ರಕ್ತದಾನವು ಅನೇಕ ಜೀವಗಳನ್ನು ಉಳಿಸುವ ಮಹತ್ವದ ಮಾನವೀಯ ಸೇವೆಯಾಗಿದ್ದು, ಆರೋಗ್ಯವಂತರು ನಿಯಮಿತವಾಗಿ ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಕೆ.ಆರ್. ಆಸ್ಪತ್ರೆಯ ರಕ್ತನಿಧಿ ಕೇಂದ್ರದ ರಕ್ತನಿಧಿ ಅಧಿಕಾರಿ ಡಾ. ಕುಸುಮಾ ಕರೆ ನೀಡಿದರು.
ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಶಾಖೆಯ ಮಾರ್ಗಸೂಚಿಯಂತೆ, ಭಾರತೀಯ ವೈದ್ಯಕೀಯ ಸಂಘ, ಮೈಸೂರು ಶಾಖೆ, ರೋಟರಿ ಮೈಸೂರು ರಾಯಲ್ ಕ್ಲಬ್, ಗೋಕುಲಂ ಹಾಗೂ ಕೆ.ಆರ್. ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಗುರುವಾರ ಕೆ.ಆರ್. ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ಆಯೋಜಿಸಿದ್ದ ರಕ್ತದಾನ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಕ್ತದಾನದ ಅಗತ್ಯತೆ, ಮಹತ್ವ ಹಾಗೂ ರಕ್ತ ಸಂಗ್ರಹಣೆಯ ಪ್ರಾಮುಖ್ಯತೆಯನ್ನು ವಿವರಿಸಿದ ಅವರು, ಅಗತ್ಯವಿರುವವರಿಗೆ ಸಕಾಲದಲ್ಲಿ ರಕ್ತ ಲಭ್ಯವಾಗಲು ನಿರಂತರ ರಕ್ತ ಸಂಗ್ರಹಣೆ ಅಗತ್ಯವಾಗಿದೆ. ಆರೋಗ್ಯವಂತರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಕಾರ್ಯದಲ್ಲಿ ಕೈಜೋಡಿಸಬೇಕು ಎಂದರು.
ಭಾರತೀಯ ವೈದ್ಯಕೀಯ ಸಂಘ, ಮೈಸೂರು ಶಾಖೆಯ ಅಧ್ಯಕ್ಷ ಡಾ.ಆರ್.ಡಿ.ಮಂಜುನಾಥ್, ಸಂಘದ ಗೌರವ ಕಾರ್ಯದರ್ಶಿ ಡಾ.ಜಿ.ಎಂ.ವಾಮದೇವ್, ಸಂಘದ ಸಹ ಕಾರ್ಯದರ್ಶಿ ಡಾ.ರಾಜಪುರ ಪರಶುರಾಮ್ ಇತರರಿದ್ದರು.