ಜೆಎಸ್‌ಎಸ್ ಮಹಾವಿದ್ಯಾಪೀಠ, ಜೆಎಸ್‌ಎಸ್ ಕಲಾಮಂಟಪ ಸಹಯೋಗದೊಂದಿಗೆ ಸರಸ್ವತಿಪುರಂ ಜೆಎಸ್‌ಎಸ್ ಶಾಲೆ ಆವರಣದಲ್ಲಿ ಆರಂಭಗೊಂಡ ಎಳೆಯರ ಮೇಳಕ್ಕೆ ಪ್ರಕಾಶ್‌ಶೆಣೈ ಚಾಲನೆ ನೀಡಿದರು. ಎಂ. ಶಿವಮಾದಪ್ಪ, ಚಂದ್ರಶೇಖರಾಚಾರ್, ಎಂ.ಗುರುಸ್ವಾಮಿ, ಬಿ.ಪ್ರಶಾಂತ್, ಮಂಜುನಾಥ, ಶಕುಂತಲಾ ಹೆಗಡೆ, ಬಿ.ಜೀವನ್‌ಕುಮಾರ್, ಪಿ.ಜಿ.ಸವಿತಾ ಇತರರು ಇದ್ದರು.
- ಹಿಂದೆ ರಜೆ ಬಂದರೆ ಅಜ್ಜ, ಅಜ್ಜಿ ಮನೆಗೆ ಹೋಗಿ ಅಲ್ಲಿಯ ವಾತಾವರಣದಲ್ಲಿ ಮಕ್ಕಳು ಬೆಳೆಯುತ್ತಿದ್ದರು
- ನಗರ, ಪಟ್ಟಣದ ಮಕ್ಕಳಿಗೆ ಅಂತಹ ಅವಕಾಶ ಇಲ್ಲವಾಗಿ, ಮೊಬೈಲ್ ಗೇಮ್, ಟಿವಿ, ಕಂಪ್ಯೂಟರ್ ಎಂದು ಮುಳುಗಿ ಹೋಗುತ್ತಿದ್ದಾರೆ
ಮೈಸೂರು:ಬೇಸಿಗೆ ರಜೆಯಲ್ಲಿ ಶಿಬಿರಗಳ ಮೂಲಕ ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸಲು ಎಳೆಯರ ಮೇಳ ಒಂದು ಉತ್ತಮ ವೇದಿಕೆ ಎಂದು ರಂಗಭೂಮಿ ಕಲಾವಿದ ಪ್ರಕಾಶ್‌ಶೆಣೈ ಹೇಳಿದರು.
ಸರಸ್ವತಿಪುರಂ ಜೆಎಸ್‌ಎಸ್ ಮಹಿಳಾ ವಸತಿ ನಿಲಯಗಳ ಸಮುಚ್ಛಯದ ಶ್ರೀಮಂತ್ರ ಮಹರ್ಷಿ ಸಭಾಂಗಣದಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠ, ಜೆಎಸ್‌ಎಸ್ ಕಲಾಮಂಟಪ ಸಹಯೋಗದೊಂದಿಗೆ ಏ.24ರವರೆಗೆ ಆಯೋಜಿಸಿರುವ ‘ಎಳೆಯರ ಮೇಳ-2026’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಿಂದೆ ರಜೆ ಬಂದರೆ ಅಜ್ಜ, ಅಜ್ಜಿ ಮನೆಗೆ ಹೋಗಿ ಅಲ್ಲಿಯ ವಾತಾವರಣದಲ್ಲಿ ಮಕ್ಕಳು ಬೆಳೆಯುತ್ತಿದ್ದರು. ಇದರಿಂದ ಪ್ರಕೃತಿ, ಉತ್ತಮ ಆಹಾರ ದೊರೆತು ಮಕ್ಕಳು ಚಟುವಟಿಕೆಯಿಂದ ಇರುತ್ತಿದ್ದರು. ಆದರೆ ಈಗ ನಗರ, ಪಟ್ಟಣದ ಮಕ್ಕಳಿಗೆ ಅಂತಹ ಅವಕಾಶ ಇಲ್ಲವಾಗಿದೆ. ಮೊಬೈಲ್ ಗೇಮ್, ಟಿವಿ, ಕಂಪ್ಯೂಟರ್ ಎಂದು ಮುಳುಗಿ ಹೋಗುತ್ತಿದ್ದಾರೆ. ಇದರಿಂದ ಅವರ ಸೃಜನಶೀಲತೆ, ದೈಹಿಕ ಚಟುವಟಿಕೆ, ಪ್ರತಿಭೆ ಎಲ್ಲವೂ ಮರೆಯಾಗುತ್ತಿದೆ ಎಂದು ಹೇಳಿದರು.
