ಸರಗೂರು ತಾಲೂಕಿನ ತಹಸೀಲ್ದಾರ್ ಕಚೇರಿಯಲ್ಲಿ ಇಟ್ನ ಮತ್ತು ಹಾಲುಗಡ ಚಿಕ್ಕ ದೇವಮ್ಮ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆ ನಡೆಯಿತು. 
ಮೈಸೂರು

ಚಿಕ್ಕದೇವಮ್ಮನ ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇಧ

ಸರಗೂರು: ಇಟ್ನಾ ಮತ್ತು ಹಾಲುಗಡ ಗ್ರಾಮದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ನಡೆಯಲಿರುವ ಚಿಕ್ಕದೇವಮ್ಮನ ಜಾತ್ರಾ ಮಹೋತ್ಸವ ಸಾಂಗವಾಗಿ ನೆರವೇರಬೇಕು. ಆದರೆ, ಪ್ರಾಣಿಬಲಿ ತಡೆ, ಅಹಿತರ ಘಟನೆ ನಡೆಯದಂತೆ ನೋಡಿಕೊಳ್ಳಲು ಅಧಿಕಾರಿಗಳು ಹಾಗೂ ಗ್ರಾಮಸ್ಥರು ಮತ್ತು ಟ್ರಸ್ಟ್ ಪದಾಧಿಕಾರಿಗಳು ಕ್ರಮವಹಿಸಿಬೇಕು ಎಂದು ತಹಸೀಲ್ದಾರ್ ಮೋಹನಕುಮಾರಿ ಸೂಚಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜಾತ್ರೆ ಸಂದರ್ಭದಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಮಹಿಳಾ ಭಕ್ತಾದಿಗಳಿಗೆ ಪ್ರತ್ಯೇಕ ಸ್ನಾನ, ಮುಡಿ ಸೇವೆಗೆ ವ್ಯವಸ್ಥೆ ಮಾಡಬೇಕು. ಕೋಳಿ, ಕುರಿ ಬಲಿ ಮಾಡಬಾರದು, ಗ್ರಾಮ ಪಂಚಾಯಿತಿ ವತಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.
ಇಟ್ನ ಗ್ರಾಮದ ಚಿಕ್ಕ ದೇವಮ್ಮನ ಟ್ರಸ್ಟ್ ಅಧ್ಯಕ್ಷ ದೊಡ್ಡವೀರನಾಮಕ ಮಾತನಾಡಿ, ಚಿಕ್ಕದೇವಮ್ಮ ಬೆಟ್ಟದಿಂದ ಹಾಲುಗಡದವರೆಗೆ ಅಮ್ಮನವರ ಮೆರವಣಿಗೆ ಮೂಲಕ ಜಾತ್ರೆ ಆರಂಭವಾಗಲಿದೆ. ನದಿ ಮಧ್ಯ ಭಾಗದಲ್ಲಿರುವ ಜಪದಕಟ್ಟೆಯಲ್ಲಿ ಚಿಕ್ಕದೇವಮ್ಮನವರ ಉತ್ಸವ ಮೂರ್ತಿಯನ್ನು ಇಟ್ಟು ಅಲ್ಲಿ ವಿಶೇಷ ಪೂಜೆ ಮಾಡುವುದು ಸಂಪ್ರದಾಯವಾಗಿದೆ. ಬಳಿಕ ಸಮೀಪದಲ್ಲಿರುವ ಗೂಳಿ ಮಂಟಪದಲ್ಲಿ ಅಮ್ಮನವರನ್ನು ಪ್ರತಿಷ್ಠಾಪಿಸಲಾಗುವುದು. ಗ್ರಾಮಸ್ಥರ ಸಮ್ಮುಖದಲ್ಲಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಪಿಎಸ್‌ಐ ಗೋಪಾಲ್, ಚಿಕ್ಕ ದೇವಮ್ಮ ಬೆಟ್ಟದ ಕಾರ್ಯನಿರ್ವಾಹಕ ಅಧಿಕಾರಿ ರಘು, ಟ್ರಸ್ಟ್ ಅಧ್ಯಕ್ಷ ದೊಡ್ಡ ವೀರನಾಯಕ, ಯಜಮಾನ ನಿಂಗರಾಜು, ನಾಗರಾಜು, ಬಿ.ಬೆಟ್ಟ ನಾಯಕ, ಗ್ರಾಪಂ ಮಾಜಿ ಸದಸ್ಯ ಎನ್.ಬಸವ ನಾಯಕ, ಬಿ. ಬಸವರಾಜು, ಐ.ಬಿ.ರವಿಕುಮಾರ, ನಾಗೇಂದ್ರ, ಶೇಷ, ಮಂಚನಾಯಕ, ಬಿ.ರಾಮನಾಯಕ, ಬೆಟ್ಟದ ಪಾರುತ್ತೇದಾರ ಮಹದೇವಸ್ವಾಮಿ, ಪುರದಕಟ್ಟೆ ಬಸವರಾಜು ಇದ್ದರು.