ಹುಣಸೂರು ತಾಲೂಕಿನ ಉಮ್ಮತ್ತೂರು ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ನಿರ್ವಹಣಾ ಸಮಿತಿ ರಚಿಸಿ ಸಭೆ ನಡೆಸಲಾಯಿತು.
- ಸಮುದಾಯದ ಸಹಭಾಗಿತ್ವದಲ್ಲಿ ನಿರ್ವಹಣಾ ಸಮಿತಿ ರಚನೆ
- ಗ್ರಾಮಮಟ್ಟದಲ್ಲಿ ಕೇಂದ್ರಗಳ ಚಟುವಟಿಕೆಗಳಿಗೆ ಉತ್ತೇಜನ
ಹುಣಸೂರು: ಸಮುದಾಯದ ಸಹಭಾಗಿತ್ವದೊಂದಿಗೆ ಅಂಗನವಾಡಿ ಕೇಂದ್ರಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಂಗನವಾಡಿ ಕೇಂದ್ರಗಳ ನಿರ್ವಹಣಾ ಸಮಿತಿ(ಎಎಂಸಿ)ರಚನೆಗೆ ಕ್ರಮವಹಿಸಿದ್ದು, ಗ್ರಾಮಮಟ್ಟದಲ್ಲಿ ಚಟುವಟಿಕೆಗಳಿಗೆ ಸಕಾರಾತ್ಮಕ ಉತ್ತೇಜನ ದೊರಕಲಿದೆ.
ಪುಟಾಣಿ ಮಕ್ಕಳ ಪೌಷ್ಟಿಕತೆಯೊಂದಿಗೆ ಆರೋಗ್ಯಪೂರ್ಣ ಬೆಳವಣಿಗೆ ಕುರಿತಾದ ವಿಶ್ವದಲ್ಲಿಯೇ ಅತಿದೊಡ್ಡ ಯೋಜನೆ ಇದಾಗಿದೆ. ಕೇಂದ್ರ ಸರ್ಕಾರವು ಮಿಷನ್ ಸಕ್ಷಮ್ ಅಂಗನವಾಡಿ ಮತ್ತು ಪೋಷಣ್ 2.0 ಅಭಿಯಾನದಡಿ ಅಂಗನವಾಡಿ ಕೇಂದ್ರಗಳಲ್ಲಿ 6 ಪ್ರಮುಖ ಸೇವೆಗಳಲ್ಲಿ ಸಮುದಾಯದ ಸಹಭಾಗಿತ್ವದ ಜವಾಬ್ದಾರಿ ಗುರುತಿಸಿದ್ದು, ಸಕ್ಷಮ್ ಅಂಗನವಾಡಿ ಕೇಂದ್ರಗಳಲ್ಲಿ ಮಾತ್ರ ಅಂಗನವಾಡಿ ಮಾನಿಟರಿಂಗ್ ಕಮಿಟಿ (ಅಂಗನವಾಡಿ ನಿರ್ವಹಣಾ ಸಮಿತಿ) ರಚಿಸಲು ಸೂಚಿಸಿದೆ.
ತಾಲೂಕಿನಲ್ಲಿ 385 ಅಂಗನವಾಡಿ ಕೇಂದ್ರಗಳಿದ್ದು, ಈ ಪೈಕಿ 192 ಕೇಂದ್ರಗಳನ್ನು ಸಕ್ಷಮ್ ಅಂಗನವಾಡಿ ಕೇಂದ್ರಗಳೆಂದು ಗುರುತಿಸಲಾಗಿದ್ದು, ಈ ಕೇಂದ್ರಗಳಲ್ಲಿ ನಿರ್ವಹಣಾ ಸಮಿತಿ ರಚನೆಗೆ ಉಪಕ್ರಮ ಕೈಗೊಳ್ಳಲಾಗುತ್ತಿದೆ. ಯಾವ ಅಂಗನವಾಡಿ ಕೇಂದ್ರವೂ ಸ್ವಂತ ಕಟ್ಟಡದೊಂದಿಗೆ ಕುಡಿಯುವ ನೀರು, ಶೌಚಗೃಹ, ಉಗ್ರಾಣ, ಅಡುಗೆ ಕೊಠಡಿ ಮುಂತಾದವುಗಳನ್ನು ಹೊಂದಿರುತ್ತವೆಯೋ ಅಂತಹ ಕೇಂದ್ರಗಳನ್ನು ಸಕ್ಷಮ್ ಕೇಂದ್ರಗಳೆಂದು ಗುರುತಿಸಲಾಗುತ್ತದೆ.
