ಆಷಾಢ ಶುಕ್ರವಾರ ಪೂಜೆಯ ಸಿದ್ಧತೆ ಕುರಿತು ಚಾಮುಂಡಿಬೆಟ್ಟದಲ್ಲಿ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಸಭೆ ನಡೆಸಿದರು. ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಹಾಗೂ ಇತರರು ಇದ್ದರು.
ಮೈಸೂರು: ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಜು.17 ರಿಂದ ಆ.7ರವರೆಗೆ ನಡೆಯುವ ಆಷಾಢ ಶುಕ್ರವಾರ ಪೂಜೆಯ ಸಂದರ್ಭ ಭಕ್ತಾಧಿಗಳಿಗೆ ಸುಗಮವಾಗಿ ದೇವಿಯ ದರ್ಶನ ದೊರೆಯುವಂತೆ ಮಾಡಲು ಅಗತ್ಯ ಕ್ರಮ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚಾಮುಂಡಿ ಬೆಟ್ಟದ ದಾಸೋಹ ಭವನದಲ್ಲಿ ಆಷಾಡ ಶುಕ್ರವಾರ ಸಂಬಂಧ ಆಯೊಜಿಸಿದ್ದ ಪೂರ್ವಬಾವಿ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜು.17 ರಂದು ಮೊದಲ ಆಷಾಢ ಶುಕ್ರವಾರ, ಜುಲೈ 24 ರಂದು 2ನೇ, 31 ರಂದು 3ನೇ ಹಾಗೂ ಆ.7 ರಂದು ಕಡೆಯ ಆಷಾಢ ಶುಕ್ರವಾರ ಪೂಜೆ ನಡೆಯಲಿದೆ. ಆ. 4 ರಂದು ಶ್ರೀ ಚಾಮುಂಡೇಶ್ವರಿ ವರ್ಧಂತಿ ನಡೆಯಲಿದೆ ಎಂದರು.
ಆಷಾಢ ಶುಕ್ರವಾರ ದಿನಗಳಂದು ಬೆಳಗ್ಗೆ 5.30 ರಿಂದ ದೇವಾಲಯ ಮುಚ್ಚುವವರೆಗೆ ದರ್ಶನದ ವ್ಯವಸ್ಥೆ ಕಲ್ಪಿಸಬೇಕು. ವಿಐಪಿ ಹಾಗೂ ವಿವಿಐಪಿಗಳ ಭೇಟಿಯಿಂದ ಸಾರ್ವಜನಿಕರಿಗೆ ದರ್ಶನಕ್ಕೆ ತೊಂದರೆ ಆಗುತ್ತಿದೆ ಎಂಬ ದೂರುಗಳು ಇರುವ ಹಿನ್ನೆಲೆಯಲ್ಲಿ ವಿಐಪಿ ಹಾಗೂ ವಿವಿಐಪಿಗಳಿಗೆ ಬೆಳಗ್ಗೆ 5.30 ರಿಂದ ಬೆಳಗ್ಗೆ 9.30ರವರೆಗೆ ಮಾತ್ರ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಶ್ರೀ ಚಾಮುಂ ಡೇಶ್ವರಿ ವರ್ಧಂತಿ ಸಂದರ್ಭ ಬೆಳಗ್ಗೆ 8 ರಿಂದ ಸಾರ್ವಜನಿಕ ಭಕ್ತಾದಿಗಳಿಗೆ ದರ್ಶನದ ವ್ಯವಸ್ಥೆ ಮಾಡಲಾಗುವುದು ಎಂದರು.
ಚಾಮುಂಡಿ ಬೆಟ್ಟದಲ್ಲಿ ಪಾಸ್ಟಿಕ್ ಸಂಪೂರ್ಣ ನಿಷೇಧಿಸಲು ಸೂಚನೆ ನೀಡಲಾಗಿದೆ. ಡಸ್ಟ್‌ಬಿನ್ ವ್ಯವಸ್ಥೆ ಮಾಡಲಾಗುವುದು. ಸ್ವಚ್ಛತೆಗೆ ನಗರ ಪಾಲಿಕೆ ಪೌರ ಕಾರ್ಮಿಕರನ್ನು ನಿಯೋಜಿಸಲಾಗುವುದು. ಸಂಚಾರಿ ಶೌಚಗೃಹಗಳನ್ನು ವಾಹನ ಪಾರ್ಕಿಂಗ್ ಮತ್ತು ಚಾಮುಂಡಿ ಬೆಟ್ಟದ ಮೇಲೆ ಕಲ್ಪಿಸಲಾಗುವುದು. ಬೆಟ್ಟದಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ 6 ಬ್ಯಾಟರಿ ವಾಹನಗಳನ್ನು ಒದಗಿಸಲಾಗುವುದು ಎಂದು ಹೇಳಿದರು.
