಿಂದ ಸಾರ್ವಜನಿಕ ದರ್ಶನಕ್ಕೆ ದೇಗುಲದ ದ್ವಾರಗಳು ತೆರೆಯಲಾಯಿತು. 9.30ಕ್ಕೆ ಮಹಾಮಂಗಳಾರತಿ, ಸಂಜೆ 6.30ರಿಂದ 7ರವರೆಗೆ ಅಭಿಷೇಕ ನೆರವೇರಿತು. ಬಳಿಕ ರಾತ್ರಿ 10ರ ವರೆಗೂ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ತಂಡೋ ತಂಡವಾಗಿ ಸೇರಿದ್ದ ಜನರು ಈ ಪೂಜಾ ಕೈಂಕರ್ಯ ಕಣ್ತುಂಬಿಕೊಂಡು ದೇವರ ಕೃಪೆಗೆ ಪಾತ್ರರಾದರು.
ಲಕ್ಷ್ಮೀ ಅಲಂಕಾರ:
ಮೊದಲ ಆಷಾಢ ಶುಕ್ರವಾರದಲ್ಲಿ ‘ಲಕ್ಷ್ಮೀ’ ಅಲಂಕಾರದಲ್ಲಿ ನಾಡಿದೇವಿ ಕಂಗೊಳಿಸಿದಳು. ಉತ್ಸವ ಮೂರ್ತಿಗೆ ನಾಗಲಕ್ಷ್ಮೀ ಅಲಂಕಾರ ಗಮನ ಸೆಳೆಯಿತು. ಸೇವಂತಿಗೆ, ಗುಲಾಬಿ, ಮಲ್ಲಿಗೆ, ಚೆಂಡುಹೂವು... ಹೀಗೆ ವಿವಿಧ ರೀತಿಯ ಪುಷ್ಪಗಳಿಂದ ಮಾಡಿದ್ದ ಅಲಂಕಾರ ಗರ್ಭಗುಡಿಯ ಅಂದ ಹೆಚ್ಚಿಸಿತ್ತು. ಇಡೀ ದೇವಾಲಯ ಮಾಡಿದ್ದ ಹೂವಿನ ಅಲಂಕಾರ ಆಕರ್ಷಣೀಯವಾಗಿತ್ತು. ಗರ್ಭಗುಡಿ, ಆಲಯ, ಗೋಪುರ, ಛಾವಣಿಯ ಹೂವಿನ ಅಲಂಕಾರ ಭಕ್ತರ ಗಮನ ಸೆಳೆಯಿತು.
ದೇವಿಯ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬಂದಿತ್ತು. ಬೆಳಗ್ಗೆಯ ಜಿಟಿಜಿಟಿ ಮಳೆಯ ಸಿಂಚನ, ಮಂಜು, ಚುಮುಚುಮು ಚಳಿಯನ್ನೂ ಲೆಕ್ಕಿಸದೇ ಆಗಮಿಸಿದ ಭಕ್ತರ ದಂಡು ದೇವಿಯ ದರ್ಶನಕ್ಕಾಗಿ ಹಾತೊರೆಯುತು.
ಸೂರ್ಯ ಕಣ್ಣು ಬಿಡುವ ಮೊದಲೇ ಇಲ್ಲಿ ಸರತಿ ಸಾಲು ಕಂಡು ಬಂತು. ದೇವರ ದರ್ಶನಕ್ಕೆ ಉಚಿತ ಪ್ರವೇಶದೊಂದಿಗೆ 2000 ರೂ.ನ ಟಿಕೆಟ್ ಪಡೆದವರಿಗಾಗಿ ಪ್ರತ್ಯೇಕ ಸರತಿ ವ್ಯವಸ್ಥೆ ಇತ್ತು.
ಲಲಿತ್ ಮಹಲ್ ಮೈದಾನ, ಕೆಎಸ್‌ಆರ್‌ಟಿಸಿ ನಗರ ಬಸ್ ನಿಲ್ದಾಣದಿಂದ ಬಂದವರು, ವಿಐಪಿಗಳು, 2 ಸಾವಿರ ರೂ. ಟಿಕೆಟ್ ಪಡೆದವರು, ಮೆಟ್ಟಲು ಹತ್ತಿ ಬಂದವರಿಗೆ ಪ್ರತ್ಯೇಕ ಸರತಿ ಸಾಲಿನ ವ್ಯವಸ್ಥೆ ಮಾಡಲಾಗಿತ್ತು. ಒಬ್ಬರು ಇನ್ನೊಬ್ಬರ ಸರತಿಯಲ್ಲಿ ನುಸುಳಲಾಗದಂತೆ ಬ್ಯಾರಿಕೇಟ್ ವ್ಯವಸ್ಥೆ ಮಾಡಲಾಗಿತ್ತು. ಇದು ಗದ್ದಲ, ನೂಕಾಟಕ್ಕೆ ಕಡಿವಾಣ ಹಾಕಿತು.
