Mysore edition 
ಮೈಸೂರು

ಟಿಸಿಎಸ್ ಟೆಕ್‌ ಬೈಟ್ಸ್ ಮೈಸೂರು ಆವೃತ್ತಿಯಲ್ಲಿ ಆನೇಕಲ್ ಎಸ್‌ಎಸ್‌ಸಿಇಗೆ ಜಯ

ಅವಿನಾಶ್ ಜೈನಹಳ್ಳಿ
ಜಾಗತಿಕ ಮಟ್ಟದ ಐಟಿ ಸೇವೆಗಳ ಪ್ರತಿಷ್ಠಿತ ಕಂಪನಿ ಆಗಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಮತ್ತು ಕರ್ನಾಟಕ ಸರ್ಕಾರದ ಸ್ವಾಯತ್ತ ಸಂಸ್ಥೆಯಾದ ಬೋರ್ಡ್ ಫಾರ್ ಐಟಿ ಎಜುಕೇಶನ್ ಸ್ಟ್ಯಾಂಡರ್ಡ್ಸ್ (ಬೈಟ್ಸ್) ಜಂಟಿಯಾಗಿ ಆಯೋಜಿಸಿದ್ದ 17ನೇ ಆವೃತ್ತಿಯ ಮೈಸೂರು ವಲಯದ 'ಟಿಸಿಎಸ್ ಟೆಕ್‌ ಬೈಟ್ಸ್' ಐಟಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಆನೇಕಲ್ ನ ಶ್ರೀ ಸಾಯಿರಾಮ್ ಕಾಲೇಜ್ ಆಫ್ ಇಂಜಿನಿಯರಿಂಗ್ ನ ಅಶುತೋಷ್ ರಾಜ್ ಮತ್ತು ಪರಿಣೀತ್ ಎಂ. ವಿಜೇತರಾಗಿ ಹೊರಹೊಮ್ಮಿದರು.
ಅತ್ಯಂತ ವೇಗವಾಗಿ ಮತ್ತು ರೋಚಕವಾಗಿ ನಡೆದ ಹಲವು ಸುತ್ತುಗಳ ಸ್ಪರ್ಧೆಯ ನಂತರ, ಆನೇಕಲ್ ನ ಶ್ರೀ ಸಾಯಿರಾಮ್ ಕಾಲೇಜ್ ಆಫ್ ಇಂಜಿನಿಯರಿಂಗ್ ನ ಅಶುತೋಷ್ ರಾಜ್ ಮತ್ತು ಪರಿಣೀತ್ ಎಂ. ವಿಜೇತರಾಗಿ ಹೊರಹೊಮ್ಮಿದರು. ಮೈಸೂರಿನ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ನ ಪ್ರಣೀತ್ ಸಿ. ಗೌಡ ಮತ್ತು ಲಿಖಿತ್ ಸಿಂಗ್ ಎಸ್. ಮೈಸೂರು ಪ್ರಾದೇಶಿಕ ಸುತ್ತಿನಲ್ಲಿ ದ್ವಿತೀಯ ಸ್ಥಾನವನ್ನು ಪಡೆದರು.
ಉದಯೋನ್ಮುಖ ತಂತ್ರಜ್ಞಾನಗಳ ಕುರಿತು ವಿದ್ಯಾರ್ಥಿಗಳ ಜ್ಞಾನವನ್ನು ಒರೆಗೆ ಹಚ್ಚುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದ್ದ ಈ ರಸಪ್ರಶ್ನೆ ಸ್ಪರ್ಧೆಯಲ್ಲಿ ಮೈಸೂರು ವಲಯದ ವಿವಿಧ ಇಂಜಿನಿಯರಿಂಗ್ ಕಾಲೇಜುಗಳ ತಂಡಗಳು ಭಾಗವಹಿಸಿದ್ದವು.
ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನದ ಜಗತ್ತಿಗೆ ತಕ್ಕಂತೆ ತಮ್ಮನ್ನು ಅಪ್‌ ಡೇಟ್ ಮಾಡಿಕೊಳ್ಳಲು ಮತ್ತು ಅವರ ಲ್ಯಾಟರಲ್ ಥಿಂಕಿಂಗ್ ಸಾಮರ್ಥ್ಯವನ್ನು ಹೆಚ್ಚಿಸಲು ಟಿಸಿಎಸ್ ಮತ್ತು ಬೈಟ್ಸ್ ಜಂಟಿಯಾಗಿ 'ಟಿಸಿಎಸ್ ಟೆಕ್‌ ಬೈಟ್ಸ್' ರಸಪ್ರಶ್ನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿವೆ. ಈ ಸ್ಪರ್ಧೆಯು ಮೈಸೂರಿನ ವಿದ್ಯಾವರ್ಧಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ (ವಿವಿಸಿಇ) ನಡೆಯಿತು. ಈ ಹಂತದಲ್ಲಿ ಆಯ್ಕೆಯಾದ ಅಗ್ರ ಆರು ತಂಡಗಳು ಅಂತಿಮ ಸುತ್ತಿನ ಸಂವಾದಾತ್ಮಕ ಕ್ವಿಜ್‌ ನಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆದವು. ಐದು ವಿಭಾಗಗಳಲ್ಲಿ ನಡೆದ ಈ ಕ್ವಿಜ್, ವಿದ್ಯಾರ್ಥಿಗಳ ತಾಂತ್ರಿಕ ಜ್ಞಾನವನ್ನು ಪರೀಕ್ಷಿಸಿತು.
ವಿವಿಸಿಯ ಪ್ರಾಂಶುಪಾಲರಾದ ಡಾ. ಬಿ. ಸದಾಶಿವ ಗೌಡ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಟಿಸಿಎಸ್ ಟೆಕ್ಬೈಟ್ಸ್ ಮೈಸೂರು ಆವೃತ್ತಿಯ ವಿಜೇತರು ಮೇ 5, 2026 ರಂದು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಅಂತಿಮ ಸುತ್ತಿನಲ್ಲಿ ಮೈಸೂರು ನಗರವನ್ನು ಪ್ರತಿನಿಧಿಸಲಿದ್ದಾರೆ.
ಈ ಕುರಿತು ಟಿಸಿಎಸ್ ಬೆಂಗಳೂರು ವಲಯದ ಮುಖ್ಯಸ್ಥ ಸುನಿಲ್ ದೇಶಪಾಂಡೆ ಮಾತನಾಡಿ, "ಟಿಸಿಎಸ್ ಟೆಕ್‌ ಬೈಟ್ಸ್ ಮೂಲಕ ಯುವ ಇಂಜಿನಿಯರ್‌ ಗಳಿಗೆ ಎಐ ಸೇರಿದಂತೆ ಇತ್ತೀಚಿನ ಜಾಗತಿಕ ತಂತ್ರಜ್ಞಾನದ ಟ್ರೆಂಡ್‌ ಗಳನ್ನು ಪರಿಚಯಿಸುವ ವೇದಿಕೆಯನ್ನು ನಾವು ಒದಗಿಸುತ್ತಿದ್ದೇವೆ. ಈ ರಸಪ್ರಶ್ನೆ ಕಾರ್ಯಕ್ರಮವು ಮುಂದಿನ ಪೀಳಿಗೆಯ ಪ್ರತಿಭೆಗಳಲ್ಲಿ ನಿರಂತರ ಬದಲಾವಣೆಗೆ ಒಗ್ಗಿಕೊಳ್ಳುವಿಕೆ, ಚುರುಕುತನ, ಸಹಯೋಗ ಮತ್ತು ಕುತೂಹಲವನ್ನು ಬೆಳೆಸುವ ಅಗತ್ಯವನ್ನು ಒತ್ತಿಹೇಳುತ್ತದೆ' ಎಂದು ತಿಳಿಸಿದರು.
