ವಿಜಯನಗರದ ಮಹರ್ಷಿ ವಾಲ್ಮೀಕಿ ಭವನ ಆವರಣದಲ್ಲಿ ಆಯೋಜಿಸಿದ್ದ ಅಂಗನವಾಡಿ ಹಬ್ಬದಲ್ಲಿ ಶಾಲಾ ಪೂರ್ವ ಸಿದ್ಧ್ದತಾ ಚಟುವಟಿಕೆಗಳ ಪ್ರದರ್ಶನವನ್ನು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ ವೀಕ್ಷಿಸಿದರು. ಬಸವರಾಜು, ಡಾ.ಶ್ರೀವಿದ್ಯಾ, ಸುನೇನಾ ಛತ್ರಪತಿ ಹಾಗೂ ಇತರರು ಇದ್ದರು. 
ಮೈಸೂರು

ಮೈಸೂರಿನಲ್ಲಿ ಅಂಗನವಾಡಿ ಹಬ್ಬ

ಮೈಸೂರು: ವಿಜಯನಗರದ ಮಹರ್ಷಿ ವಾಲ್ಮೀಕಿ ಭವನ ಆವರಣದಲ್ಲಿ ಬುಧವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಶಿಕ್ಷಾಗ್ರಹ ಹಾಗೂ ಮಕ್ಕಳ ಜಾಗೃತಿ ಸಂಸ್ಥೆ ಸಹಯೋಗದೊಂದಿಗೆ ಅಂಗನವಾಡಿ ಹಬ್ಬ ಆಯೋಜಿಸಲಾಗಿತ್ತು.
ಮಕ್ಕಳ ಅಭಿವೃದ್ಧಿತಜ್ಞೆ ಡಾ.ಶ್ರೀವಿದ್ಯಾ ಮಾತನಾಡಿ, ಶಾಲಾ ಪೂರ್ವ ಸಿದ್ಧತೆಯು ಮಕ್ಕಳನ್ನು ಓದಲು ಹಾಗೂ ಬರೆಯಲು ಸಿದ್ಧಗೊಳಿಸುವುದಕ್ಕೆ ಮಾತ್ರ ಸೀಮಿತವಾಗಬಾರದು. ಮಕ್ಕಳು ಪಾಠ ಕೇಳುತ್ತಿದ್ದಾರಾ? ಹೇಳಿದನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರಾ?ಗುಂಪಿನಲ್ಲಿ ಕುಳಿತು ಚರ್ಚೆ ಮಾಡುತ್ತಾರಾ? ಹಿರಿಯರಿಗೆ ಗೌರವ ನೀಡುತ್ತಾರಾ ಎಂಬುದನ್ನು ಗಮನಿಸಿ ಮಕ್ಕಳಿಗೆ ಅಗತ್ಯ ಮಾರ್ಗದರ್ಶನ ನೀಡಬೇಕು. ಮಕ್ಕಳ ಬೆಳವಣಿಗೆ ಕುರಿತು ಪಾಲಕರೊಂದಿಗೆ ಚರ್ಚಿಸಬೇಕು ಎಂದು ಹೇಳಿದರು.
ಶಾಲಾ ಪೂರ್ವದಲ್ಲಿಯೇ ಮಕ್ಕಳಲ್ಲಿ ಸಾಮಾಜಿಕ ಮತ್ತು ಭಾವನಾತ್ಮಕ ಭಾವನೆಗಳನ್ನು ಬಿತ್ತುವ ಕೆಲಸ ಆಗಬೇಕು. ಅರ್ಥ ಮಾಡಿಕೊ ಳ್ಳುವಷ್ಟು ಬೌದ್ಧಿಕ ಸಾಮರ್ಥ್ಯ ಬೆಳೆಸಬೇಕು. ಜೇಡಿ ಮಣ್ಣಿನಲ್ಲಿ ಆಟವಾಡಿಸುವ ಮೂಲಕ ಇಂದ್ರೀಯಗಳ ಪ್ರಚೋದನೆಗೆ ಅವಕಾಶ ಮಾಡಿಕೊಡಬೇಕು. ಅಂಗನವಾಡಿಗಳಲ್ಲಿ ಪುಸ್ತಕಗಳ ಜತೆಗೆ ಅಕ್ಷರಗಳ ಪ್ರತಿಗಳು ಮತ್ತು ಆಟಿಕೆಗಳು ಕಡ್ಡಾಯವಾಗಿ ಇರಬೇಕು ಎಂದರು.