ಆಷಾಢ ಶುಕ್ರವಾರ ವನಿತೆಯರಿಗೆ ವಿಶೇಷ ದಿನ. ಈ ಹಿನ್ನೆಲೆಯಲ್ಲಿ ಮಹಿಳಾ ಭಕ್ತರೇ ಹೆಚ್ಚಾಗಿಯೇ ಕಂಡು ಬಂದರು. ಗೃಹಿಣಿಯರು, ಯುವತಿಯರು, ನವದಂಪತಿಗಳು, ವೃದ್ಧರು ತಮ್ಮ ಕುಟುಂಬ ಸಮೇತ ಇಲ್ಲಿಗೆ ಆಗಮಿಸಿದ್ದರು. ಜತೆಗೆ ಸಾವಿರಾರು ಭಕ್ತರು ಬೆಟ್ಟದ ಪಾದದಿಂದ ಮೆಟ್ಟಿಲು ಹತ್ತಿಕೊಂಡು ಬಂದು ದೇವರ ದರ್ಶನ ಪಡೆದರು. ಕೆಲ ಭಕ್ತರು ಕಾಲ್ನಡಿಗೆಯಿಂದ ಬಂದು ಹರಕೆ ತೀರಿಸಿದರು.
ಬೆಟ್ಟದಲ್ಲಿ ಭಕ್ತ ಸಮೂಹವೆಲ್ಲ ಅಲ್ಲಿಲ್ಲಿ ಚದುಗಿಹೋಗಿತ್ತು. ಜತೆಗೆ ಬ್ಯಾರಿಕೇಡ್‌ನ ಸರತಿ ಸಾಲು ಬಿಟ್ಟು ಬೇರೆ ಕಡೆಗೆ ತಿರುಗಾಡಲು ಯಾರಿಗೂ ಅವಕಾಶ ಇರಲಿಲ್ಲ. ಹಿಂದಿನಂತೆ ಮಹಿಷಾಸುರ ವಿಗ್ರಹದಿಂದ ದೇವಸ್ಥಾನದ ವರೆಗೆ, ಅಂಗಡಿಗಳ ಎದುರು ಜನರ ದಟ್ಟಣೆ ಇರಲಿಲ್ಲ.
ಖಾಸಗಿ ವಾಹನಗಳಿಗೆ ನಿರ್ಬಂಧ:
ಈ ಸಲವೂ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶ ನಿಷಿದ್ಧವಾಗಿತ್ತು. ಹೀಗಾಗಿ ಎಲ್ಲ ಖಾಸಗಿ ವಾಹನಗಳನ್ನು ಲಲಿತ್‌ಮಹಲ್ ಹೆಲಿಪ್ಯಾಡ್‌ನಲ್ಲಿ ನಿಲ್ಲಿಸಿ, ಅಲ್ಲಿಂದ ವ್ಯವಸ್ಥೆ ಮಾಡಲಾಗಿದ್ದ ಉಚಿತ ಕೆಎಸ್‌ಆರ್‌ಟಿಸಿ ಬಸ್‌ಗಳ ಮೂಲಕ ತೆರಳುವುದನ್ನು ಕಡ್ಡಾಯಗೊಳಿಸಲಾಗಿತ್ತು.
ನಾಡಿನ ಒಳಿತಿಗೆ ಪ್ರಾರ್ಥನೆ:
ನಾಡಿನ ಒಳಿತಿಗಾಗಿ ತಾಯಿ ಬಳಿ ಪ್ರಾರ್ಥನೆ ಮಾಡಲಾಗಿದ್ದು, ರಾಜ್ಯದಲ್ಲಿ ಉತ್ತಮ ಮಳೆಯಾಗಿ ಸಮೃದ್ಧಿ ಹೊಂದಲಿ. ಭಕ್ತರು ಆಷಾಢ ಮಾಸದಲ್ಲಿ ಶಕ್ತಿ ದೇವತೆಗಳ ಆರಾಧನೆ ಮಾಡಿ ತಮ್ಮ ಇಷ್ಟಾರ್ಥ ಈಡೇರಿಸಿಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸಿ ದೇವಿಯ ದರ್ಶನ ಪಡೆದುಕೊಳ್ಳಬಹುದು ಎಂದು ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಡಾ.ಶಶಿಶೇಖರ್ ದೀಕ್ಷಿತ್ ಹೇಳಿದರು.