ತಿ.ನರಸೀಪುರ ಇನ್‌ಸ್ಪೆಕ್ಟರ್ ಧನಂಜಯ್ ಅವರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ ಮೈಸೂರು ಕನ್ನಡ ವೇದಿಕೆಯಿಂದ ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಸಾರ್ವಜನಿಕರು ಹಾಗೂ ಜಿಲ್ಲಾಡಳಿತದ ನಡುವೆ ಸೇತುವೆಯಾಗಿ ಕೆಲಸ ಮಾಡಬೇಕಾದ ಪೊಲೀಸ್ ಅಧಿಕಾರಿ ಶಾಂತಿ ಸಭೆಯಲ್ಲಿ ದುರಹಂಕಾರ ಹಾಗೂ ಅಸಭ್ಯವಾಗಿ ವರ್ತಿಸಿ ಅಶಾಂತಿಗೆ ಕಾರಣರಾಗಿದ್ದಾರೆ. ಸಾರ್ವಜನಿಕರಿಗೆ ಧಮ್ಕಿ ಹಾಕುವ ರೀತಿಯಲ್ಲಿ ಎಚ್ಚರಿಕೆ ನೀಡಿರುವುದು ಖಂಡನೀಯ ಎಂದು ಕಿಡಿಕಾರಿದರು.
ಈ ಅಧಿಕಾರಿ ಈ ಹಿಂದೆ ಬೆಂಗಳೂರಿನಲ್ಲಿ ಉಪನಿರೀಕ್ಷಕರಾಗಿದ್ದಾಗ ದೆಹಲಿ ಮೂಲದ ಯುವತಿ ಮೇಲೆ ಅನುಚಿತವಾಗಿ ವರ್ತಿಸಿದ ಆಪಾದನೆ ಹೊತ್ತಿದ್ದರು. ಇಂತಹವರಿಗೆ ಬಡ್ತಿ ನೀಡಿ ಮುಂದುವರಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ. ಸರ್ಕಾರ ತಕ್ಷಣವೇ ಈ ಅಧಿಕಾರಿಯ ಹಿನ್ನೆಲೆ ಮರು ಪರಿಶೀಲಿಸಿ, ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಠಾಣೆಗೆ ದೂರು ನೀಡಲು ಬರುವ ನಾಗರಿಕರು ಹಾಗೂ ವಿಶೇಷವಾಗಿ ಮಹಿಳೆಯರು ಭಯವಿಲ್ಲದೆ ಬಂದು ಹೋಗುವಂತಹ ಸುರಕ್ಷಿತ ವಾತಾವರಣವನ್ನು ಸರ್ಕಾರ ನಿರ್ಮಿಸಬೇಕು. ತಪ್ಪಿತಸ್ಥ ಅಧಿಕಾರಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಘಟನೆಯ ಕುರಿತು ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ಪದಾಧಿಕಾರಿಗಳಾದ ನಾಲಾಬೀದಿ ರವಿ, ಬೋಗಾದಿ ಸಿದ್ದೇಗೌಡ, ಗುರುಬಸಪ್ಪ, ಎಲ್‌ಐಸಿ ಸಿದ್ದಪ್ಪ, ಹೊನಕೆರೆ ಸ್ವಾಮಿ, ಪ್ಯಾಲೆಸ್ ಬಾಬು, ಕಾವೇರಮ್ಮ, ಮಾಲಿನಿ, ಮನೋಹರ್ ಇತರರಿದ್ದರು.