ನಗರದ ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಾ.ಕಾವೇರಿ ನಂಬಿಸನ್, ಡಾ.ಬಿ.ಆರ್.ಜಯಕುಮಾರಿ, ಡಾ.ಟಿ.ವಿಜಯಲಕ್ಷ್ಮೀ ಮುರುಳೀಧರ್ ಇತರರಿದ್ದರು.
ಆಧುನಿಕ ಸಿನಿಮಾಗಳು ಮತ್ತು ಸಾಹಿತ್ಯ ಕೃತಿಗಳು ಮಹಿಳೆಯರ ವಲಸೆ, ಸಾಮಾಜಿಕ ಸ್ಥಾನಮಾನ ಹಾಗೂ ಲೈಂಗಿಕ ಅಸ್ಮಿತೆಯಂತಹ ಗಹನವಾದ ವಿಷಯಗಳನ್ನು ವಿಶ್ಲೇಷಿಸುವ ಆಳವಾದ ತಾಣಗಳಾಗಿವೆ ಎಂದು ಕೊಡಗಿನ ಖ್ಯಾತ ಶಸ್ತ್ರ ಚಿಕಿತ್ಸಕಿ ಹಾಗೂ ಕಾದಂಬರಿಗಾರ್ತಿ ಡಾ.ಕಾವೇರಿ ನಂಬಿಸನ್ ಅಭಿಪ್ರಾಯಪಟ್ಟರು.
ನಗರದ ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್ ವಿಭಾಗ ಮತ್ತು ಐಕ್ಯೂಎಸಿ ವತಿಯಿಂದ ಗುರುವಾರ ಆಯೋಜಿಸಿದ್ದ ‘ಪರಂಪರೆ ಮತ್ತು ಬದಲಾವಣೆಯ ನಡುವೆ; ಸಮಕಾಲೀನ ಭಾರತೀಯ ಸಾಹಿತ್ಯ ಮತ್ತು ಸಿನಿಮಾಗಳಲ್ಲಿ ಮಹಿಳಾ ಧ್ವನಿಗಳ ಶೋಧ’ ಎಂಬ ವಿಷಯದ ಕುರಿತು ಒಂದು ದಿನದ ರಾಷ್ಟ್ರ ಮಟ್ಟದ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬದಲಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಮಹಿಳೆಯರು ಕೇವಲ ಸಾಂಸ್ಕೃತಿಕ ಚೌಕಟ್ಟುಗಳಿಗೆ ಬದ್ಧರಾಗದೆ, ತಮ್ಮದೇ ಆದ ವಿಶಿಷ್ಟ ವ್ಯಕ್ತಿನಿಷ್ಠೆಯನ್ನು ರೂಪಿಸಿಕೊಳ್ಳುತ್ತಿದ್ದಾರೆ ಎಂದರು.
ಭಾರತದ ಪ್ರಪ್ರಥಮ ವೈದ್ಯೆಯರಲ್ಲೊಬ್ಬರಾಗಿದ್ದ ರುಕ್ಮಾ ಬಾಯ್ ರಾವತ್ ಅವರ ಹೆಸರನ್ನು ಉಲ್ಲೇಖಿಸಿದ ಅವರು, ಅಂದಿನ ಕಾಲದ ಸಾಮಾಜಿಕ ಕಟ್ಟುಪಾಡುಗಳನ್ನು ಮೆಟ್ಟಿ ನಿಂತು ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅವರ ಧೈರ್ಯ ಇಂದಿನ ಪೀಳಿಗೆಗೆ ಮಾದರಿ ಎಂದರು.
ಸಾಹಿತ್ಯಕ್ಕೆ ಯಾವುದೇ ಲಿಂಗ, ಗಡಿಯಿಲ್ಲ. ಸಾಹಿತ್ಯ ನಿಮ್ಮೊಳಗಿನ ನಿಮ್ಮನ್ನು ಹುಡುಕಿಕೊಳ್ಳಲು ನೆರವಾಗಲಿದೆ. ಸಾಹಿತ್ಯದ ಮೂಲಕ ವಿಭಿನ್ನವಾದ ಬದುಕನ್ನು ಜೀವಿಸಬಹುದು, ಅನುಭವಿಸಬಹುದು ಎಂದರು.
ಸಾಹಿತ್ಯಕ್ಕೆ ಕಾಲ್ಪನಿಕ, ಕಾಲ್ಪನಿಕವಲ್ಲದ ಜಗತ್ತನ್ನು ಕಟ್ಟಿಕೊಡುವ ಶಕ್ತಿಯಿದೆ. ಶೈಕ್ಷಣಿಕವಾಗಿ ಮಾತ್ರವಲ್ಲದೆ ಸಿನಿಮಾ, ನಾಟಕ, ಕಲೆ, ವಿಜ್ಞಾನ ಸೇರಿದಂತೆ ಅನೇಕ ಕ್ಷೇತ್ರಗಳ ವಿಸ್ತರಣೆಗೆ ಸಾಹಿತ್ಯವೇ ಮೂಲವಾಗಿದೆ. ಲೇಖಕರು ಪರಂಪರೆಯಿಂದ ಬಂದ ಕಟ್ಟುಪಾಡುಗಳನ್ನು ಮೀರಿ, ಹೊಸ ಸ್ವರೂಪದ ವ್ಯಕ್ತಿನಿಷ್ಠೆಯನ್ನು ಹೇಗೆ ಕಂಡುಕೊಳ್ಳುತ್ತಿದ್ದಾರೆ ಎಂಬುದು ಮುಖ್ಯ ಎಂದರು.
ಪ್ರಾಂಶುಪಾಲರಾದ ಡಾ.ಬಿ.ಆರ್.ಜಯಕುಮಾರಿ ಮಾತನಾಡಿ, ಸಿನಿಮಾ ಮತ್ತು ಸಾಹಿತ್ಯ ಬಹುಮುಖ್ಯ ಮಾಧ್ಯಮಗಳು. ಸಾಹಿತ್ಯ ಮತ್ತು ಸಿನಿಮಾ ಎನ್ನುವವು ಕೇವಲ ಮನರಂಜನೆಯ ಮಾಧ್ಯಮಗಳಲ್ಲ, ಬದಲಿಗೆ ಸಮಾಜವು ತನ್ನನ್ನು ತಾನು ಅವಲೋಕಿಸಿಕೊಳ್ಳುವ ಪ್ರಬಲ ಸಾಂಸ್ಕೃತಿಕ ತಾಣಗಳಾಗಿವೆ ಎಂದರು.
ಮಹಾಜನ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಡಾ.ಟಿ.ವಿಜಯಲಕ್ಷ್ಮಿಮುರುಳೀಧರ್, ಕಾಲೇಜಿನ ಎಲ್ಲ ವಿಭಾಗದ ಅಧ್ಯಾಪಕರು, ಅಧ್ಯಾಪಕೇತರರು ಉಪಸ್ಥಿತರಿದ್ದರು. ವಿವಿಧ ಕಾಲೇಜಿನ ಅಧ್ಯಾಪಕರು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ವಿಷಯ ವಿನಿಮಯ ಮಾಡಿಕೊಂಡರು.