ಮಹಿಳಾ ವಿಭಾಗದ ಕ್ರಾಸ್ ಕಂಟ್ರಿ ಓಟದ ವಿಜೇತರಾದ ಸಾನಿಯಾ ಶೆಟ್ಟಿ(ಎಡ), ವಿ.ವೀಕ್ಷಾ(ಮಧ್ಯ), ವೈಷ್ಣವಿ ಪದಸಲಗಿ(ಬಲ)
- ರಾಜ್ಯಮಟ್ಟದ 28ನೇ ಕ್ರಾಸ್ ಕಂಟ್ರಿ ಸ್ಪರ್ಧೆ
- ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಆಯೋಜನೆ
ಮೈಸೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಮೈಸೂರು ಪ್ರಾದೇಶಿಕ ಕೇಂದ್ರದಿಂದ ಮಂಗಳವಾರ ಆಯೋಜಿಸಿದ್ದ ರಾಜ್ಯಮಟ್ಟದ 28ನೇ ದೂರ ಓಟದ(10 ಕಿ.ಮೀ. ಕ್ರಾಸ್ ಕಂಟ್ರಿ ) ಸ್ಪರ್ಧೆಯಲ್ಲಿ ಶಿವಮೊಗ್ಗದ ಜೆಎನ್‌ಎನ್‌ಸಿಇ ಕಾಲೇಜಿನ ಜಿ.ಎಂ.ಅರ್ಶಿವ್ ಗುಜ್ಜರ್ ಮತ್ತು ಮಂಗಳೂರಿನ ಸಹ್ಯಾದ್ರಿ ಕಾಲೇಜಿನ ವಿ.ವೀಕ್ಷಾ ಕ್ರಮವಾಗಿ ಪುರುಷ, ಮಹಿಳಾ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ರಾಜ್ಯದ ವಿವಿಧ ಇಂಜಿನಿಯರಿಂಗ್ ಕಾಲೇಜುಗಳ ಕ್ರೀಡಾಕೂಟ ಪಾಲ್ಗೊಂಡಿದ್ದ ಈ ಸ್ಪರ್ಧೆಯಲ್ಲಿ ಉಭಯ ಕ್ರೀಡಾಪಟುಗಳು ಮೊದಲ ಸ್ಥಾನ ಪಡೆಯುವ ಮೂಲಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಪುರುಷರ ವಿಭಾಗದಲ್ಲಿ ತೀವ್ರ ಪೈಪೋಟಿಯಿಂದ ಕೂಡಿದ್ದ ಸ್ಪರ್ಧೆಯಲ್ಲಿ ಅರ್ಶಿವ್ ಗುಜ್ಜರ್ (37:48:95 ಸಮಯ) ಎಲ್ಲರಿಗಿಂತ ಮೊದಲು ಗುರಿ ಮುಟ್ಟಿ ಪ್ರಶಸ್ತಿಯನ್ನು ಬಾಚಿಕೊಂಡರು. ಬೆಂಗಳೂರಿನ ಬೊಮ್ಮನಹಳ್ಳಿಯ ಆಕ್ಸ್‌ಫರ್ಡ್ ಇಂಜಿನಿಯರಿಂಗ್ ಕಾಲೇಜಿನ ಅಜಯ್‌ಕುಮಾರ್(38:32:41) ದ್ವಿತೀಯ, ಬೆಂಗಳೂರಿನ ದಯಾನಂದ ಸಾಗರ ಕಾಲೇಜಿನ ಆರ್.ವಿ.ಭವೇಶ್(38:53:18) ತೃತೀಯ ಸ್ಥಾನ ಪಡೆದುಕೊಂಡರು.
ಮಹಿಳಾ ವಿಭಾಗದಲ್ಲಿ 52 ನಿಮಿಷ, 05 ಸೆಕೆಂಡ್‌ನಲ್ಲಿ ವಿ.ವೀಕ್ಷಾ ಗುರಿ ತಲುಪಿ ಪ್ರಶಸ್ತಿ ಯನ್ನು
ತಮ್ಮದಾಗಿಸಿಕೊಂಡರು. ಸಹ್ಯಾದ್ರಿ ಕಾಲೇಜಿನ ಸಾನಿಯಾ ಶೆಟ್ಟಿ(53:49:13) ದ್ವಿತೀಯ, ವೈಷ್ಣವಿ ಪದಸಲಗಿ ತೃತೀಯ ಸ್ಥಾನ ಪಡೆದುಕೊಂಡರು.
ಸುಳ್ಯದ ಕಾಲೇಜು ಪಾರಮ್ಯ:
ಪುರುಷ ತಂಡದ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೆವಿಜಿ ಇಂಜಿನಿಯರಿಂಗ್ ಕಾಲೇಜು ಚಾಂಪಿಯನ್ ಆಗಿದ್ದು, ಮಂಗಳೂರಿನ ಸಹ್ಯಾದ್ರಿ ಕಾಲೇಜು ದ್ವಿತೀಯ, ಮೈಸೂರಿನ ಎಸ್‌ಜೆಸಿಇ ಕಾಲೇಜು ತೃತೀಯ ಸ್ಥಾನ ಪಡೆದುಕೊಂಡಿದೆ.
ನಗರದ ಸಾತಗಳ್ಳಿಯಲ್ಲಿರುವ ಪ್ರಾದೇಶಿಕ ಕೇಂದ್ರದಲ್ಲಿ ಆಯೋಜಿಸಿದ್ದ ಈ ಕ್ರಾಸ್ ಕಂಟ್ರಿ ಓಟದ ಸ್ಪರ್ಧೆಗೆ ಖೋಖೋ ಆಟಗಾರ್ತಿ ಬಿ.ಚೈತ್ರಾ ಚಾಲನೆ ನೀಡಿದರು. ವಿಟಿಯು ಮೈಸೂರು ಪ್ರಾದೇಶಿಕ ನಿರ್ದೇಶಕ ಡಾ.ಎಚ್.ಎಂ.ನಂಜುಂಡಸ್ವಾಮಿ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಎಚ್.ಸುದಿನಾ, ಕ್ರೀಡಾ ಸಂಚಾಲಕ ಡಾ.ಪ್ರಸನ್ನಕುಮಾರ್ ಇನ್ನಿತರರಿದ್ದರು.