ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಎಂ.ಉಮಾದೇವಿ, ಪಿ.ಎಸ್.ಸಂಧ್ಯಾ, ಜಿ.ಎಸ್.ಸೀಮಾ, ಭಾಗ್ಯಮ್ಮ, ಕೋಮಲಾ, ಮಣಿಲಾ, ಸುಧಾ, ಮಂಜುಳಾ, ಸುನೀತಾ, ಲಕ್ಷ್ಮೀ, ಲೀಲಾವತಿ ಇತರರು ಇದ್ದರು.
- ಕಾರ್ಯಕರ್ತೆಗೆ 500-1000 ರೂ.ವರೆಗೆ ಪ್ರೊತ್ಸಾಹಧನ ಕಡಿತವಾಗಲಿದೆ
- ಕೇಂದ್ರದ ಪ್ರೊತ್ಸಾಹಧನ ಆಶಾ ಕಾರ್ಯಕರ್ತೆಯರು ಕೆಲಸ ಮಾಡಿದಷ್ಟು ಬರುತ್ತಿಲ್ಲ
ಮೈಸೂರು: ಆಶಾ ಕಾರ್ಯಕರ್ತೆಯರಿಗೆ ಬಾಕಿ ಇರುವ 3, 4 ತಿಂಗಳ ಕೇಂದ್ರ ಸರ್ಕಾರದ ಪ್ರೋತ್ಸಾಹಧನ, 1, 2 ತಿಂಗಳ ಗೌರವಧನವನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಮೈಸೂರು ಜಿಲ್ಲಾ ಸಮಿತಿಯಿಂದ (ಎಐಯುಟಿಯುಸಿ) ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ವಿವಿಧ ಆಶಾ ಸೇವೆಗಳನ್ನು ಆಶಾ ನಿಧಿ ತಂತ್ರಾಂಶದಲ್ಲಿ ನಿಷ್ಕ್ರಿಯಗೊಳಿಸುವುದರಿಂದ ಪ್ರತಿ ಕಾರ್ಯಕರ್ತೆಗೆ 500-1000 ರೂ.ವರೆಗೆ ಪ್ರೊತ್ಸಾಹಧನ ಕಡಿತವಾಗಲಿದೆ. ಈ ಸೇವೆಗಳನ್ನು ಮುಂದುವರಿಸಬೇಕು, ರಾಜ್ಯಾದ್ಯಂತ ಕೇಂದ್ರದ ಪ್ರೊತ್ಸಾಹಧನ ಆಶಾ ಕಾರ್ಯಕರ್ತೆಯರು ಕೆಲಸ ಮಾಡಿದಷ್ಟು ಬರುತ್ತಿಲ್ಲ. ಈ ಸಮಸ್ಯೆ ಬಗೆಹರಿಸಿ, ಆಶಾಗಳಿಗೆ ಕೂಡಲೇ ಬಾಕಿ ಇರುವ ಪ್ರೋತ್ಸಾಹಧನ ನೀಡಬೇಕು ಎಂದು ಆಗ್ರಹಿಸಿದರು.
ಬಾಕಿ ಇರುವ ವಿವಿಧ ಕಾಂಪೋನೆಂಟ್‌ಗಳ ಹಣ ಬಿಡುಗಡೆ ಆಗಿಲ್ಲ. ಹಲವಾರು ಆಶಾ ಕಾರ್ಯಕರ್ತೆಯರ ಗೌರವ ಧನ, ಪ್ರೋತ್ಸಾಹ ಧನ ಹಲವಾರು ತಿಂಗಳು ಕಡಿತ ಮಾಡಲಾಗಿದೆ. ಬಾಕಿ ಇರುವ ಕಾರ್ಯಕರ್ತೆಯರಿಗೆ ಹಣ ಬಿಡುಗಡೆ ಮಾಡಬೇಕು. ಸಮಸ್ತ ಆ್ಯಪ್ ಮೂಲಕ ದಾಖಲಾತಿ ಮಾಡಿಸುವುದನ್ನು ಕೈಬಿಡಬೇಕು ಎಂದು ಕೋರಿದರು.
ಮೌಲ್ಯಮಾಪನ ಹೆಸರಲ್ಲಿ ಆಶಾಗಳಿಗೆ ಆಗುತ್ತಿರುವ ಶೋಷಣೆ ನಿಲ್ಲಿಸಬೇಕು. ನಿವೃತ್ತಿ ಆಗಿರುವ ಆಶಾಗಳಿಗೆ ಇರುವ ಇಡಿಗಂಟು ನೀಡಬೇಕು, ಆಶಾ ಸುಗಮಕಾರರನ್ನು ಸೂಕ್ತ ವೇತನದೊಂದಿಗೆ ಮುಂದುವರಿಸಬೇಕು, ಮೇಲಿನ ಸಮಸ್ಯೆಗಳ ಪರಿಹಾರಕ್ಕೆ ಕೂಡಲೇ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ಕರೆಯಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಘೋಷಿಸಿದ ಕೇಂದ್ರ ಸರ್ಕಾರದ ಪ್ರೋತ್ಸಾಹಧನ ಹಾಗೂ ರಾಜ್ಯ ಸರ್ಕಾರದ ಗೌರವಧನ ಒಟ್ಟಿಗೆ ಸೇರಿಸಿ ಕನಿಷ್ಠ ಮಾಸಿಕ 10,000 ಗೌರವಧನ ನೀಡಲು ಸೂಕ್ತಕ್ರಮ ಕೈಗೊಳ್ಳಬೇಕು. 2025 ಮಾರ್ಚ್ ಬಜೆಟ್‌ನಲ್ಲಿ ರಾಜ್ಯ ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ ಹೆಚ್ಚಳ ಮಾಡಿರುವಂತೆ ಎಲ್ಲ ಆಶಾ ಕಾರ್ಯಕರ್ತೆಯರಿಗೂ 1,000 ಹೆಚ್ಚಳ ಮಾಡುವುದಾಗಿ ಭರವಸೆ ನೀಡಿದಂತೆ ಹೆಚ್ಚಳ ಮಾಡಬೇಕೆಂಬುದು ಸೇರಿ ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಉಮಾದೇವಿ, ಜಿಲ್ಲಾ ಗೌರವಾಧ್ಯಕ್ಷ ಪಿ.ಎಸ್.ಸಂಧ್ಯಾ, ಸಂಘದ ನಗರ ಸಮಿತಿಯ ಸಲಹೆಗಾರ ಜಿ.ಎಸ್.ಸೀಮಾ, ಸಂಘದ ಜಿಲ್ಲಾಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷ ಕೋಮಲಾ, ಮಣಿಲಾ, ಸುಧಾ, ಮಂಜುಳಾ, ಸುನೀತಾ, ಲಕ್ಷ್ಮೀ, ಲೀಲಾವತಿ ಇತರರು ಇದ್ದರು.