2025ರ ಹಿನ್ನೋಟ 
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕಾಣದ ಹೊಳಪು

ಪ್ರಮುಖ ಮುಖ್ಯಾಂಶಗಳು

  • ಭ್ರಷ್ಟಾಚಾರಕ್ಕೆ ಸುದ್ದಿಯಾದ ಕರಾಮುವಿ
  • ಸಂಗೀತ ವಿವಿ ಕುಲಪತಿ ಸ್ಥಾನಕ್ಕೆ ಅರ್ಹರ ಕೊರತೆ

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

 ಇತಿಹಾಸ ಪುಟ ಸೇರುತ್ತಿರುವ 2025ರ ವರುಷದಲ್ಲಿ ಜಿಲ್ಲೆಗೆ ಸಂಬಂಧಿಸಿದಂತೆ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಹೊಳಪು ಏನು ಮೂಡಲಿಲ್ಲ. ಹಳೇ ಅಧ್ವಾನಗಳೇ ಪ್ರಜ್ವಲಿಸಿದವು.
ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾಲಯ ಆರ್ಥಿಕ ಬಿಕ್ಕಟ್ಟಿನಿಂದ ಸೊರಗುತ್ತಿದೆ. ಪಿಂಚಣಿ, ಸಿಬ್ಬಂದಿಗೆ ವೇತನ ಕೊಡಲು ಸಹ ಅದರ ಬಳಿ ದುಡ್ಡಿಲ್ಲ. ಹಣಕಾಸಿನ ಕೊರತೆಯಿಂದ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ
. ಇದು ಶೈಕ್ಷಣಿಕ ಚಟುವಟಿಕೆಗಳ ಮೇಲೆಯೂ ಪರಿಣಾಮ ಬೀರಿದೆ. ಇನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ದುಂದುವೆಚ್ಚ, ಭ್ರಷ್ಟಾಚಾರದ ಆರೋಪದಿಂದ ಈ ಸಲವೂ ಸದ್ದು ಮಾಡಿದೆ.  ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯ ಯಥಾಸ್ಥಿತಿಯಲ್ಲಿ ಕಳೆದುಹೋಗಿದೆ.
ಮುಕ್ತ ವಿಶ್ವವಿದ್ಯಾಲಯ ಕುಲಪತಿಯಾಗಿ ಪ್ರೊ.ಶರಣಪ್ಪ ವಿ.ಹಲಸೆ, ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯದ ವಿಸಿಯಾಗಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ಅವರ ಅಧಿಕಾರ ಅವಧಿಯನ್ನು ವಿಸ್ತರಿಸಲಾಗಿದ್ದರೆ, ಸಂಗೀತ ವಿವಿ ನೂತನ ಕುಲಪತಿ ನೇಮಕಕ್ಕೆ ಅರ್ಹರರ ಕೊರತೆ ಎದುರಾಗಿದೆ. 
