ಅಮ್ಮ ವಸುಂಧರೆ ಟ್ರಸ್ಟ್ ವತಿಯಿಂದ ಶನಿವಾರ ಏರ್ಪಡಿಸಿದ್ದ ಜಾನಪದ ಕಲೋತ್ಸವದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಮ್ಮರಾಮಚಂದ್ರ, ಪುಟ್ಟರಾಜು, ಪ್ರೊ.ನಂಜಯ್ಯ ಹೊಂಗನೂರು ಇದ್ದರು. 
ಮೈಸೂರು

ಕಲಾವಿದರಿಂದ ಜಾನಪದ ಸಾಹಿತ್ಯ, ಸಂಸ್ಕೃತಿ ಉಳಿವು

ಮೈಸೂರು: ಜನಪದ ಮೂಲ ಪರಂಪರೆಯ ತಾಯಿಬೇರು ಎಂದು ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಹೇಳಿದರು.
ಅಮ್ಮ ವಸುಂಧರೆ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ 15ನೇ ವರ್ಷದ ಅಮ್ಮ ವಸುಂಧರೆ ಜಾನಪದ ಕಲೋತ್ಸವ ಸಮಾರಂಭದಲ್ಲಿ ಅಮ್ಮ ವಸುಂಧರೆ ನೆಲದ ನಕ್ಷತ್ರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಕಲಾವಿದರು, ಗಾಯಕರಿಂದ ಜಾನಪದ ಸಾಹಿತ್ಯ, ಸಂಸ್ಕೃತಿ ಉಳಿದಿದೆ. ಸಮೃದ್ಧವಾಗಿ ಬೆಳೆದಿದೆ ಎಂದು ಹೇಳಿದರು.
ಮೈಸೂರು ವಿವಿ ಪ್ರಸಾರಾಂಗ ನಿರ್ದೇಶಕ ಪ್ರೊ.ನಂಜಯ್ಯ ಹೊಂಗನೂರು ಮಾತನಾಡಿ, ನಾಡಿನೆಲ್ಲೆಡೆ ಜನಪದ ಕಲೆ ಮತ್ತು ಕಲಾವಿದರ ಹಬ್ಬ ನಡೆಯಬೇಕು. ಆ ಮೂಲಕ ಜನಪದ ಕಲೆ ಉಳಿಯಬೇಕು. ಮುಂದಿನ ಪೀಳಿಗೆಯ ಮಕ್ಕಳಿಗೆ ಜನಪದ ಸೊಗಡನ್ನು ತಿಳಿಸಬೇಕು. ಶಾಸ್ತ್ರೀಯ ಸಂಗೀತ, ಸಿನಿಮಾ ಗಾಯಕರಿಗೆ ಸಿಗುವ ಗೌರವ, ಸಂಭಾವನೆ ಜಾನಪದ ಕಲಾವಿದರಿಗೆ ಸಿಗಬೇಕು. ದಸರಾ, ಸಾಂಸ್ಕೃತಿಕ ಉತ್ಸವಗಳಲ್ಲಿ ಸ್ಥಳೀಯ ಅಥವಾ ಜಾನಪದ ಕಲಾವಿದರಿಗೆ ಆದ್ಯತೆ ಕೊಡಬೇಕು. ಪದ್ಮಶ್ರೀ ಸುಕ್ರೀ ಬೊಮ್ಮೇಗೌಡ, ತಮಟೆ ಕಲಾವಿದ ಮುನಿವೆಂಕಟಪ್ಪ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿ ಮಾದರಿಯಾಗಿದ್ದಾರೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ಕಲೆ ಎಂದೂ ಶಾಶ್ವತ, ಕಲಾವಿದರು ನಾಡಿನ ಆಸ್ತಿ. ಅವರನ್ನು ಪ್ರೋತ್ಸಾಹಿಸಲೆಂದೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇರುವುದು. ಇಲಾಖೆಯು ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ತನ್ನ ಬೆನ್ನನ್ನು ತಟ್ಟಿಕೊಳ್ಳುತ್ತಿದೆ ಎಂದರು.