ಬೆಟ್ಟದಲ್ಲಿ ವಾಸಿಸುತ್ತಿರುವ ಸ್ಥಳೀಯರಿಗೆ ತೊಂದರೆ ಆಗದಂತೆ ಅವರ ಆಧಾರ್ ಕಾರ್ಡ್ ನೋಡಿ ಪ್ರವೇಶ ನೀಡಲು ಸೂಚನೆ ನೀಡಲಾಗಿದೆ. ಬೆಟ್ಟದಲ್ಲಿ ಇರುವ ನಮ್ಮ ಕ್ಲಿನಿಕ್‌ನಲ್ಲಿ ದಿನದ 24 ಗಂಟೆ ವೈದ್ಯರು ಹಾಗೂ ಸಿಬ್ಬಂದಿ ಇರುತ್ತಾರೆ. ದೇವಸ್ಥಾನದ ಬಳಿಯಲ್ಲಿ 3 ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗುವುದು. ಸೆಸ್ಕ್ ವತಿಯಿಂದ ಪಾರ್ಕಿಂಗ್ ಸ್ಥಳ ಹಾಗೂ ಬೆಟ್ಟಕ್ಕೆ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಸೂಚಿಸಲಾಗಿದೆ ಎಂದರು.
ಆಷಾಢ ಮಾಸದಲ್ಲಿ ಚಾಮುಂಡಿಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ಅಗತ್ಯ ಬಿಗಿ ಬಂದೋಬಸ್ತ್ ಕಲ್ಪಿಸಲು ಸೂಚನೆ ನೀಡಲಾಗಿದೆ. ಎಲ್ಲಿಯೂ ಅಹಿತಕರ ಘಟನೆಗೆ ಆಸ್ಪದ ನೀಡಬಾರದು. ಕಲ್ತುಳಿತದಂತಹ ಪ್ರಕರಣಗಳು ನಡೆಯದಂತೆ ಎಚ್ಚರ ವಹಿಸಲು ನಿರ್ದೇಶನ ನೀಡಲಾಗಿದೆ. ಅಗತ್ಯ ಇರುವ ಕಡೆಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಲು ಸೂಚಿಸಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಯುಕೇಶ್ ಕುಮಾರ್, ನಗರ ಪಾಲಿಕೆ ಆಯುಕ್ತ ಶೇಕ್ ತನ್ವೀರ್ ಆಸಿಫ್ ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ರೂಪಾ, ಚಾಮುಂಡೇಶ್ವರಿ ದೇವಾಲಯದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ಹಾಗೂ ಇತರರು ಇದ್ದರು.
