ಮೈಸೂರು ನಗರದ ಕಲಾಮಂದಿರ ಆವರಣದ ಕಿರುರಂಗ ಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಕಲಾ ತರಬೇತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕಿ ನಿರ್ಮಲಾ ಮಠಪತಿ ಉದ್ಘಾಟಿಸಿದರು. ಎಂ.ಕೆ.ಮಲ್ಲೇಶ್, ಕೆ.ಎಸ್. ಸರಸ್ವತಿ, ಮೋಹನ್ ಕುಮಾರಿ, ಪುಟ್ಟಣಯ್ಯ ಹಾಗೂ ಇತರರು ಇದ್ದರು.
ನಮ್ಮ ನಾಡಿನಲ್ಲಿ ವಿವಿಧ ರೀತಿಯ ಕಲೆಗಳು ಬೆಳೆದು ಬಂದಿದ್ದು, ಕಲೆಗಳೇ ನಮ್ಮ ಸಂಸ್ಕೃತಿಯನ್ನು ಸಾರುವ ಒಂದು ಮುಖ್ಯ ಮಾರ್ಗ ವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕಿ ನಿರ್ಮಲಾ ಮಠಪತಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಕಲಾಮಂದಿರ ಆವರಣದ ಕಿರುರಂಗ ಮಂದಿರ ದಲ್ಲಿ ಗುರುವಾರ ಆಯೋಜಿಸಿದ್ದ ಕಲಾ ತರಬೇತಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳಿಗೆ ಪಠ್ಯತೇರ ಚಟುವಟಿಕೆಯಾಗಿ ಆಯೋಜಿಸಿರುವ ಈ ಒಂದು ಕಾರ್ಯಕ್ರಮ ಒಂದು ವಿಭಿನ್ನ ಪ್ರಯತ್ನವಾಗಿದೆ ಎಂದರು.
ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆಯಡಿ ಕಲಾತರಬೇತಿ ಶಿಬಿರವನ್ನು ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿದ್ಯಾರ್ಥಿ ನಿಲಯಗಳಲ್ಲಿ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಮತ್ತು ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಕಲಾಸಕ್ತಿ ಇರುವ ಪ್ರತಿಭಾನ್ವಿತ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಜಾನಪದ ನೃತ್ಯ, ಸುಗಮ ಸಂಗೀತ, ಶಾಸ್ತ್ರ ಸಂಗೀತ, ವಾದ್ಯ ಸಂಗೀತ ಹಾಗೂ ರಂಗಗೀತೆ ಇವುಗಳಲ್ಲಿ ಯಾವುದಾದರೂ ಒಂದು ಪ್ರಕಾರದಲ್ಲಿ ತರಬೇತಿ ನೀಡಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಮಾನ್ವಯಾಧಿಕಾರಿ ಎಂ.ಕೆ.ಮಲ್ಲೇಶ್, ನಿಯಲ ಪಾಲಕರಾದ ಕೆ.ಎಸ್. ಸರಸ್ವತಿ, ಮೋಹನ್ ಕುಮಾರಿ, ಹಿರಿಯ ರಂಗಕರ್ಮಿ ಪುಟ್ಟಣಯ್ಯ, ಕಂಸಾಳೆ ಕಲಾವಿದ ಬಿ.ಎಸ್. ಮೋಹನ್ ಕುಮಾರ್ ಹಾಗೂ ಇತರರು ಇದ್ದರು.