ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಶಾಸಕ ಪಿ.ಎಂ.ನರೇಂದ್ರ ಸ್ವಾಮಿ ಉದ್ಘಾಟಿಸಿದರು. ಪ್ರೊ.ಶರಣಪ್ಪ ವಿ.ಹಲಸೆ, ಪ್ರೊ.ಎಸ್.ಕೆ. ನವೀನ್‌ಕುಮಾರ್, ಪ್ರೊ.ರಾಮನಾಥಂ ನಾಯ್ಡು, ಡಾ.ಆನಂದಕುಮಾರ್, ಪ್ರೊ.ನಿರಂಜನ, ಪ್ರೊ.ಕೃಷ್ಣರಾಜ್ ಇದ್ದರು. 
ಮೈಸೂರು

ಸಂವಿಧಾನ ವಿರೋಧಿ ಮನಸ್ಸು ದೇಶಕ್ಕೆ ಮಾರಕ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿಕೆ
  • ಕರಾಮುವಿಯಲ್ಲಿ ಸಂವಿಧಾನ ದಿನಾಚರಣೆ
  • ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಕುಲಸಚಿವ ಪ್ರೊ.ಎಸ್.ಕೆ. ನವೀನ್‌ಕುಮಾರ್, ಶೈಕ್ಷಣಿಕ ಡೀನ್ ಪ್ರೊ.ರಾಮನಾಥಂ ನಾಯ್ಡು, ಪರೀಕ್ಷಾಂಗ ಕುಲಸಚಿವ ಡಾ.ಆನಂದಕುಮಾರ್ ಭಾಗಿ
ಮೈಸೂರು: ಸಂವಿಧಾನ ವಿರೋಧಿ ಮನಸ್ಸು ದೇಶಕ್ಕೆ ಮಾರಕ. ಧರ್ಮ ಮತ್ತು ಜಾತಿ ಇಲ್ಲದೇ ಭಾರತೀಯ ಭಾವನೆ ಇದ್ದರಷ್ಟೇ ದೇಶ ಉಳಿಯಲಿದೆ ಎಂದು ಶಾಸಕ ಪಿ.ಎಂ.ನರೇಂದ್ರ ಸ್ವಾಮಿ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕಾವೇರಿ ಸಭಾಂಗಣದಲ್ಲಿ ಮುಕ್ತ ವಿವಿಯ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಹಾಗೂ ಬೆಂಗಳೂರಿನ ಅಂಬೇಡ್ಕರ್ ತರಬೇತಿ, ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಸಂವಿಧಾನ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂವಿಧಾನ ಆಶಯ ಪೂರ್ಣಗೊಂಡಿದೆಯೇ, ಬಾಬಾ ಸಾಹೇಬರ ಆಸೆ ಈಡೇರಿದೆಯೇ, ವಿದ್ಯಾವಂತರಲ್ಲಿ ಜಾಗೃತಿ ಮೂಡಿದೆಯೇ ಎಂಬುದನ್ನು ಅವಲೋಕನ ಮಾಡಬೇಕು. ನಮ್ಮೆಲ್ಲರ ಭವಿಷ್ಯವಾದ ಸಂವಿಧಾನವನ್ನು ಸೈನಿಕರಂತೆ ರಕ್ಷಿಸಬೇಕು ಎಂದು ಹೇಳಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಸಮಾನತೆ ಆಶಯಕ್ಕೆ ತಳಹದಿ ಹಾಕಿ ಇಡೀ ರಾಷ್ಟ್ರಕ್ಕೆ ಮಾದರಿಯಾದರು. ಡಾ.ಅಂಬೇಡ್ಕರ್ ಜಗತ್ತಿನ ಜ್ಞಾನವನ್ನು ಸಂಪಾದಿಸಿ ಉತ್ಕೃಷ್ಟವಾದ ಸಂವಿಧಾನ ಬರೆದರು. ಸತತ 17 ದಿನಗಳ ಕಾಲ ಸಂವಿಧಾನದ ಪ್ರತಿ ವಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಆದರೂ ಇವತ್ತಿಗೂ ಸಮಾನತೆ ಬಂದಿಲ್ಲ. ಡಾ.ಅಂಬೇಡ್ಕರ್ ಮಹಿಳೆಯರಿಗಾಗಿ ಕಾನೂನು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಆದರೆ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ. ಹೆಣ್ಣು ಮಗು ಹುಟ್ಟಿದೆ ಎಂದು ತಾಯಿಯೇ ಹತ್ಯೆ ಮಾಡಿದ್ದಾಳೆ. ಇಂಥ ವ್ಯವಸ್ಥೆಯಲ್ಲಿ ನಮ್ಮ ಜವಾಬ್ದಾರಿಗಳೇನು ಎಂಬುದನ್ನು ಅರಿತುಕೊಳ್ಳಬೇಕಿದೆ ಎಂದರು.
ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಕುಲಸಚಿವ ಪ್ರೊ.ಎಸ್.ಕೆ. ನವೀನ್‌ಕುಮಾರ್, ಶೈಕ್ಷಣಿಕ ಡೀನ್ ಪ್ರೊ.ರಾಮನಾಥಂ ನಾಯ್ಡು, ಪರೀಕ್ಷಾಂಗ ಕುಲಸಚಿವ ಡಾ.ಆನಂದಕುಮಾರ್, ಹಣಕಾಸು ಅಧಿಕಾರಿ ಪ್ರೊ.ನಿರಂಜನ, ಪ್ರಾಧ್ಯಾಪಕ ಪ್ರೊ.ಕೃಷ್ಣರಾಜ್, ಅಧ್ಯಯನ ಕೇಂದ್ರದ ಡೀನ್ ಡಾ.ಚಂದ್ರೇಗೌಡ ಇತರರಿದ್ದರು.