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ 2025ನೇ ಸಾಲಿನ ರಾಷ್ಟ್ರೀಯ ಸಾಂಸ್ಥಿಕ ರ‌್ಯಾಂಕಿಂಗ್ ಚೌಕಟ್ಟಿನ (ಎನ್‌ಐಆರ್‌ಎಫ್) ವಾರ್ಷಿಕ ರ‌್ಯಾಂಕಿಂಗ್ ಪಟ್ಟಿಯಲ್ಲಿ ಮೈವಿವಿ 54ರಿಂದ 71ಸ್ಥಾನಕ್ಕೆ ಇಳಿದಿದೆ. ದೇಶದ ಮುಕ್ತ ವಿಶ್ವವಿದ್ಯಾಲಯದ ವಿಭಾಗದಲ್ಲಿ ಕೆಎಸ್‌ಒಯು 2ನೇ ಸ್ಥಾನ ಪಡೆದುಕೊಂಡಿದೆ.
ಅಗತ್ಯಕ್ಕಿಂತ ಹೆಚ್ಚು ತಾತ್ಕಾಲಿಕ ಸಿಬ್ಬಂದಿ ನೇಮಕಾತಿ ಆರೋಪದಡಿ ಮುಕ್ತ ವಿವಿ ಕುಲಸಚಿವರಾಗಿದ್ದ ಪ್ರೊ.ಕೆ.ಬಿ.ಪ್ರವೀಣ್ ಅವರನ್ನು ಎತ್ತಂಗಡಿ ಮಾಡಿ, ಆ ಸ್ಥಾನಕ್ಕೆ ಪ್ರೊ.ಎಸ್.ಕೆ.ನವೀನ್‌ಕುಮಾರ್ ಬಂದಿದ್ದಾರೆ. ಈ ಆರೋಪದ ಕುರಿತು ವಿಶ್ರಾಂತ ಕುಲಪತಿ ಪ್ರೊ.ಎಸ್.ಆರ್.ನಿರಂಜನ್ ನೇತೃತ್ವದಲ್ಲಿ ವಿಚಾರಣಾ ಸಮಿತಿ ತನಿಖೆ ನಡೆಸಿ ನ್ಯಾಯಾಂಗ ತನಿಖೆಗೆ ಶಿಫಾರಸು ಮಾಡಿದೆ.
ಮುಕ್ತ ವಿವಿಯಲ್ಲಿ ಹಣ ದುರ್ಬಳಕೆ ಆರೋಪದ ಮೇರೆಗೆ ಹಿಂದಿನ ಕುಲಪತಿ ಡಾ.ಎಸ್.ವಿದ್ಯಾಶಂಕರ್(ಹಾಲಿ ಬೆಳಗಾವಿ ವಿಟಿಯು ಕುಲಪತಿ) ಸೇರಿದಂತೆ ನಾಲ್ವರ ವಿರುದ್ಧ ತನಿಖೆ ನಡೆಸಿ ವರದಿ ನೀಡಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ನೇತೃತ್ವದ ತನಿಖಾ ಸಮಿತಿಯನ್ನು ರಾಜ್ಯಪಾಲರು ರಚಿಸಿದ್ದಾರೆ. ಅಂದಿನ ಕುಲಸಚಿವ ಡಾ.ಕೆ.ಎಲ್.ಎನ್.ಮೂರ್ತಿ, ಅಂದಿನ ಹಣಕಾಸು ಅಧಿಕಾರಿ ಎ.ಖಾದರ್ ಪಾಷಾ, ಸಹಾಯಕ ಪ್ರಾಧ್ಯಾಪಕ  ಸುಮತಿ ಆರ್.ಗೌಡ ವಿರುದ್ಧ ತನಿಖೆ ನಡೆಯುತ್ತಿದೆ.
ಎಸ್ಸೆಸ್ಸೆಲ್ಸಿಯಲ್ಲಿ ಕಳಪೆ, ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ 
ಮೈಸೂರು ಜಿಲ್ಲೆ ಎಸ್ಸೆಸ್ಸೆಲ್ಸಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದರೆ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದೆ.

