ಎಚ್‌ಪಿಸಿಎಲ್ ವತಿಯಿಂದ ಆರೋಗ್ಯ ಇಲಾಖೆಗೆ ಕೊಡುಗೆ ನೀಡಿದ ಆಂಬುಲೆನ್ಸ್ ಅನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಸಿ. ಕುಮಾರಸ್ವಾಮಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಿದರು. ಸಿರಾಜ್ ಅಹಮದ್, ಗೋಪಿನಾಥ್, ಡಾ.ಶಿವಶಂಕರ್, ಆರ್.ರಮೇಶ್, ಬಿ.ವಿಜಯ್ ಕುಮಾರ್, ಪಿ.ಅಜಿತ್ ಇದ್ದರು. 
ಮೈಸೂರು

ಎಚ್‌ಪಿಸಿಎಲ್‌ನಿಂದ ಆಂಬುಲೆನ್ಸ್ ಕೊಡುಗೆ

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ ಹಸಿರು ನಿಶಾನೆ
  • ಆಂಬುಲೆನ್ಸ್ ಸೇವೆ ಸಾರ್ವಜನಿಕರಿಗೆ ನೆರವು
ಮೈಸೂರು: ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್(ಎಚ್‌ಪಿಸಿಎಲ್) ಸಂಸ್ಥೆಯ ಸಿಎಸ್‌ಆರ್ ನಿಧಿಯಡಿ ಆರೋಗ್ಯ ಇಲಾಖೆಗೆ ಕೊಡುಗೆಯಾಗಿ ನೀಡಲಾದ ಬಿಎಲ್‌ಎಸ್ (ಬೇಸಿಕ್ ಲೈಫ್ ಸಪೋರ್ಟ್) ಆಂಬುಲೆನ್ಸ್ ಅನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಿದರು.
ನಗರದ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಂಬುಲೆನ್ಸ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ ಮೂಲಕ ಸಂಪರ್ಕ ಹೊಂದಿರುವ ಹುಣಸೂರು ಭಾಗದಲ್ಲಿ ರಸ್ತೆ ಅಪಘಾತಗಳ ಸಂಭವ ಹೆಚ್ಚಿರುವ ಹಿನ್ನೆಲೆಯಲ್ಲಿ ತುರ್ತು ವೈದ್ಯಕೀಯ ಸೇವೆಯನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿತ್ತು. ಹಾಗಾಗಿ ಹೆಚ್ಚುವರಿ ಆಂಬುಲೆನ್ಸ್ ಸೇವೆ ಸಾರ್ವಜನಿಕರಿಗೆ ನೆರವಾಗಲಿದೆ ಎಂದು ತಿಳಿಸಿದರು.
ಹೊಸ ಬಿಎಲ್‌ಎಸ್ ಆಂಬುಲೆನ್ಸ್‌ನಲ್ಲಿ ಆಕ್ಸಿಜನ್ ವ್ಯವಸ್ಥೆ, ಸಕ್ಷನ್ ಯಂತ್ರ, ತುರ್ತು ಜೀವ ರಕ್ಷಕ ಉಪಕರಣಗಳು ಸೇರಿದಂತೆ ಅಗತ್ಯ ವೈದ್ಯಕೀಯ ಸೌಲಭ್ಯ ಅಳವಡಿಸಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ರೋಗಿಯನ್ನು ತ್ವರಿತವಾಗಿ ಜಿಲ್ಲಾಸ್ಪತ್ರೆ ಅಥವಾ ಉನ್ನತ ಚಿಕಿತ್ಸಾ ಕೇಂದ್ರಗಳಿಗೆ ಸಾಗಿಸಲು ನೆರವಾಗಲಿದೆ ಎಂದು ಮಾಹಿತಿ ನೀಡಿದರು.
