ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಿಂದ ಮುತ್ತಿನ ನಗರಿ ಹೈದರಾಬಾದ್‌ಗೆ ಮತ್ತೊಂದು ವಿಮಾನ ಸಂಚಾರ ಅತಿ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.
ಮೈಸೂರಿನಿಂದ ಹೈದರಾಬಾದ್‌ಗೆ ಮೇ 1ರಿಂದ ಈ ವಿಮಾನ ಸೇವೆ ಆರಂಭವಾಗಲಿದೆ. ಮಧ್ಯಾಹ್ನ 2.20ಕ್ಕೆ ಮೈಸೂರು ವಿಮಾನ ನಿಲ್ದಾಣದಿಂದ ಹೊರಡಲಿರುವ ವಿಮಾನ ಮಧ್ಯಾಹ್ನ 4ಕ್ಕೆ ಹೈದರಾಬಾದ್ ತಲುಪಲಿದೆ. ಈಗಾಗಲೇ ಎರಡು ವಿಮಾನ ಚೆನ್ನೈ, ಹೈದರಾಬಾದ್‌ಗೆ ತೆರಳುತ್ತಿದ್ದು, ಈ ವಿಮಾನ ಸಂಚಾರ ಸೇವೆಯಿಂದ ನಾಗರಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಮೈಸೂರಿನಿಂದ ಮತ್ತಷ್ಟು ವಿಮಾನ ಸಂಚಾರ ಆರಂಭವಾಗಲಿದೆ. ಮೈಸೂರಿನಿಂದ ವಾಯು ಸಂಚಾರ ಹೆಚ್ಚಳಕ್ಕೆ ಈಗಾಗಲೇ ಕ್ರಮ ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಹಲವಾರು ಬಾರಿ ಕೇಂದ್ರ ಸಚಿವರೊಂದಿಗೆ ಮಾತುಕತೆ ನಡೆಸಿದ್ದೇನೆ. ವಿಮಾನ ನಿಲ್ದಾಣ ವಿಸ್ತರಣೆಗೆ ತೊಡಕಾಗಿರುವ ಭೂ ಸ್ವಾಧೀನ ಪ್ರಕ್ರಿಯೆ ಕೂಡ ಬಹುತೇಕ ಪೂರ್ಣಗೊಂಡಿದೆ. ಮುಂದಿನ ಕೆಲವೇ ದಿನಗಳಲ್ಲಿ ಇದು ಹಸ್ತಾಂತರಗೊಂಡ ನಂತರ ಕೇಂದ್ರದ ಮೇಲೆ ಇನ್ನಷ್ಟು ಒತ್ತಡ ಹೇರಿ ವಿಮಾನ ನಿಲ್ದಾಣ ವಿಸ್ತರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಒಮ್ಮೆ ವಿಮಾನ ನಿಲ್ದಾಣ ವಿಸ್ತರಣೆಗೊಂಡ ನಂತರ ದೇಶದ ನಾನಾ ಪ್ರಮುಖ ನಗರಗಳಿಗೆ ಮೈಸೂರಿನಿಂದ ನೇರ ವಿಮಾನ ಸಂಚಾರ ಸೇವೆ ಆರಂಭಗೊಳ್ಳಲಿದೆ. ಇದರೊಂದಿಗೆ ಮೈಸೂರಿನ ಅಭಿವೃದ್ಧಿಯೂ ಸಮಾನಾಂತರವಾಗಿ ಆಗಲಿದೆ ಎಂದು ಹೇಳಿದ್ದಾರೆ.
ಮೈಸೂರಿನಿಂದ ಏರ್ ಟ್ರಾಫಿಕ್ ಹೆಚ್ಚಿಸಲು ಎಲ್ಲ ರೀತಿಯ ಮಾತುಕತೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಸಂಪೂರ್ಣ ಕಾರ್ಯ ಪ್ರವೃತ್ತನಾಗಲಿದ್ದೇನೆ. ಮೈಸೂರಿನ ಸಮಗ್ರ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ ಎಂದು ತಿಳಿಸಿದ್ದಾರೆ.