ಎಸ್ಸೆಸ್ಸೆಲ್ಸಿಯಲ್ಲಿ ಕುಸಿತ- ಮತ್ತೆ ನಿರಾಶೆ: 

2024-25ನೇ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷಾ ಫಲಿತಾಂಶದಲ್ಲಿ ಜಿಲ್ಲೆಯ ಫಲಿತಾಂಶ ತೀವ್ರ ಇಳಿಕೆಯಾಗಿದೆ. ಶೇ.67.83ರಷ್ಟು ಕಡಿಮೆ ಫಲಿತಾಂಶ ಬಂದಿದ್ದು, 7ರಿಂದ 15ನೇ ಸ್ಥಾನ ಜಿಲ್ಲೆ ಕುಸಿದಿದೆ. 
ಕಳೆದ ಬಾರಿ ಶೇ.87.19ರಷ್ಟು ಫಲಿತಾಂಶವಾಗಿತ್ತು. ಜಿಲ್ಲೆ ಅಗ್ರ 10 ಸ್ಥಾನದೊಳಗೆ ಬರಬೇಕೆಂಬ ಗುರಿ ಈ ಸಲವೂ ಈಡೇರಲಿಲ್ಲ. ಪ್ರಸ್ತಕ 2025-26ನೇ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಹೆಚ್ಚಳಕ್ಕೆ 25 ಅಂಶಗಳ ಕಾರ್ಯಕ್ರಮ ರೂಪಿಸಲಾಗಿದ್ದು, ಇದರೊಂದಿಗೆ ಜಿಲ್ಲೆ ‘ಟಾಪ್ 10’ ಒಳಗೆ ಬರಲು ಕಸರತ್ತು ಮಾಡಲಾಗುತ್ತಿದೆ.

ಪಿಯುಸಿ 12ನೇ ಸ್ಥಾನಕ್ಕೆ ಜಿಗಿತ

2024-25ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 17ರಿಂದ  12ನೇ ಸ್ಥಾನಕ್ಕೆ ಜಿಗಿತ ಕಂಡಿರುವುದು ಗಮನಾರ್ಹ ಸಂಗತಿಯಾಗಿದೆ. ಶೇ.74.30ರಷ್ಟು ಫಲಿತಾಂಶವಾಗಿದೆ. ವಿಜ್ಞಾನ ವಿಭಾಗದಲ್ಲಿ ಶೇ.81.95, ವಾಣಿಜ್ಯ ವಿಭಾಗದಲ್ಲಿ ಶೇ.75, ಕಲಾ ವಿಭಾಗ ಶೇ.57.62ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು.

ಎಂಸಿಡಿಸಿಸಿಯಲ್ಲಿ ಕೈ ಮೇಲುಗೈ: 

ಜೂನ್ 26ರಂದು ನಡೆದ ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್(ಎಂಸಿಡಿಸಿಸಿ) ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಕೈ ಪಡೆಗೆ ಅಧ್ಯಕ್ಷ ಸ್ಥಾನ ಅನಾಯಾಸವಾಗಿ ದೊರೆಯುವ ಸಾಧ್ಯತೆ ಹೆಚ್ಚಿದೆ.

ಜಿಟಿಡಿ ಪಕ್ಷದೊಂದಿಗೆ ಮತ್ತೆ ಮುನಿಸಿ  

ಶಾಸಕ ಜಿ.ಟಿ.ದೇವೇಗೌಡ ಮತ್ತೆ ಜೆಡಿಎಸ್ ನಾಯಕರೊಂದಿಗೆ ಮುನಿಸಿಕೊಂಡು ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದು, ಕಾಂಗ್ರೆಸ್‌ನೊಂದಿಗೆ ನೆಂಟಸ್ತಿಕೆ ಬೆಳೆಸಲು ತುದಿಗಾಲ ಮೇಲೆ ನಿಂತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ವಿಧಾನಸಭೆಯ ಜೆಡಿಎಸ್ ಪ್ರತಿಪಕ್ಷ ನಾಯಕ ಸ್ಥಾನ ಕೈತಪ್ಪಿದ್ದರಿಂದ ಜಿಟಿಡಿ ಅಸಮಾಧಾನಗೊಂಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯ ಮುನ್ನವೂ ಹೀಗೆ ಮನಸ್ತಾಪಗೊಂಡು ಪಕ್ಷದಿಂದ ದೂರವಾಗಿದ್ದರು. ಇದು ಇದೀಗ ಮತ್ತೆ ಪುನರಾವರ್ತನೆಯಾಗಿದೆ. ಇದರ ಫಲವಾಗಿ ಜಿಲ್ಲೆಯಲ್ಲಿ ಜೆಡಿಎಸ್‌ಗೆ ಪ್ರಬಲ ನಾಯಕತ್ವ ಇಲ್ಲದಂತಾಗಿದೆ. 

