ಬೆಂಗಳೂರಿನ ವಿಧಾನಸೌದದ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅರ್ಜುನಹಳ್ಳಿ ಗ್ರಾಮ ಪಂಚಾಯಿತಿಅಧ್ಯಕ್ಷ ಕೃಷ್ಣಮೂರ್ತಿ ಹಾಗೂ ಪಿಡಿಒ ಜಿ.ಟಿ. ಸಂತೋಷ್ ಅವರು ಪ್ರಿಯಾಂಕ್ ಖರ್ಗೆ ಅವರಿಂದ ಗಾಂಧಿ ಗ್ರಾಮ ಪುರಸ್ಕಾರ, ಪಾರಿತೋಷಕ ಪದಕ ಹಾಗೂ 5 ಲಕ್ಷ ರೂ. ಚೆಕ್ ಸ್ವೀಕರಿಸಿದರು.
- ನರೇಗಾ ಸೇರಿದಂತೆ ವಿವಿಧ ಯೋಜನೆ ಅನುಷ್ಠಾನದಲ್ಲಿ ಉತ್ತಮ ಸಾಧನೆ
ಕೆ.ಆರ್.ನಗರ : ಡಿಜಿಟಲ್ ಗ್ರಂಥಾಲಯ,ಸ್ವಚ್ಛತೆ, ನೈರ್ಮಲ್ಯ, ಕಂದಾಯ ವಸೂಲಿ, ಸಮರ್ಪಕ ಕುಡಿಯುವ ನೀರು ಸರಬರಾಜು ಇನ್ನಿತರ ವಿಭಾಗಗಳಲ್ಲಿ ವಿಶೇಷ ಸಾಧನೆ ಮಾಡಿದ ಗ್ರಾಮ ಪಂಚಾಯಿತಿಗಳಿಗೆ ನೀಡುವ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾದ ತಾಲೂಕಿನ ಅರ್ಜುನಹಳ್ಳಿ ಗ್ರಾಮ ಪಂಚಾಯಿತಿಗೆ ಬೆಂಗಳೂರಿನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತೆ ಡಾ.ಅರುಂಧತಿ ಚಂದ್ರಶೇಖರ್, ಇ.ಗವರ್ನನ್ಸ್ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣಮೂರ್ತಿ ಮತ್ತು ಪಿಡಿಒ ಜಿ.ಟಿ.ಸಂತೋಷ್ ಅವರನ್ನು ಪಾರಿತೋಷಕ ಪದಕ ಹಾಗೂ 5 ಲಕ್ಷ ರೂ. ಚೆಕ್ ನೀಡಿ ಅಭಿನಂದಿಸಿದರು.
ನರೇಗಾ ಯೋಜನೆ ಅನುಷ್ಠಾನದಲ್ಲಿ ಉತ್ತಮ ಸಾಧನೆ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆಯಾದ ಅನುದಾನದ ಸಮರ್ಪಕ ಬಳಕೆ, ಸಿಸಿ ಕ್ಯಾಮರಾ ಅಳವಡಿಕೆ, ಸೋಲಾರ್ ಆಧರಿತ ವಿದ್ಯುತ್ ಬಳಕೆ, ಕೂಸಿನ ಮನೆ, ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತೆ, ನರೇಗಾ ಯೋಜನೆಯ ಫಲಾನುಭವಿ ಕುಟುಂಬದ ಎಲ್ಲ ಸದಸ್ಯರಿಗೂ ಬ್ಯಾಂಕ್ ಖಾತೆ, ಖಾತೆಗೆ ಆಧಾರ್ ಜೋಡಣೆ ಸೇರಿದಂತೆ ಹಲವು ಮಾನದಂಡಗಳ ಆಧಾರದ ಮೇಲೆ ಅರ್ಜುನಹಳ್ಳಿ ಗ್ರಾಮ ಪಂಚಾಯಿತಿ 2024-25ನೇ ಸಾಲಿನ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗುವ ಮೂಲಕ ಇತರ ಗ್ರಾಪಂಗಳಿಗೆ ಮಾದರಿಯಾಗಿದೆ.
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ, 15ನೇ ಹಣಕಾಸು, ರಾಜ್ಯ ಹಣಕಾಸು ಯೋಜನೆ ಮತ್ತು ಇತರ ಯೋಜನೆಗಳ ಅನುದಾನಗಳನ್ನು ಗ್ರಾಮ ಪಂಚಾಯಿತಿಗಳು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಈ ಮೂಲಕ ಗ್ರಾಮೀಣ ಜನರ ಜೀವನವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು. ನಿಯಮಿತವಾಗಿ ಸಾಮಾನ್ಯ ಸಭೆ, ವಾರ್ಡ್ ಸಭೆ ಮತ್ತು ಗ್ರಾಮ ಸಭೆಗಳನ್ನು ನಡೆಸುವ ಮೂಲಕ ಗ್ರಾಮೀಣ ಪ್ರದೇಶದ ನಾಗರಿಕರಿಗೆ ಅಗತ್ಯ ಮೂಲ ಸೌಕರ್ಯ ಮತ್ತು ಸೇವೆಗಳನ್ನು ಒದಗಿಸಿ ಸರ್ಕಾರದ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು. ಇದನ್ನು ಅರ್ಜುನಹಳ್ಳಿ ಗ್ರಾಪಂ ಸಮರ್ಪಕವಾಗಿ ನಿರ್ವಹಿ ಸಿರುವುದರಿಂದ ಹಾಗೂ ಪಾರದರ್ಶಕ ಆಡಳಿತ ಜಾರಿ ಗೊಳಿಸಿರುವುದರಿಂದ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.