ಮಕ್ಕಳ ಜಾಗೃತಿ ಸಂಸ್ಥೆ ಸಿಇಒ ಸುನೇನಾ ಛತ್ರಪತಿ ಮಾತನಾಡಿ, 1ನೇ ತರಗತಿಯ ಮಕ್ಕಳು ಒಂದು ಕಡೆ ಕೂರುವುದಿಲ್ಲ, ಬರೆಯುವುದಿಲ್ಲ ಎಂದರೆ ಶಾಲಾ ಪೂರ್ವ ಸಿದ್ದತೆಯಲ್ಲಿ ಕೊರತೆಯಾಗಿದೆ ಎಂದರ್ಥ. 6 ವರ್ಷದೊಳಗೆ ಎಲ್ಲ ರೀತಿಯ ಶಾಲಾ ಪೂರ್ವ ಸಿದ್ಧತೆಯಾಗಬೇಕು. ಇಲ್ಲವಾದಲ್ಲಿ ಕಲಿಕೆಯಲ್ಲಿ ಕುಂಠಿತವಾಗುವುದಲ್ಲದೆ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಮಕ್ಕಳು ಎದುರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಸಿದರು.
ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ ಜಿಲ್ಲಾ ನಿರ್ದೇಶಕ ಬಸವರಾಜು ಮಾತನಾಡಿ, ಮಕ್ಕಳ ವಿದ್ಯಾಭ್ಯಾಸಕ್ಕೆ ಶಾಲಾ ಪೂರ್ವ ಸಿದ್ಧ್ದತೆ ಮಹತ್ವದ ಕಾರ್ಯಕ್ರಮವಾಗಿದ್ದು, ಮಕ್ಕಳ ಕಲಿಕೆಗೆ ಭದ್ರ ಬುನಾದಿ ಹಾಕಿದಂತೆ. ಮಕ್ಕಳ ಎಲ್ಲ ರೀತಿಯ ಬೆಳವಣಿಗೆಗೆ ಶಾಲಾ ಪೂರ್ವ ಶಿಕ್ಷಣ ಅಗತ್ಯವಾಗಿದ್ದು, ಅಂಗನವಾಡಿ ಕೇಂದ್ರಗಳಲ್ಲಿ ಕನ್ನಡದ ಜತೆಗೆ ಇಂಗ್ಲಿಷ್‌ಅನ್ನು ಹೇಳಿಕೊಡುವ ಮೂಲಕ ಪ್ರಸ್ತುತ ಕಾಲಘಟ್ಟಕ್ಕೆ ಅನುಗುಣವಾಗಿ ಮಕ್ಕಳ ಬೌದ್ಧಿಕ ಮಟ್ಟವನ್ನು ವೃದ್ಧಿಸಲಾಗುತ್ತಿದೆ ಎಂದರು.
ಸಂವಾದಕ್ಕೂ ಮುನ್ನ ಶಾಲಾ ಪೂರ್ವ ಸಿದ್ಧ್ದತಾ ಚಟುವಟಿಕೆಗಳ ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ ಚಾಲನೆ ನೀಡಿದರು. ಮಕ್ಕಳ ಜಾಗೃತಿಯ ಉಪ ನಿರ್ದೇಶಕಿ ಅಮೃತಾ ಮುರಳಿ ಇದ್ದರು. ಬಸವರಾಜು,