ಗಾಯಕ ಅಮ್ಮರಾಮಚಂದ್ರ, ಅಮ್ಮ ವಸುಂಧರೆ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಟ್ರಸ್ಟ್ ಅಧ್ಯಕ್ಷ ಪುಟ್ಟರಾಜು ಅಧ್ಯಕ್ಷತೆ ವಹಿಸಿದ್ದರು. ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜ ಅರಸು ಜಾನಪದ ಕಲಾತಂಡಗಳಿಗೆ ಚಾಲನೆ ನೀಡಿದರು.
ಇದೇ ವೇಳೆ ಅಬಕಾರಿ ಇಲಾಖೆ ಉಪ ಆಯುಕ್ತ ಕೆ.ಎಂ.ಸುರೇಶ್ ಕುಮಾರ್-ನೆಲದ ನಕ್ಷತ್ರ, ಹುಣಸೂರು ಬಿಇಒ ಎಸ್.ಪಿ. ಮಹದೇವ- ಅಮ್ಮ ವಸುಂಧರೆ ಬಂಗಾರದ ಮನುಷ್ಯ, ಹಿರಿಯ ಪತ್ರಕರ್ತ ಅಂಶಿಪ್ರಸನ್ನಕುಮಾರ್-ಅಮ್ಮ ವಸುಂಧರೆ ಸಾಹಿತ್ಯ ರತ್ನ, ಡಾ.ಬಿ. ಮುಖೇಶ್-ಅಮ್ಮ ವಸುಂಧರೆ ಸೇವಾರತ್ನ, ಕೆರೆಹುಂಡಿ ಶೋಭಾ ಶಿವರಾಜು ಡಿ- ಅಮ್ಮ ವಸುಂಧರೆ ಸೇವಾಭೂಷಣ, ಹಿರಿಯ ಕಲಾವಿದ ಶಿವಕುಮಾರ್, ಸಾಮಾಜಿಕ ಹೋರಾಟಗಾರ ಅಹಿಂದ ಜವರಪ್ಪ, ಎಂ.ಪ್ರದೀಪ್ ಕುಮಾರ್-ಅವರಿಗೆ ಅಮ್ಮ ವಸುಂಧರೆ ಕಲಾಪೋಷಕ ಪ್ರಶಸ್ತಿಗಳನ್ನು ಪದ್ಮಶ್ರೀ ಪುರಸ್ಕೃತ ಸೋಮಣ್ಣ ಪ್ರದಾನ ಮಾಡಿದರು.
ಆರ್.ಕೃಷ್ಣಮೂರ್ತಿ- ಅಮ್ಮ ವಸುಂಧರೆ ದ್ವಿಕಂಠ ಗಾನರತ್ನ, ಪನ್ನಗ ವಿಜಯಕುಮಾರ್, ಮಂಡ್ಯ ಮಂಜುಳಾ, ಪದ್ಮಶ್ರೀ ಕೊಡಗಳ್ಳಿ, ಸೋಬಾನೆ ಚಿಕ್ಕತಾಯಮ್ಮ, ಕಂಸಾಳೆ ಮಹದೇವ, ಎಚ್. ಮರಿಸ್ವಾಮಿ - ಅಮ್ಮ ವಸುಂಧರೆ ಜನಪದ ಗಾನರತ್ನ, ಮೂರ್ತಿ ಜೆ.ಮುಡಿಗುಂಡ, ಜಾಕಿ ಪ್ರತಾಪ್-ಅಮ್ಮ ವಸುಂಧರೆ ಕಲಾರತ್ನ, ವಿದ್ವಾನ್ ಡಿ.ವಿ.ರವೀಶ್, ಮಹದೇವ ಕಾಳಿರಾಮೇಗೌಡ, ಪತ್ರಕರ್ತ ಬಿಳಿಗಿರಿ ಜಯಪುರ, ಧನಗಳ್ಳಿ ಗ್ರಾಪಂ ಸದಸ್ಯ ಬಿ ಬಸವರಾಜು ಅವರಿಗೆ ಅಮ್ಮ ವಸುಂಧರೆ ಸಾಂಸ್ಕೃತಿಕ ಗೌರವ ಸಲ್ಲಿಸಲಾಯಿತು.