ಹುಣಸೂರು ನಗರದ ಬೈಪಾಸ್ ರಸ್ತೆಯಲ್ಲಿರುವ ಸ್ಕೈ ಗೋಲ್ಡ್ ಅಂಡ್ ಡೈಮಂಡ್ ಮಳಿಗೆ. 
ಮೈಸೂರು

ಚಿನ್ನದಂಗಡಿ ದರೋಡೆಕೋರರು ಅಂದರ್?

ಶಿವಶಂಕರ್ ಎಂ. ಹೆಬ್ಬಳ್ಳ

ಪ್ರಮುಖ ಮುಖ್ಯಾಂಶಗಳು

  • ಹುಣಸೂರು ಪಟ್ಟಣದಲ್ಲಿ ಬೆಚ್ಚಿಬೀಳಿಸಿದ್ದ ಪ್ರಕರಣ
ಹುಣಸೂರು : ನಗರದ ಬೈಪಾಸ್ ರಸ್ತೆಯ ಚಿನ್ನಾಭರಣ ಮಳಿಗೆಯಲ್ಲಿ 20 ದಿನಗಳ ಹಿಂದೆ ನಡೆದಿದ್ದ ಕೋಟ್ಯಂತರ ರೂ.ಮೌಲ್ಯದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಿಹಾರದಲ್ಲಿ ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 
ಬಿಹಾರ ರಾಜ್ಯದ ಭಾಗಲ್ಪುರ ಜಿಲ್ಲೆಯ ಪಂಕಜ್ ಕುಮಾರ್ ಮತ್ತು ದರ್ಭಾಂಗ ಜಿಲ್ಲೆಯ ಹೃಷಿಕೇಶ್ ಸಿಂಗ್ ಬಂಧಿತರು. ಆರೋಪಿಗಳನ್ನು ಬಿಹಾರದ ಎಸ್ ಟಿಎಫ್ ತಂಡ ಮತ್ತು ಕರ್ನಾಟಕ ಪೊಲೀಸ್ ತಂಡದ ಸಹಯೋಗದಲ್ಲಿ ಬಂಧಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. 
ಬಂಧಿತರಿಂದ ಒಂದು ಚಿನ್ನದ ಸರ, ಒಂದು ಉಂಗುರ, ಒಂದು ಲಕ್ಷ ರೂ.ನಗದು, ಒಂದು ಮೋಟಾರ್ ಸೈಕಲ್ ಮತ್ತು ಒಂದು ಚಿನ್ನಾಭರಣ ಇಡುವ ಸ್ಟೋರೇಜ್ ಕೇಸ್ ವಶಕ್ಕೆ ಪಡೆಯಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ. 
16 ವಿವಿಧ ಪ್ರಕರಣಗಳು: ಆರೋಪಿ ಪಂಕಜ್ ಕುಮಾರ್ ಬಿಹಾರ ಪೊಲೀಸರಿಗೆ ಬೇಕಿದ್ದ ಮುಖ್ಯ ಆರೋಪಿಯಾಗಿದ್ದು, ಈತನ ಮೇಲೆ ಬಿಹಾರ, ಜಾರ್ಖಂಡ್, ಕರ್ನಾಟಕ ಮತ್ತು ರಾಜಾಸ್ತಾನ ರಾಜ್ಯದಲ್ಲಿ ಕೊಲೆಯತ್ನ, ಡಕಾಯಿತಿ, ದರೋಡೆ ಮತ್ತು ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಒಟ್ಟು 16 ಪ್ರಕರಣಗಳು ಇವೆ. ಮತ್ತೊಬ್ಬ ಆರೋಪಿ ಹೃಷಿಕೇಶ್ ಸಿಂಗ್ ವಿರುದ್ಧ ಇಂತಹುದೇ ಪ್ರಕರಣಗಳಿಗೆ ಸಂಬಂಧಿಸಿದೆ ನಾಲ್ಕು ಕ್ರಿಮಿನಲ್ ಕೇಸ್‌ಗಳೊಂದಿಗೆ ಇಂತಹುದೇ ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ಇವೆ ಎಂದು ಇಲಾಖೆ ಮೂಲಗಳು ತಿಳಿಸಿವೆ. ಬಿಹಾರ ಮತ್ತು ಕರ್ನಾಟಕ ಪೊಲೀಸರು ಬಿಹಾರದ ಭಾಗಲ್ಪುರ ಮತ್ತು ದರ್ಭಾಂಗ ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಶುಕ್ರವಾರ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಸಿಕ್ಕುಬಿದ್ದಿದ್ದಾರೆ ಎಂದು ತಿಳಿದುಬಂದಿದೆ. 
6 ನಿಮಿಷಕ್ಕೆ 10 ಕೋಟಿ ಲೂಟಿ !
ಡಿ.28ರ ಭಾನುವಾರ ಮೈಸೂರು ಜಿಲ್ಲೆಯ ಜನರಿಗೆ  ಗಾಬರಿ ಹುಟ್ಟಿಸಿದ ದಿನ. ಹುಣಸೂರು ನಗರದ ಬೈಪಾಸ್ ರಸ್ತೆಯಿಂದ ಬಸ್‌ನಿಲ್ದಾಣಕ್ಕೆ ಪ್ರವೇಶಿಸುವ ರಸ್ತೆಯ ಮುಂಭಾಗವಿರುವ ಸ್ಕೈ ಗೋಲ್ಡ್ ಆಂಡ್ ಡೈಮಂಡ್ ಜ್ಯುವೆಲರಿ ಮಳಿಗೆಯಲ್ಲಿ ಅಂದು ಮಧ್ಯಾಹ್ನ 2ಗಂಟೆ 4 ನಿಮಿಷಕ್ಕೆ ಬೈಕಿನಲ್ಲಿ ಬಂದು ಮಳಿಗೆ ಒಳನುಗ್ಗಿದ 5 ಜನರಿದ್ದ  ದರೋಡೆಕೋರರು 2 ಗಂಟೆ 9 ನಿಮಿಷಕ್ಕೆ(ಕೇವಲ 6 ನಿಮಿಷಗಳಲ್ಲಿ) 10 ಕೋಟಿ ರೂ.ಮೌಲ್ಯದ 8 ಕೆಜಿ ತೂಕದ ಬೆಲೆಬಾಳುವ ಚಿನ್ನ ಮತ್ತು ವಜ್ರದ ಆಭರಣಗಳನ್ನು ಬ್ಯಾಗಿನಲ್ಲಿ ಸಲೀಸಾಗಿ ತುಂಬಿಕೊಂಡು ಟಾಟಾ ಹೇಳಿದ್ದರು. ಮಳಿಗೆ ಸಿಬ್ಬಂದಿ ಏನಾಗುತ್ತಿದೆ ಎಂದು ತಿಳಿಯುವುದರೊಳಗೆ ಐವರು ಜಾಗ ಖಾಲಿ ಮಾಡಿದ್ದರು. ದರೋಡೆ ವೇಳೆ ಖದೀಮರನ್ನು ತಡೆಯಲು ಯತ್ನಿಸಿದ ಮಳಿಗೆಯ ಮ್ಯಾನೇಜರ್‌ಗೆ ಧಮಕಿ ಹಾಕಿ ಗಾಳಿಯಲ್ಲಿ ಗುಂಡು ಹಾರಿಸಿ ಪರಾರಿಯಾಗಿದ್ದರು. ಸಿನೀಮೀಯ ರೀತಿಯಲ್ಲಿ ನಡೆದಿದ್ದ ಘಟನೆಗೆ ಜನರು ಬೆಚ್ಚಿಬಿದ್ದಿದ್ದರು. ನಗರಠಾಣೆಯಲ್ಲಿ ಪ್ರಕರಣ ದಾಖಲಾದ ನಂತರ ಇಬ್ಬರು ಡಿವೈಎಸ್‌ಪಿ ಸೇರಿದಂತೆ 100ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವಿವಿಧ ರೀತಿಯಲ್ಲಿ ತನಿಖೆ ಕಾರ್ಯ ನಡೆಸುತ್ತಿದ್ದರು. 5 ತಂಡಗಳನ್ನು ರಚಿಸಿ ತನಿಖೆ ಮುಂದುವರೆದಿತ್ತು. ನಗರದಾದ್ಯಂತ ಪರಿಸ್ಥಿತಿಯ ಅವಲೋಕನ ನಡಸಿದ್ದ ಖದೀಮರ ತಂಡ  ಬೈಪಾಸ್‌ರಸ್ತೆಯಲ್ಲಿ ವೀಕೆಂಡ್ ದಿನಗಳಲಿ ವಾಹನಗಳ ದಟ್ಟಣೆ, ಶೋರೂಂಗೆ ಗ್ರಾಹಕರು ಸಹಜವಾಗಿ ಬರುವ ವೇಳೆ ಎಲ್ಲವನ್ನೂ ಗಮನಿಸಿಕೊಂಡು ದರೋಡೆ ನಡೆಸಿದ್ದರು. ಘಟನೆ ನಡೆದು 20 ದಿನಗಳೇ ಕಳೆದರೂ ದರೋಡೆಕೋರರ ಸುಳಿವು ಸಿಕ್ಕದಿರುವುದು ನಾಗರಿಕರನ್ನು ಆತಂಕಕ್ಕೆ ಈಡು ಮಾಡಿತ್ತು. ಆದರೆ ಇದೀಗ ವಿವಿಧ ಮೂಲಗಳಿಂದ ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಿರುವ ಮಾಹಿತಿಗಳು ತಿಳಿದುಬಂದಿದ್ದು, ನಾಗರಿಕರು ನಿಟ್ಟುಸಿರುಬಿಡುವಂತಾಗಿದೆ.