ಬೈಟ್ಸ್ ಅಧ್ಯಕ್ಷರಾದ ಪ್ರೊ. ಎಸ್. ಸಡಗೋಪನ್ ಅವರು ಮಾತನಾಡಿ, "ಟಿಸಿಎಸ್ ಟೆಕ್‌ ಬೈಟ್ಸ್ ಇಂದಿನ ಸ್ಪರ್ಧಾತ್ಮಕ ವಾತಾವರಣದಲ್ಲಿ ಅತ್ಯಗತ್ಯವಾಗಿರುವ ಶ್ರೇಷ್ಠತೆಯ ಸಂಸ್ಕೃತಿಯನ್ನು ಬೆಳೆಸಲು ಸಹಾಯ ಮಾಡುತ್ತದೆ. ಈ ಕಾರ್ಯಕ್ರಮವು ವಿದ್ಯಾರ್ಥಿಗಳ ತಾಂತ್ರಿಕ ಜ್ಞಾನವನ್ನು ಬಲಪಡಿಸುವುದು ಮಾತ್ರವಲ್ಲದೆ, ಆರೋಗ್ಯಕರ ಸ್ಪರ್ಧಾ ಮನೋಭಾವವನ್ನು ಹೊಂದಲು ಪ್ರೋತ್ಸಾಹಿಸುತ್ತದೆ. ವಿವಿಧ ಹಿನ್ನೆಲೆಯ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಅವರ ಕೌಶಲ್ಯ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸುವ ಮೂಲಕ, ಈ ಸ್ಪರ್ಧೆಯು ಟೀಮ್ ವರ್ಕ್, ಚೇತರಿಸಿಕೊಳ್ಳುವ ಸಾಮರ್ಥ್ಯ ಮತ್ತು ನ್ಯಾಯಸಮ್ಮತ ಆಟದ ಮೌಲ್ಯಗಳನ್ನು ಅವರಲ್ಲಿ ಬಿತ್ತುತ್ತದೆ. ವಿದ್ಯಾರ್ಥಿಗಳ ತಾಂತ್ರಿಕ ಜ್ಞಾನವನ್ನು ಹೆಚ್ಚಿಸಲು ಪ್ರೋತ್ಸಾಹಿಸುವ ಈ ಪ್ರಮುಖ ಯೋಜನೆಯ ಆಯೋಜನೆಗೆ ಟಿಸಿಎಸ್ ಜೊತೆ ಕೈಜೋಡಿಸಿರುವುದಕ್ಕೆ ನಮಗೆ ಹೆಮ್ಮೆಯಿದೆ," ಎಂದು ತಿಳಿಸಿದರು.
ಟಿಸಿಎಸ್ ಟೆಕ್‌ ಬೈಟ್ಸ್ ಎಂಬುದು ಎಲ್ಲಾ ವಿಭಾಗದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮಾಹಿತಿ ತಂತ್ರಜ್ಞಾನದ ಬಗ್ಗೆ ಉತ್ತಮ ತಿಳುವಳಿಕೆಯನ್ನು ನೀಡುವ ಒಂದು ಕ್ಯಾಂಪಸ್ ಔಟ್‌ ರೀಚ್ ಕಾರ್ಯಕ್ರಮವಾಗಿದೆ. ವಿದ್ಯಾರ್ಥಿಗಳ ಜ್ಞಾನ ಮತ್ತು ಜಾಗೃತಿಯನ್ನು ಹೆಚ್ಚಿಸುವ ಮೂಲಕ ತಂತ್ರಜ್ಞಾನ ಆಧಾರಿತ ಉದ್ಯಮದಲ್ಲಿ ಅವರು ಸ್ಪರ್ಧಿಸಲು ಶಕ್ತರನ್ನಾಗಿ ಮಾಡುವುದು ಇದರ ಉದ್ದೇಶವಾಗಿದೆ. ಟಿಸಿಎಸ್ ಟೆಕ್‌ ಬೈಟ್ಸ್‌ ನ ಪ್ರಾದೇಶಿಕ ಫೈನಲ್ಸ್ ಮಂಗಳೂರು, ಮೈಸೂರು, ಕಲಬುರಗಿ, ಹುಬ್ಬಳ್ಳಿ, ತುಮಕೂರು ಮತ್ತು ಬೆಂಗಳೂರು ಸೇರಿದಂತೆ ಕರ್ನಾಟಕದ ಒಟ್ಟು ಆರು ನಗರಗಳಲ್ಲಿ ನಡೆಯುತ್ತಿದೆ.