ಆಷಾಢ ಮಾಸದ ಶುಕ್ರವಾರ, ಶನಿವಾರ ಹಾಗೂ ಭಾನುವಾರ ದಿನಗಳಂದು ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನಗಳ ಸಂಚಾರ ಸಂಪೂರ್ಣ ನಿರ್ಬಂಧಿಸಲಾಗಿದೆ. ಸಾರ್ವಜನಿಕರು ತಮ್ಮ ವಾಹನಗಳನ್ನು ಲಲಿತಮಹಲ್ ಹೆಲಿಪ್ಯಾಡ್‌ನಲ್ಲಿ ನಿಲ್ಲಿಸಿ ಅಲ್ಲಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬೆಟ್ಟಕ್ಕೆ ಆಗಮಿಸಬೇಕು. ಲಿಲಿತಮಹಲ್ ಹೆಲಿಪ್ಯಾಡ್‌ನಲ್ಲಿ ಭಕ್ತಾದಿಗಳಿಗೆ ಚಪ್ಪಲಿ ಬಿಡಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ, ಬಿಸಿಲು ಮತ್ತು ಮಳೆಯಿಂದ ರಕ್ಷಣೆಗೋಸ್ಕರ ಜರ್ಮನ್ ಟೆಂಟ್ ವ್ಯವಸ್ಥೆ ಮಾಡಲಾಗಿದೆ. ವಿಐಪಿ ಹಾಗೂ ವಿವಿಐಪಿಗಳ ವಾಹನ ಚಾಮುಂಡಿಬೆಟ್ಟದ ಮಹಿಷಾಸುರ ಪ್ರತಿಮೆವರೆಗೆ ತೆರಳಲು ಅವಕಾಶ ಮಾಡಿಕೊಡಲಾಗುವುದು. ಅಲ್ಲಿಂದ ಬ್ಯಾಟರಿ ಚಾಲಿತ ವಾಹನದಲ್ಲಿ ಅವರನ್ನು ಕರೆದೊಯ್ಯಲಾಗುವುದು ಎಂದು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಆಷಾಢ ಶುಕ್ರವಾರ ಸಂದರ್ಭ ದೇವಿಯ ದರ್ಶನಕ್ಕೆ ಯಾವುದೇ ರೀತಿಯ ಪಾಸ್‌ಗಳನ್ನು ನೀಡಲಾಗುವುದಿಲ್ಲ. ಧರ್ಮದರ್ಶನ ಹಾಗೂ 2000 ರೂ ಟಿಕೆಟ್ ವ್ಯವಸ್ಥೆ ವಾಡಲಾಗಿದೆ. ಕಳೆದ ಬಾರಿ 300 ರೂ. ಟಿಕೆಟ್ ಇತ್ತು. ಆದರೆ, ಈ ಟಿಕೆಟ್ ಪಡೆದವರು ಅಂತಿಮವಾಗಿ ಧರ್ಮದರ್ಶನ ಕ್ಯೂಗೆ ಬಂದು ಸೇರುತ್ತಿದ್ದ ಹಿನ್ನೆಲೆಯಲ್ಲಿ ಅವರಿಗೆ ಯಾವುದೇ ಪ್ರಯೋಜನವಾಗುತ್ತಿರಲಿಲ್ಲ ಎಂಬ ಕಾರಣಕ್ಕೆ ಈ ಟಿಕೆಟ್‌ಅನ್ನು ರದ್ದು ಪಡಿಸಿ ಕೇವಲ 2 ಸಾವಿರ ರೂ.ಟಿಕೆಟ್ ಮಾತ್ರ ಉಳಿಸಿಕೊಳ್ಳಲಾಗಿದೆ.
2 ಸಾವಿರ ರೂ.ಮೊತ್ತದ ಟಿಕೆಟ್‌ಅನ್ನು ಲಲಿತ್ ಮಹಲ್ ಪ್ಯಾಲೇಸ್ ಮೈದಾನದಲ್ಲೇ ನೀಡಲಾಗುವುದು. ಅಲ್ಲದೆ, ಬೆಟ್ಟ ಹತ್ತಿ ಬರುವ ಭಕ್ತಾದಿಗಳು ದೇವಾಲಯದ ಬಳಿ ಪಡೆದುಕೊಳ್ಳಬಹುದು. 2 ಸಾವಿರ ರೂ ಮೌಲ್ಯದ ಟಿಕೆಟ್ ಪಡೆದವರನ್ನು ಹಾಗೂ ಧರ್ಮ ದರ್ಶನ ಪಡೆಂುುವ ಭಕ್ತರನ್ನು ನಿಲ್ದಾಣದಿಂದಲೇ ಪ್ರತ್ಯೇಕವಾದ ಬಸ್‌ಗಳಲ್ಲಿ ಕರೆ ತರಲಾಗುತ್ತದೆ. ಇವರಿಗೆ ಪ್ರತ್ಯೇಕ ಸಾಲುಗಳನ್ನು ನಿರ್ಮಿಸಲಾ ಗುವುದು. 2 ಸಾವಿರ ಟಿಕೆಟ್ ಪಡೆದವರಿಗೆ ದೇವಿಯ ಫೋಟೋ, ಕುಡಿಯುವ ನೀರಿನ ಬಾಟಲ್, 2ಲಾಡು, ಕುಂಕುಮ ಪ್ರಸಾದ ನೀಡಲಾಗುವುದು ಎಂದರು.