ಬಂಡಿಪಾಳ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(
- ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ದೊರಕಿಸಿಕೊಡುತ್ತಿರುವ ಮಾರುಕಟ್ಟೆ
ಮೈಸೂರು ಜಿಲ್ಲೆಯ ಕೃಷಿ ಆರ್ಥಿಕತೆಯ ಬೆನ್ನೆಲುಬಾಗಿರುವ ಬಂಡಿಪಾಳ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ) ಸಾವಿರಾರು ರೈತರು, ವ್ಯಾಪಾರಿಗಳು ಮತ್ತು ಕೂಲಿ ಕಾರ್ಮಿಕರ ಬದುಕಿಗೆ ಆಸರೆಯಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಉತ್ಪಾದನೆಯಾಗುವ ಕೃಷಿ ಉತ್ಪನ್ನಗಳು ನ್ಯಾಯಯುತ ಬೆಲೆಗೆ ಮಾರಾಟವಾಗುವ ವೇದಿಕೆಯನ್ನು ಎಪಿಎಂಸಿ ಒದಗಿಸುತ್ತಿದ್ದು, ರೈತರ ಆದಾಯ ವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿದೆ. ನೂರಾರು ಕೂಲಿ ಕಾರ್ಮಿಕರ ಜೀವನಕ್ಕೆ ದಾರಿ ತೋರಿಸಿದೆ.
ರೈತರ ಬೆವರಿನ ಬೆಲೆಗೆ ನ್ಯಾಯ ದೊರಕಿಸುವುದು, ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವುದು ಹಾಗೂ ಗ್ರಾಮೀಣ ಆರ್ಥಿಕತೆಗೆ ಚೈತನ್ಯ ತುಂಬುವುದು ಎಪಿಎಂಸಿಯ ಪ್ರಮುಖ ಧ್ಯೇಯವಾಗಿದೆ. ಕೃಷಿ ಕ್ಷೇತ್ರದ ಬೆಳವಣಿಗೆಗೆ ಪೂರಕವಾದ ಮೂಲಸೌಕರ್ಯ, ಪಾರದರ್ಶಕ ವಹಿವಾಟು ಮತ್ತು ಹೊಸ ಯೋಜನೆಗಳ ಮೂಲಕ ಮೈಸೂರು ಎಪಿಎಂಸಿ ರಾಜ್ಯದ ಮಾದರಿ ಕೃಷಿ ಮಾರುಕಟ್ಟೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.
ಮೈಸೂರು ತಾಲೂಕು ಮಾತ್ರವಲ್ಲದೆ ನಂಜನಗೂಡು, ತಿ.ನರಸೀಪುರ, ಹುಣಸೂರು, ಎಚ್.ಡಿ.ಕೋಟೆ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳ ರೈತರಿಗೆ ಎಪಿಎಂಸಿ ವರವಾಗಿದೆ. ವಿವಿಧ ಬಗೆಯ ಧಾನ್ಯ, ತರಕಾರಿ, ಹಣ್ಣು, ತೆಂಗು, ರೇಷ್ಮೆ ಸೇರಿದಂತೆ ಎಲ್ಲ ರೀತಿಯ ಕೃಷಿ ಉತ್ಪನ್ನಗಳ ವಹಿವಾಟಿಗೆ ಮಾರುಕಟ್ಟೆ ಖ್ಯಾತಿಯಾಗಿದೆ.
ಕೇವಲ ವ್ಯಾಪಾರದ ಕೇಂದ್ರವಾಗಿರದೆ, ಮೈಸೂರು ಎಪಿಎಂಸಿ ಆಧುನಿಕ ಕೃಷಿ ಮಾರುಕಟ್ಟೆಯಾಗಿ ರೂಪುಗೊಳ್ಳುತ್ತಿದೆ. ರೈತರಿಗೆ ಅನುಕೂಲವಾಗುವಂತೆ ಗೋದಾಮು, ತೂಕ ಮಾಪನ ವ್ಯವಸ್ಥೆ, ಹರಾಜು ವೇದಿಕೆ ಹಾಗೂ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಪರಿಸರ ಸಂರಕ್ಷಣೆಯಲ್ಲೂ ಹೊಸ ಹೆಜ್ಜೆ ಇಟ್ಟಿದೆ. ಮಾರುಕಟ್ಟೆಯಲ್ಲಿ ಪ್ರತಿದಿನ ಉತ್ಪತ್ತಿಯಾಗುವ 20 ರಿಂದ 25 ಟನ್‌ಗಳಷ್ಟು ಸಾವಯವ ತ್ಯಾಜ್ಯವನ್ನು ಜೈವಿಕ ಅನಿಲವಾಗಿ ಪರಿವರ್ತಿಸುವ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ. ಈ ಯೋಜನೆಯಿಂದ ತ್ಯಾಜ್ಯ ನಿರ್ವಹಣೆ ಸುಧಾರಿಸುವ ಜತೆಗೆ ಹಸಿರು ಇಂಧನ ಉತ್ಪಾದನೆಯೂ ಸಾಧ್ಯವಾಗಲಿದೆ.
ರೈತನ ಹೊಲದಿಂದ ಗ್ರಾಹಕರ ಮನೆವರೆಗೆ ಸಾಗುವ ಕೃಷಿ ಉತ್ಪನ್ನಗಳ ಪಯಣದಲ್ಲಿ ಮೈಸೂರು ಎಪಿಎಂಸಿ ಒಂದು ಪ್ರಮುಖ ಕೊಂಡಿಯಾಗಿದ್ದು, ಜಿಲ್ಲೆಯ ಕೃಷಿ ಆರ್ಥಿಕತೆಯ ಶಕ್ತಿಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ.
