ಖಾಜಾಪೀರ್ 
ಮೈಸೂರು

ಸ್ನೇಹಿತನನ್ನೇ ಕೊಲೆ ಮಾಡಿದವರ ಬಂಧನ

ನಾಗೇಶ ಎಸ್
ಹುಣಸೂರು: ನಗರದ ವಿಶ್ವೇಶ್ವರಯ್ಯ ವೃತ್ತ(ಮಂಟಿ ಸರ್ಕಲ್) ಬಳಿ ಗುರುವಾರ ತಡರಾತ್ರಿ ಕ್ಲುಲ್ಲಕ ಕಾರಣಕ್ಕೆ ಸ್ನೇಹಿತನನ್ನೇ ಕೊಲೆ ಮಾಡಲಾಗಿದೆ.
ನಗರದ ನಿಜಾಂ ಮೊಹಲ್ಲಾದ ನಿವಾಸಿ ದಾದಾಪೀರ್ ಪುತ್ರ ಖಾಜಾಪೀರ್(44) ಕೊಲೆಯಾಗಿದ್ದು, ಈತನ ಸ್ನೇಹಿತರಾದ ನಗರದ ಮುಸ್ಲಿಂಬ್ಲಾಕ್‌ನ ಜಾವಿದ್ ಹಾಗೂ ವಿ.ಪಿ.ಬೋರೆ ನಿವಾಸಿ ಇನಾಯತ್ ಆರೋಪಿಗಳು.
ಆಟೋ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಖಾಜಾಪೀರ್, ಆರೋಪಿಗಳಾದ ಜಾವಿದ್ ಹಾಗೂ ಇನಾಯತ್ ಕುಡಿತದ ದಾಸರಾಗಿದ್ದರು. ಆರೋಪಿ ಜಾವಿದ್ ವ್ಯಕ್ತಿಯೊಬ್ಬರಿಂದ 15 ಸಾವಿರ ರೂ. ಸಾಲ ಪಡೆದಿದ್ದ. ಮರುಪಾವತಿಗೆ ಒತ್ತಾಯಿಸುತ್ತಿದ್ದರೂ ಹಿಂತಿರುಗಿಸಲು ವಿಫಲನಾಗಿದ್ದರಿಂದ ಸಾಲ ನೀಡಿದ ವ್ಯಕ್ತಿ ಜಾವಿದ್ ಬೈಕನ್ನು ವಶಕ್ಕೆ ಪಡೆದು, ಸಾಲ ತೀರಿಸಿ ವಾಪಸ್ ಪಡೆಯುವಂತೆ ಸೂಚಿಸಿದ್ದರು.
ಬೈಕ್ ಕಿತ್ತುಕೊಳ್ಳಲು ಕೊಲೆಯಾದ ಖಾಜಾಪೀರ್ ಕಾರಣವಾಗಿದ್ದಾನೆ ಎಂದು ಗುರುವಾರ ಮಧ್ಯರಾತ್ರಿ ಮಂಟಿ ಸರ್ಕಲ್ ಬಳಿಯಲ್ಲಿ ಮೂವರ ನಡುವೆ ಜಗಳವಾಗಿದೆ. ಕುಡಿದ ಮತ್ತಿನಲ್ಲಿ ಮರದ ರಿಪೀಸ್ ಪಟ್ಟಿಯಿಂದ ಬಡಿದಾಡಿಕೊಂಡಿದ್ದು, ತೀವ್ರ ಪೆಟ್ಟು ಬಿದ್ದಿದ್ದ ಖಾಜಾಪೀರ್ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೃತ್ಯ ನಡೆದ ಸ್ಥಳಕ್ಕೆ ಎಸ್.ಪಿ.ವಿಷ್ಣುವರ್ಧನ್, ಡಿವೈಎಸ್‌ಪಿ ರಾಜು, ಇನ್‌ಸ್ಪೆಕ್ಟರ್ ಸಂತೋಷ್ ಕಶ್ಯಪ್ ಭೇಟಿ ನೀಡಿ ಪರಿಶೀಲಿಸಿದರು. ಅರೋಪಿಗಳನ್ನು ನಗರದ ಎಪಿಎಂಸಿ ಮಾರುಕಟ್ಟೆ ಬಳಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.