ಜಿಪಂ, ತಾಪಂ ಅನಾಥ 

ಮೈಸೂರು ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗಳಿಗೆ ನಾಲ್ಕುವರೆ ವರ್ಷವಾದರೂ ಚುನಾವಣೆ ನಡೆದಿಲ್ಲ. ಜನಪ್ರತಿನಿಗಳಿಲ್ಲದೆ ಕಳೆದ ಸುದೀರ್ಘ ಅವಧಿ ಇದಾಗಿದೆ.
 ಜನಪ್ರತಿನಿಧಿಗಳಿಲ್ಲದೆ ಅಧಿಕಾರಶಾಹಿ ಆಡಳಿತ ನಡೆಯುತ್ತಿದೆ. ಚುನಾಯಿತ ಪ್ರತಿನಿಧಿಗಳು ಇಲ್ಲದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಯಾವಾಗ ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಕಾಡುತ್ತಿದೆ. ಜಿಪಂ ಅಧಿಕಾರಾವಧಿ 2021ರ ಏಪ್ರಿಲ್‌ನಲ್ಲಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಆಡಳಿತಾದಿಕಾರಿಗಳಾಗಿರುವ ಹಿರಿಯ ಐಎಎಸ್ ಅಧಿಕಾರಿಗಳ ಕಾರುಬಾರು ನಡೆದಿದೆ.
 ಪಂಚಾಯತ್‌ರಾಜ್ ವ್ಯವಸ್ಥೆ ರಚನೆಯಾದ ನಂತರ ಇಷ್ಟೊಂದು ಸುದೀರ್ಘ ಅವಧಿವರೆಗೆ ಚುನಾವಣೆ ನಡೆಸದೆ ಆಡಳಿತಾಧಿಕಾರಿಗಳ ಆಡಳಿತ ನಡೆದ ಉದಾಹರಣೆ ಇಲ್ಲ.

ಅಪರಾಧ ಪ್ರಕರಣಳಿಂದ ಮುಜುಗರ 

ಅಪರಾಧ ಸುದ್ದಿಗಳಿಂದ ಈ ಸಲ ಮೈಸೂರು ಜಿಲ್ಲೆ ರಾಜ್ಯಾದ್ಯಂತ ಹೆಚ್ಚು ಸದ್ದು ಮಾಡಿದೆ.
ಮುಂಬೈ ಪೊಲೀಸರು ನಗರಕ್ಕೆ ಬಂದು ಪತ್ತೆ ಹಚ್ಚಿದ ಭಾರಿ ಪ್ರಮಾಣದ ಮಾದಕವಸ್ತು ತಯಾರಿಕಾ ಘಟಕ, ಉದಯಗಿರಿ ಪೊಲೀಸ್ ಠಾಣೆಗೆ ಕಲ್ಲೆಸೆತ, ಬಾಲಕಿಯ ಮೇಲೆ ಅತ್ಯಾಚಾರ, ‘ಕೊಲೆಯಾಗಿದ್ದಾರೆ’ ಎನ್ನಲಾಗಿದ್ದ ಮಹಿಳೆ ಪತ್ತೆಯಾದ ಪ್ರಕರಣಗಳು ತೀವ್ರ ಮುಜುಗರ ಉಂಟು ಮಾಡಿದವು. 
ಸಾಮಾಜಿಕ ಮಾಧ್ಯಮದಲ್ಲಿ ಸಮುದಾಯವನ್ನು ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿ ಫೆ.10ರಂದು ಮುಸ್ಲಿಂ ಸಮುದಾಯದ ಸಾವಿರಾರು ಜನ ಜಮಾಯಿಸಿ ಉದಯಗಿರಿ ಠಾಣೆ ಮೇಲೆ ಕಲ್ಲು ತೂರಿದ್ದರು. ಪೋಸ್ಟ್ ಹಾಕಿದ್ದ ಕಲ್ಯಾಣಗಿರಿಯ ನಿವಾಸಿ ಸತೀಶ್ ಹಾಗೂ ಕಲ್ಲು ಎಸೆದ ಅನೇಕರನ್ನು ಬಂಧಿಸಲಾಗಿತ್ತು. ಇದು ರಾಜಕೀಯ ಜಟಾಪಟಿಗೂ ಕಾರಣವಾಯಿತು.
ದಸರಾ ಸಂದರ್ಭದಲ್ಲಿ ದಸರಾ ವಸ್ತುಪ್ರದರ್ಶನ ಮೈದಾನದ ಬಳಿ ನಡೆದ ಎರಡು ಪ್ರಕರಣಗಳು ಕಳಂಕ ಉಂಟು ಮಾಡಿದ್ದವು.