ಮೈಸೂರು ಎಪಿಎಂಸಿಯಲ್ಲಿ ಪ್ರತಿದಿನ ಸಾವಿರಾರು ರೈತರು ಉತ್ಪನ್ನಗಳನ್ನು ತಂದು ಮಾರಾಟ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಕಾರಣ ಮಧ್ಯವರ್ತಿಗಳ ಹಾವಳಿ ಕಡಿಮೆಯಾಗಿ ರೈತರಿಗೆ ನ್ಯಾಯಯುತ ಬೆಲೆ ದೊರೆಯುತ್ತಿದೆ.
ತೂಕ, ಗುಣಮಟ್ಟ ಪರಿಶೀಲನೆ ಹಾಗೂ ಹರಾಜು ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುತ್ತಿದೆ. ಇದರಿಂದ ರೈತರು ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಬೆಲೆ ಪಡೆಯುತ್ತಿದ್ದಾರೆ.
ಅನುಕೂಲಕರ ವಾತಾವರಣ
ಇತ್ತೀಚಿನ ವರ್ಷಗಳಲ್ಲಿ ಎಪಿಎಂಸಿ ಆವರಣದಲ್ಲಿ ರಸ್ತೆ, ಗೋದಾಮು, ಕುಡಿಯುವ ನೀರು, ಶೌಚಾಗೃಹ ಸೇರಿದಂತೆ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ರೈತರಿಗೆ ಅನುಕೂಲಕರ ವಾತಾವರಣ ನಿರ್ಮಿಸಲಾಗಿದೆ.
‘ಗ್ರಾಮದಿಂದ ನೇರವಾಗಿ ಉತ್ಪನ್ನ ತಂದು ಮಾರಾಟ ಮಾಡುವ ಅವಕಾಶ ದೊರೆತಿರುವುದರಿಂದ ಖರ್ಚು ಕಡಿಮೆಯಾಗಿ ಆದಾಯ ಹೆಚ್ಚಿದೆ. ಕೃಷಿ ಮಾರುಕಟ್ಟೆಯಲ್ಲಿ ಡಿಜಿಟಲ್ ವ್ಯವಹಾರ, ಆನ್‌ಲೈನ್ ಮಾಹಿತಿ ವ್ಯವಸ್ಥೆ ಹಾಗೂ ಪಾರದರ್ಶಕ ಹರಾಜು ಕ್ರಮಗಳು ನಮ್ಮ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿವೆ’ ಎನ್ನುತ್ತಾರೆ ರೈತ ಸುಬ್ಬಣ್ಣ.
"
ಎಪಿಎಂಸಿಗಳಲ್ಲಿ ರೈತರ ಬೆವರಿನ ಬೆಲೆಗೆ ನ್ಯಾಯ ದೊರಕಿಸುವುದು, ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವುದು ಹಾಗೂ ಗ್ರಾಮೀಣ ಆರ್ಥಿಕತೆಗೆ ಚೈತನ್ಯ ತುಂಬಬೇಕೆಂಬ ಕಾರಣದಿಂದ ಪ್ರತಿ ಬುಧವಾರ ಇಆರ್‌ಪಿ ಸಭೆ ನಡೆಸಲಾಗುತ್ತಿದೆ. ಸಭೆಯಲ್ಲಿ ರೈತರ ನೋಂದಣಿ, ವಹಿವಾಟು ಮಾಹಿತಿ, ಮಾರುಕಟ್ಟೆ ನಿರ್ವಹಣೆ, ಬೆಲೆ ಮಾಹಿತಿ ಹಾಗೂ ಇತರ ಆಡಳಿತಾತ್ಮಕ ವಿಷಯಗಳು ಕುರಿತು ಪರಿಶೀಲನೆ ನಡೆಯುತ್ತಿದೆ.
— ಎಚ್.ಸಿ.ಎಂ.ರಾಣಿ ಕಾರ್ಯದರ್ಶಿ, ಎಪಿಎಂಸಿ ಮೈಸೂರು
ಕೋಲ್ಡ್ ಸ್ಟೋರೇಜ್ ಸೌಲಭ್ಯ
ಎಪಿಎಂಸಿ ಆವರಣದಲ್ಲಿ ರೈತರು ಮತ್ತು ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಆಧುನಿಕ ಕೋಲ್ಡ್ ಸ್ಟೋರೇಜ್ ನಿರ್ಮಾಣ ಮಾಡಲಾಗುತ್ತಿದೆ. 12 ಕೋಟಿ ರೂ. ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಶೀತಲೀಕರಣ ಘಟಕ ಇದಾಗಿದೆ. ಇದು ನಿರ್ಮಾಣವಾದ ಬಳಿಕ ಹಣ್ಣು, ತರಕಾರಿ ಸೇರಿದಂತೆ ಶೀಘ್ರ ಹಾಳಾಗುವ ಕೃಷಿ ಉತ್ಪನ್ನಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲು ರೈತರಿಗೆ ಅನುಕೂಲವಾಗುತ್ತದೆ ಎಂದು ಎಪಿಎಂಸಿ ಕಾರ್ಯದರ್ಶಿ ಎಚ್.ಸಿ.ಎಂ.ರಾಣಿ ತಿಳಿಸಿದ್ದಾರೆ.