ಅಂಗನವಾಡಿ ಕೇಂದ್ರಗಳು ಗ್ರಾಮೀಣಮಟ್ಟದಲ್ಲಿ 6 ಪ್ರಮುಖ ಸೇವೆಗಳನ್ನು ನೀಡುತ್ತವೆ. ಗ್ರಾಮೀಣ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಮನೆಯಲ್ಲಿ ಸಿಗುವಂತಹ ಸೇವೆಗಳೇ ಸಿಗುತ್ತಿರುತ್ತವೆ. ಮುಖ್ಯವಾಗಿ ಪುಟಾಣಿಗಳಿಗೆ ಶಾಲಾ ಪೂರ್ವ ಅನೌಪಚಾರಿಕ ಶಿಕ್ಷಣ ನೀಡುವ ಕಾರ್ಯವನ್ನು ಅಂಗನವಾಡಿ ಕಾರ್ಯಕರ್ತೆಯರು ಮಾಡುತ್ತಾರೆ. ಅದರೊಂದಿಗೆ ಪೌಷ್ಟಿಕತೆ ಮತ್ತು ಆರೋಗ್ಯ ಶಿಕ್ಷಣ, ರೋಗನಿರೋಧಕ ಶಕ್ತಿ ವೃದ್ಧಿಸುವ, ಆರೋಗ್ಯ ತಪಾಸಣೆಯಂಥ ಕಾರ್ಯಕ್ರಮ ಆಯೋಜಿಸುವ, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರ ಆರೋಗ್ಯ ವೃದ್ಧಿಗೆ ಕ್ರಮ, 0-6 ವಯೋಮಾನದ ಮಕ್ಕಳ ಶಿಶುಪಾಲನೆ ಲಸಿಕಾ ಅಭಿಯಾನ ಮತ್ತು ಆರಂಭಿಕ ಪ್ರಚೋದನೆ ಹಾಗೂ ಹದಿಹರೆಯದ ಬಾಲಕಿ(14ರಿಂದ 18ವರ್ಷಗಳು)ಯರಿಗೆ ರೆಫೆರಲ್ ಸೇವೆಗಳನ್ನು ಅಂಗನವಾಡಿ ಕೇಂದ್ರಗಳು ನೀಡುತ್ತವೆ.
ಈ ಎಲ್ಲ ಸೇವೆಗಳಲ್ಲೂ ಸಮುದಾಯವನ್ನು ಪಾಲ್ಗೊಳ್ಳುವಂತೆ ಮಾಡುವ ಮೂಲಕ ಅಂಗನವಾಡಿ ಕೇಂದ್ರಗಳ ಚಟುವಟಿಕೆಗಳು ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಜವಾಬ್ದಾರಿಯುತವಾಗುವ ಮೂಲಕ ಭವಿಷ್ಯದ ಕುಡಿಗಳನ್ನು ಸದೃಢರನ್ನಾಗಿಸುವುದೇ ಯೋಜನೆಯ ಮೂಲ ಉದ್ದೇಶವಾಗಿದೆ ಎಂದು ಎಸಿಡಿಪಿಒ ಕೆ.ಸೋಮಯ್ಯ ತಿಳಿಸಿದ್ದಾರೆ.
ಸಮುದಾಯಗಳು ಜವಾಬ್ದಾರಿಯನ್ನು ಹಂಚಿಕೊಳ್ಳುವ ಮೂಲಕ ವಿಕೇಂದ್ರೀಕೃತ ಆಡಳಿತ ಬಲಪಡಿಸಲು ಉದ್ದೇಶಿಸಲಾಗಿದೆ. ಅಂಗನವಾಡಿ ಕೇಂದ್ರಗಳ ಮೇಲೆ ಸಮುದಾಯದ ಸ್ವಾಮ್ಯವನ್ನು ಉತ್ತೇಜಿಸುವ ಮೂಲಕ ಕಾರ್ಯಕರ್ತೆಯರ ಒತ್ತಡ ಕಡಿಮೆಗೊಳಿಸಿ ಪರಿಣಾಮಕಾರಿ ಚಟುವಟಿಕೆಗಳನ್ನು ಮಾಡುವುದು. ಆರೋಗ್ಯ ತಪಾಸಣೆ, ಪೌಷ್ಟಿಕ ಆಹಾರ ವಿತರಣೆಯಂಥ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಪರಿಶೀಲನೆ, ಸಲಹೆ, ಸೂಚನೆ ಮತ್ತು ಸಹಕಾರ ನೀಡುವುದು. ಆರೋಗ್ಯ ಮತ್ತು ಶಿಕ್ಷಣ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಬೆಂಬಲ ಪಡೆಯುವುದು.