ಬೇಸಿಗೆ ರಜೆಯಲ್ಲಿ ಶಿಬಿರಗಳ ಮೂಲಕ ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸಲು ಎಳೆಯರ ಮೇಳ ಒಂದು ಉತ್ತಮ ವೇದಿಕೆ. ಈ ಶಿಬಿರದಲ್ಲಿ ಪಾಲ್ಗೊಂಡಿರುವ ಎಲ್ಲ ಮಕ್ಕಳು ಒಂದಿಲ್ಲೊಂದು ವಿಷಯದಲ್ಲಿ ಪ್ರತಿಭಾವಂತರೆ. ಆದರೆ, ಅದನ್ನು ಪ್ರದರ್ಶಿಸಲು ಸೂಕ್ತ ಅವಕಾಶ ಇಲ್ಲದ ಕಾರಣ ಅವರ ಪ್ರತಿಭೆ ಹೊರಬಂದಿಲ್ಲ. ಮಕ್ಕಳಲ್ಲಿನ ಪ್ರತಿಭೆ ಹೊರತರುವ ಸೂಕ್ತ ವೇದಿಕೆ ಇದಾಗಿರುವ ಕಾರಣ ಮಕ್ಕಳು ಇಂತಹ ಶಿಬಿರಗಳಲ್ಲಿ ಪಾಲ್ಗೊಳ್ಳುವುದು ಅವಶ್ಯ ಎಂದರು.
ಈ ಮೇಳದಲ್ಲಿ ರಂಗದಾಟಗಳು, ಜಾನಪದ ಹಾಡು, ನೃತ್ಯ, ನಾಟಕ, ಚಿಂತಕರೊಂದಿಗೆ ಸಂವಾದ, ಕವಿತೆ ರಚನೆ, ಮಕ್ಕಳ ಚಲನಚಿತ್ರ ಪ್ರದರ್ಶನ, ಮುಖವಾಡ ತಯಾರಿಕೆ, ಜೇಡಿಮಣ್ಣಿನ ಕಲೆ, ಕರಕುಶಲ ವಸ್ತು ನಿರ್ಮಾಣ, ಪವಾಡ ರಹಸ್ಯ ಬಯಲು, ಪರಿಸರ ವೀಕ್ಷಣೆ, ಮಕ್ಕಳ ಸಂತೆ ಹಾಗೂ ಇತರ ಕ್ರಿಯಾಶೀಲ ಚಟುವಟಿಕೆ ಪರಿಚಯಿಸುತ್ತಿರುವುದು ಉತ್ತಮ ಬೆಳವಣಿಗೆ ಹಾಗೂ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ನಾಂದಿಯಾಗಲಿದೆ ಎಂದು ವೆುಚ್ಚುಗೆ ವ್ಯಕ್ತಪಡಿಸಿದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಪ್ರಭಾರ ನಿರ್ದೇಶಕ ಎಂ.ಶಿವಮಾದಪ್ಪ, ಎಳೆಯರ ಮೇಳದ ಸಂಚಾಲಕರಾದ ಚಂದ್ರಶೇಖರಾಚಾರ್, ಎಂ.ಗುರುಸ್ವಾಮಿ, ಬಿ.ಪ್ರಶಾಂತ್, ಮಂಜುನಾಥ(ಕಾಚಕ್ಕಿ), ಶಕುಂತಲಾ ಹೆಗಡೆ, ಬಿ.ಜೀವನ್‌ಕುಮಾರ್, ಪಿ.ಜಿ.ಸವಿತಾ ಇತರರು ಇದ್ದರು.