ಹುಣಸೂರು ತಾಲೂಕಿನಲ್ಲಿ ಸುಮಾರು 2 ಲಕ್ಷ ಜನಸಂಖ್ಯೆ ಇದ್ದು, ಪಟ್ಟಣ ವ್ಯಾಪ್ತಿಯಲ್ಲೇ ಸುಮಾರು 50 ಸಾವಿರ ಜನರು ವಾಸಿಸುತ್ತಿದ್ದಾರೆ. ಈಗಾಗಲೇ 2 ಆಂಬುಲೆನ್ಸ್‌ಗಳು ಕಾರ್ಯನಿರ್ವಹಿಸುತ್ತಿದ್ದರೂ ಹೆಚ್ಚುತ್ತಿರುವ ತುರ್ತು ವೈದ್ಯಕೀಯ ಅವಶ್ಯಕತೆ ಹಿನ್ನೆಲೆಯಲ್ಲಿ ಮತ್ತೊಂದು ಆಂಬುಲೆನ್ಸ್ ಸೇರ್ಪಡೆ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಹುಣಸೂರು ಸಾರ್ವಜನಿಕ ತಾಲೂಕು ಆಸ್ಪತ್ರೆಯಿಂದ ಪ್ರತಿದಿನ ಸರಾಸರಿ 5ರಿಂದ 6 ತುರ್ತು ಪ್ರಕರಣಗಳನ್ನು ಮೈಸೂರಿಗೆ ರವಾನಿಸಲಾಗುತ್ತದೆ. ಗರ್ಭಿಣಿಯರು, ನವಜಾತ ಶಿಶುಗಳು ಹಾಗೂ ಎನ್‌ಐಸಿಯು ಚಿಕಿತ್ಸೆ ಅಗತ್ಯವಿರುವ ಮಕ್ಕಳನ್ನು ತ್ವರಿತವಾಗಿ ಜಿಲ್ಲಾ ಕೇಂದ್ರಕ್ಕೆ ಸಾಗಿಸಲು ಸಹಕಾರಿಯಾಗಲಿದೆ. 24 ಗಂಟೆಯೂ ಸುಸಜ್ಜಿತ ತುರ್ತು ವೈದ್ಯಕೀಯ ಸೇವೆ ಒದಗಿಸುವಲ್ಲಿ ಹೊಸ ವಾಹನ ಮಹತ್ವದ ಪಾತ್ರ ವಹಿಸಲಿದೆ ಎಂದರು.
ಪಿಎಚ್‌ಸಿ ಹಂತದಲ್ಲಿ ಕೇವಲ ಪ್ರಾಥಮಿಕ ಚಿಕಿತ್ಸೆ ದೊರೆಯುತ್ತದೆ. ತಾಲೂಕು ಆಸ್ಪತ್ರೆಗಳಲ್ಲಿ ಮೊದಲ ಹಂತದ ಚಿಕಿತ್ಸೆ ದೊರೆಯುತ್ತದೆ. ಇನ್ನೂ ಹೆಚ್ಚುವರಿ ಚಿಕಿತ್ಸೆ ಬೇಕಾದಲ್ಲಿ ಜಿಲ್ಲಾಸ್ಪತ್ರೆಗೆ ಬರಬೇಕಾಗುತ್ತದೆ. ಆ ರೀತಿಯ ಅಗತ್ಯವಿರುವ ರೋಗಿಗಳನ್ನು ತಾಲೂಕು ಕೇಂದ್ರದಿಂದ ಜಿಲ್ಲಾಸ್ಪತ್ರೆಗಳಿಗೆ ಕರೆತರಲು ಸುಸಜ್ಜಿತ ಆಂಬುಲೆನ್ಸ್ ಸೇವೆ ಅಗತ್ಯವಿದ್ದು ಜಿಲ್ಲೆಯಲ್ಲಿ ಸದ್ಯ ಅಗತ್ಯಕ್ಕೆ ತಕ್ಕಷ್ಟು ಆಂಬುಲೆನ್ಸ್ ಇವೆ ಎಂದು ತಿಳಿಸಿದರು.
ಅಧಿಕಾರಿಗಳಾದ ಸಿರಾಜ್ ಅಹಮದ್, ಗೋಪಿನಾಥ್, ಹುಣಸೂರು ಸಾರ್ವಜನಿಕ ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಶಿವಶಂಕರ್ ಹಾಗೂ ಎಚ್‌ಪಿಸಿಎಲ್‌ನ ಪೈಪ್‌ಲೈನ್ ವಿಭಾಗದ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆರ್.ರಮೇಶ್, ಡೆಪ್ಯೂಟಿ ಜನರಲ್ ಮ್ಯಾನೇಜರ್ ಬಿ.ವಿಜಯ್ ಕುಮಾರ್, ಆಪರೇಷನ್ ವಿಭಾಗದ ಜನರಲ್ ಮ್ಯಾನೇಜರ್ ಪಿ.ಅಜಿತ್ ಇದ್ದರು.