ಅಂಗನವಾಡಿ ನಿರ್ವಹಣಾ ಸಮಿತಿ ಒಟ್ಟು 7 ಸದಸ್ಯರನ್ನು ಒಳಗೊಂಡಿದ್ದು ಎಲ್ಲರೂ ಮಹಿಳಾ ಸದಸ್ಯರೇ ಇರುತ್ತಾರೆ. ಕೇಂದ್ರ ವ್ಯಾಪ್ತಿಯ ಮೇಲ್ವಿಚಾರಕಿ, ಅಂಗನವಾಡಿ ಕಾರ್ಯಕರ್ತೆ, ಆಶಾ ಕಾರ್ಯಕರ್ತೆ, ಇಬ್ಬರು ಮಕ್ಕಳ ತಾಯಂದಿರು, ಸರ್ಕಾರೇತರ ಸಂಘ ಸಂಸ್ಥೆ ಅಥವಾ ಎಸ್‌ಎಚ್‌ಜಿಯ ಒಬ್ಬ ಪ್ರತಿನಿಧಿ ಮತ್ತು ಶಾಲಾ ಶಿಕ್ಷಕಿಯೊಬ್ಬರು ಸಮಿತಿ ಸದಸ್ಯರಿರುತ್ತಾರೆ. ಪ್ರತಿ ಎರಡು ತಿಂಗಳಿಗೊಮ್ಮೆ ಸಮಿತಿ ಸಭೆ ಕಡ್ಡಾಯಗೊಳಿಸಲಾಗಿದೆ. ಕೇಂದ್ರದ ನಿರ್ವಹಣೆಯ ಮೇಲ್ವಿಚಾರಣೆ, ಸೇವೆಗಳ ಗುಣಮಟ್ಟ ಪರಿಶೀಲನೆ, ಸಮಯೋಚಿತ ವಿತರಣೆ ಖಚಿತಪಡಿಸಿಕೊಳ್ಳುವುದು, ಮಕ್ಕಳ ಜನ್ಮದಿನ, ಸ್ಥಳೀಯ ಹಬ್ಬಗಳಲ್ಲಿ ಪಾಲ್ಗೊಳ್ಳುವಿಕೆ, ಪಂಚಾಯತ್ ರಾಜ್ ಮತ್ತು ಎನ್‌ಆರ್‌ಎಲ್‌ಎಂಗಳೊಂದಿಗೆ ಸಮನ್ವಯ ಸಾಧಿಸುವುದು, ಕುಂದುಕೊರತೆಗಳಿದ್ದರೆ ಮಾಹಿತಿ ಪಡೆದು ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದು ಇವೇ ಮುಂತಾದ ಪ್ರಮುಖ ಕರ್ತವ್ಯಗಳನ್ನು ಸಮಿತಿ ಸದಸ್ಯರು ಹೊಂದಿರುತ್ತಾರೆ.
ತಾಲೂಕಿನಲ್ಲಿ ಈಗಾಗಲೇ 5 ಕೇಂದ್ರಗಳಲ್ಲಿ ಸಮಿತಿ ರಚಿಸಲಾಗಿದೆ. ಆರೋಗ್ಯ ಮತ್ತು ಶಿಕ್ಷಣ ಎರಡನ್ಣೂ ಸರಿದೂಗಿಸಿಕೊಂಡು ಸಮುದಾಯದ ಬೆಂಬಲದೊಂದಿಗೆ ಅಂಗನವಾಡಿ ಕೇಂದ್ರಗಳನ್ನು ಸಬಲೀಕರಣಗೊಳಿಸುವತ್ತ ಎಲ್ಲರೂ ಹೆಜ್ಜೆ ಹಾಕಬೇಕಿದೆ ಎಂದು ಎಸಿಡಿಪಿಒ ಕೆ.ಸೋಮಯ್ಯ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಜೂನ್ ತಿಂಗಳಿನಿಂದ ಯೋಜನೆ ದೇಶಾದ್ಯಂತ ಜಾರಿಗೊಳಿಸಿದ್ದು, ಗ್ರಾಮೀಣ ಭಾಗದಲ್ಲಿ ಪಾಲಕರು ಖಾಸಗಿ ಶಿಕ್ಷಣ ಸಂಸ್ಥೆಗಳ ವ್ಯಾಮೋಹವನ್ನು ತ್ಯಜಿಸಿ ಮನೆ ಬಾಗಿಲಿನಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ ಕರೆತರಬೇಕು. ಸಮುದಾಯ ಸಕಾರಾತ್ಮಕ ಬೆಂಬಲ ನೀಡುವ ಮೂಲಕ ಬೆಂಬಲಿಸಬೇಕು. ಸರ್ಕಾರ ಅತ್ಯಂತ ಉತ್ತಮ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ತಾಯಿ ಮತ್ತು ಮಗುವಿನ ಆರೋಗ್ಯ ಮತ್ತು ಶಿಕ್ಷಣಕ್ಕೆ ಬುನಾದಿ ಹಾಕುತ್ತಿದೆ. ತಾಲೂಕಿನಲ್ಲಿ ಸಕ್ಷಮ್ ಅಂಗನವಾಡಿ ಕೇಂದ್ರಗಳಲ್ಲಿ ನಿರ್ವಹಣಾ ಸಮಿತಿಗಳನ್ನು ರಚಿಸುವ ಕಾರ್ಯ ಪ್ರಗತಿಯಲ್ಲಿದೆ.
ಬೋರೇಗೌಡ ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಹುಣಸೂರು