ಹುಣಸೂರು ತಾಲೂಕು ಆಡಳಿತದ ವತಿಯಿಂದ ನಗರದ ಅರಸು ಪುತ್ಥಳಿ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಜಿ.ಡಿ.ಹರೀಶ್‌ಗೌಡ ಅರಸು ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು. ಪೌರಾಯುಕ್ತೆ ಎಂ.ಮಾನಸಾ, ಬಸವಲಿಂಗಯ್ಯ, ದೊಡ್ಡ ಹೆಜ್ಜೂರು ರಮೇಶ್ ಇತರರು ಇದ್ದರು.
ಹುಣಸೂರು : ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ತಮ್ಮ ಕ್ರಾಂತಿಕಾರಿ ಕಾರ್ಯಕ್ರಮಗಳ ಮೂಲಕ ಬಡಜನರ ಬಾಳಿಗೆ ಬೆಳಕಾಗಿದ್ದರು ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಅಭಿಪ್ರಾಯಪಟ್ಟರು.
ದೇವರಾಜ ಅರಸು 44ನೇ ಪುಣ್ಯಸ್ಮರಣೆ ಅಂಗವಾಗಿ ತಾಲೂಕು ಆಡಳಿತದ ವತಿಯಿಂದ ನಗರದ ಎಪಿಎಂಸಿ ವೃತ್ತದಲ್ಲಿರುವ ಅರಸು ಪುತ್ಥಳಿ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅರಸು ಪುತ್ಥಳಿಗೆ ಗೌರವ ಸಮರ್ಪಿಸಿ ಮಾತನಾಡಿದರು. ಹುಣಸೂರಿನ ಶಾಸಕರಾಗಿ, ರಾಜ್ಯದ ಮುಖ್ಯಮಂತ್ರಿಯಾಗಿ ಸುದೀರ್ಘ ಆಳ್ವಿಕೆ ನಡೆಸಿದ್ದಲ್ಲದೇ ತಮ್ಮ ಅಧಿಕಾರ ಅವಧಿಯಲ್ಲಿ ಇಡೀ ದೇಶವೇ ಗಮನಿಸುವಂಥ ಆದರ್ಶಪ್ರಾಯ ಮತ್ತು ಕ್ರಾಂತಿಕಾರಕ ಕಾರ್ಯಕ್ರಮಗಳನ್ನು ನೀಡಿದರು ಎಂದು ಸ್ಮರಿಸಿದರು.
ಕೇಂದ್ರ ಸರ್ಕಾರ ಜಾರಿಗೆ ತಂದ 20 ಅಂಶಗಳ ಕಾರ್ಯಕ್ರಮವನ್ನು ಯಶಸ್ವಿಯಾಗು ಜಾರಿಗೊಳಿಸಿದರು. ಉಳುವವನೇ ಭೂಮಿ ಒಡೆಯ ಕಾರ್ಯಕ್ರಮವನ್ನು ಗೊಂದಲಗಳಿಗೆ ಅವಕಾಶವಿಲ್ಲದಂತೆ ಜಾರಿಗೊಳಿಸುವ ಮೂಲಕ ಲಕ್ಷಾಂತರ ಮಂದಿ ಬಡ, ದಲಿತರ ಬಾಳಿಗೆ ಇಂದಿಗೂ ಬೆಳಕಾಗಿದ್ದಾರೆ. ಇಂತಹ ಮಹನೀಯರು ಹುಣಸೂರಿನ ನೆಲದ ಪುತ್ರ ಎನ್ನುವುದೇ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವೆಂದರು.
ತಹಸೀಲ್ದಾರ್ ಜೆ.ಮಂಜುನಾಥ್ ಮಾತನಾಡಿ, ದೇವರಾಜ ಅರಸು ಆಲೋಚನೆ ಮತ್ತು ಯೋಜನೆ ಎರಡೂ ಅತ್ಯಂತ ವೈಶಿಷ್ಟ್ಯಪೂರ್ಣವಾಗಿದ್ದವು. ಮುಖ್ಯವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸುವ ಕಾರ್ಯ ಅರಸು ಕಾಲದಲ್ಲಾಯಿತು. ಜೀತಪದ್ಧತಿ, ಮಲಹೊರುವ ಪದ್ಧತಿ ನಿಷೇಧ ಯೋಜನೆ ಮುಂತಾದವೆಲ್ಲವೂ ಬಡವರು ಸ್ವಾಭಿಮಾನದಿಂದ ಬದುಕಲು ನೀಡಿದ ಮೆಟ್ಟಿಲುಗಳಾಗಿದ್ದವು ಎಂದರು. ಪೌರಾಯುಕ್ತೆ ಎಂ.ಮಾನಸಾ, ತಾ.ಪಂ.ಇಒ ಕೆ.ಹೊಂಗಯ್ಯ, ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಡಿ.ಕುಮಾರ್, ದಲಿತ ಮುಖಂಡ ನಿಂಗರಾಜ ಮಲ್ಲಾಡಿ ಮಾತನಾಡಿದರು. ಮುಖಂಡರಾದ ಬಸವಲಿಂಗಯ್ಯ, ನಗರಸಭೆ ಮಾಜಿ ಸದಸ್ಯ ದೊಡ್ಡಹೆಜ್ಜೂರು ರಮೇಶ್, ಫಜಲ್ ಉಲ್ಲಾ ಮತ್ತು ಅರಸು ಅಭಿಮಾನಿಗಳು ಹಾಜರಿದ್ದರು.