ದೊಡ್ಡನಗದ್ದೆ ಗ್ರಾಮದಲ್ಲಿ ತಲೆದೂರಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಗ್ರಾಮಸ್ಥರು ಶಾಸಕ ಎಂ.ಆರ್ ಮಂಜುನಾಥ್ ಅವರಲ್ಲಿ ಮನವಿ ಮಾಡಿದರು. ಮೈನಾ ಬಾಯಿ, ಪಾಪತ್ತಿಬಾಯಿ, ಮುತ್ತುನಾಯ್ಕ, ಐಯ್ಯನಾಯ್ಕ ಇತರರು ಇದ್ದರು.
ಹನೂರು ತಾಲೂಕಿನ ದೊಮ್ಮನಗದ್ದೆ ಗ್ರಾಮಸ್ಥರ ಅಹವಾಲು
ಹನೂರು: ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ತುಂಬ ಕಷ್ಟವನ್ನು ಅನುಭವಿಸುತ್ತಿದ್ದೇವೆ. ಆದ್ದರಿಂದ ಈ ಬಗ್ಗೆ ಗಮನಹರಿಸಿ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ತಾಲೂಕಿನ ದೊಮ್ಮನಗದ್ದೆ ಗ್ರಾಮಸ್ಥರು ಶಾಸಕ ಎಂ.ಆರ್ ಮಂಜುನಾಥ್ ಅವರಲ್ಲಿ ಮನವಿ ಮಾಡಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆಗೆ ಬುಧವಾರ ಖಾಲಿ ಬಿಂದಿಗೆಯೊಂದಿಗೆ ಮಹಿಳೆಯರು ಸೇರಿದಂತೆ ಆಗಮಿಸಿದ್ದ ಗ್ರಾಮಸ್ಥರು ಶಾಸಕರನ್ನು ಭೇಟಿಯಾಗಿ ಮಾತನಾಡಿ, ಗ್ರಾಮದ ತೋಟದ ಮನೆಗಳಲ್ಲಿ ಸುಮಾರು 40ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದೇವೆ. ಆದರೆ ಕಳೆದ 3 ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಬಿಂದಿಗೆಯನ್ನು ಹಿಡಿದು ಅಲೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಗ್ರಾಪಂ ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ತಿಳಿಸಲಾಗಿದೆ.
ಆದರೆ ಯಾವುದೇ ಕ್ರಮಕೈಗೊಂಡಿಲ್ಲ. ಇದರಿಂದ ನಿತ್ಯ ಕುಡಿಯುವ ನೀರಿನದ್ದೇ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು, ಪಡುಬಾರದ ಕಷ್ಟವನ್ನು ಪಡುವಂತಾಗಿದೆ. ಆದ್ದರಿಂದ ಈ ಬಗ್ಗೆ ಗಮನಹರಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು. ಈ ವೇಳೆ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕರು ಈ ಬಗ್ಗೆ ಅಗತ್ಯ ಕ್ರಮವಹಿಸಿ ಬೋರ್ ಕೊರೆಯುಸುವುದರ ಮೂಲಕ ನೀರಿನ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮೈನಾಬಾಯಿ, ಸಕ್ರೀಬಾಯಿ, ಪಾಪತ್ತಿಬಾಯಿ, ಪುಟ್ಟಿಬಾಯಿ, ಮುತ್ತುನಾಯ್ಕ, ಐಯ್ಯನಾಯ್ಕ ಹಾಗೂ ಇನ್ನಿತರರು ಇದ್ದರು.
ಚಿರತೆ ಹಾವಳಿ ತಡೆಗಟ್ಟಿ: ಇದಕ್ಕೂ ಮುನ್ನಾ ತಾಲೂಕಿನ ಎಲ್‌ಪಿಎಸ್ ಪ್ರಾಜೆಕ್ಟ್ ಗ್ರಾಮದ ನಿವಾಸಿಗಳು ಶಾಸಕರನ್ನು ಭೇಟಿಯಾಗಿ ಮಾತನಾಡಿ, ಕುರಟ್ಟಿ ಹೊಸೂರು, ಎಲ್‌ಪಿಎಸ್ ಪ್ರಾಜೆಕ್ಸ್ ಹಾಗೂ ಈ ಭಾಗದ ಇನ್ನಿತರ ಗ್ರಾಮಗಳಲ್ಲಿ ಕಳೆದ ನಾಲ್ಕೈದು ತಿಂಗಳಿನಿಂದ ಚಿರತೆಯೊಂದರ ಹಾವಳಿ ಹೆಚ್ಚಾಗಿದ್ದು, ರಾತ್ರಿ ವೇಳೆ ಕೊಟ್ಟಿಗೆಗಳಿಗೆ ಲಗ್ಗೆ ಇಟ್ಟು ಮೇಕೆಯನ್ನು ಬಲಿ ಪಡೆಯುತ್ತಲೇ ಇದೆ. ಇದರಿಂದ ಆತಂಕದ ಜತೆಗೆ ತುಂಬ ತೊಂದರೆಯನ್ನು ಅನುಭವಿಸುತ್ತಿದ್ದೇವೆ. ಚಿರತೆ ಸೆರೆ ಹಿಡಿಯುವಂತೆ ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ತಿಳಿಸಿದ್ದರೂ ಕಿಂಚಿತ್ತೂ ಗಮನಹರಿಸುತ್ತಿಲ್ಲ. ಆದ್ದರಿಂದ ಈ ಬಗ್ಗೆ ಗಮನಹರಿಸಿ ಚಿರತೆ ಹಾವಳಿಯನ್ನು ತಡೆಗಟ್ಟುವಂತೆ ಮನವಿ ಮಾಡಿದರು. ಶಾಸಕರು ಅರಣ್ಯ ಇಲಾಖೆಯ ಅಧಿಕಾರಿಗೆ ಬೋನ್ ಇರಿಸುವುದರ ಮೂಲಕ ಚಿರತೆ ಸೆರೆ ಹಿಡಿಯಲು ಅಗತ್ಯ ಕ್ರಮವಹಿಸಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಕುಮಾರ್, ಕೃಷ್ಣ, ಶಾಂತರಾಜು, ರಾಮು ಹಾಗೂ ಇನ್ನಿತರರು ಇದ್ದರು.