ಬಾಲಕಿಯನ್ನು ಅಪಹರಿಸಿ, ಆಕೆಯ ಮೇಲೆ ಅತ್ಯಾಚಾರ

ಅ.7ರಂದು ಕ್ಯಾತಮಾರನಹಳ್ಳಿ ನಿವಾಸಿ ಗಿಲ್ಕಿ ವೆಂಕಟೇಶ್ ದೊಡ್ಡಕೆರೆ ಮೈದಾನದ ಬಳಿಯ ಟ್ಯಾಂಕ್ ಬಂಡ್ ರಸ್ತೆಯಲ್ಲಿ ಕೊಲೆ ಮಾಡಿದ ಪ್ರಕರಣ ಆತಂಕ ಮೂಡಿಸಿತು. ದಸರಾದಲ್ಲಿ ಬಲೂನ್ ಮಾರಾಟಕ್ಕೆ ಕುಟುಂಬದೊಂದಿಗೆ ಬಂದಿದ್ದ ಬಾಲಕಿಯನ್ನು ಅಪಹರಿಸಿ, ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಭಯ ಹುಟ್ಟಿಸಿತ್ತು.

ಮುಂಬೈ ಪೊಲೀಸರಿಂದ ಮಾದಕ ವಸ್ತು ತಯಾರಿಕಾ ಘಟಕ ಪತ್ತೆ

ಜುಲೈ 26ರಂದು ಬನ್ನಿಮಂಟಪದ ವರ್ತುಲ ರಸ್ತೆಯ ಉನ್ನತಿ ನಗರದ ಗ್ಯಾರೇಜ್‌ನಲ್ಲಿ ನಡೆಸುತ್ತಿದ್ದ ಮಾದಕ ವಸ್ತು ತಯಾರಿಕಾ ಘಟಕಕ್ಕೆ ಮಹಾರಾಷ್ಟ್ರ ಪೊಲೀಸರು ನಗರ ಪೊಲೀಸರ ಸಹಾಯ ಪಡೆದು ದಾಳಿ ನಡೆಸಿ 6 ಜನರನ್ನು ಬಂಧಿಸಿದ್ದರು. ಈ ಘಟನೆಯು ಅಂತಾರಾಜ್ಯ ಮಟ್ಟದಲ್ಲಿ ಸುದ್ದಿಯಾಯಿತು. ಇಲಾಖೆಯು ವಿಶೇಷ ಕಾರ್ಯಾಚರಣೆ ನಡೆಸಿ ಮಾದಕ ವಸ್ತು ಸೇವನೆ, ಮಾರಾಟ ಮಾಡುವವರನ್ನು ಬಂಧಿಸಿತು.

ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟ 

ವರ್ಷಾಂತ್ಯದಲ್ಲಿ ಡಿ.25ರಂದು ಕ್ರಿಸ್‌ಮಸ್ ಹಬ್ಬ ಸಂದರ್ಭದಲ್ಲಿ ಮೈಸೂರು ಅರಮನೆ ಬಳಿ ಗುರುವಾರ ಸಂಭವಿಸಿದ ಬಲೂನ್‌ಗೆ ತುಂಬ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಮೂವರು ಮೃತಪಟ್ಟಿದ್ದರು. ಇದು ರಾಜ್ಯಮಟ್ಟದಲ್ಲಿ ಸದ್ದು ಮಾಡಿತು.