ವಿಶ್ವ ತುರ್ತು ಚಿಕಿತ್ಸಾ ದಿನದ ಅಂಗವಾಗಿ ಆಂಬ್ಯುಲೆನ್ಸ್ ಜಾಗೃತಿ ರ‍್ಯಾಲಿ
- ಪ್ರತಿ ನಿಮಿಷವೂ ಅಮೂಲ್ಯ
- ಮಣಿಪಾಲ್ ಆಸ್ಪತ್ರೆ ಮೈಸೂರಿನಿಂದ ಆಂಬ್ಯುಲೆನ್ಸ್ ಜಾಗೃತಿ ರ‍್ಯಾಲಿ
ತುರ್ತು ವೈದ್ಯಕೀಯ ಚಿಕಿತ್ಸೆಯ ಪ್ರಾಮುಖ್ಯತೆ ಮತ್ತು ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ಸಹಕಾರದ ಅಗತ್ಯತೆಯನ್ನು ತಿಳಿಸಲು, ಮಣಿಪಾಲ್ ಆಸ್ಪತ್ರೆ ಮೈಸೂರು 'ವಿಶ್ವ ತುರ್ತು ಚಿಕಿತ್ಸಾ ದಿನ'ದ ಅಂಗವಾಗಿ ಆಂಬ್ಯುಲೆನ್ಸ್ ಜಾಗೃತಿ ರ‍್ಯಾಲಿಯನ್ನು ಹಮ್ಮಿಕೊಂಡಿತ್ತು. 'ಮಣಿಪಾಲ್ ಆಂಬ್ಯುಲೆನ್ಸ್ ರೆಸ್ಪಾನ್ಸ್ ಸರ್ವಿಸ್' (MARS) ಅಡಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ತುರ್ತು ಚಿಕಿತ್ಸಾ ತಜ್ಞರು, ಆಂಬ್ಯುಲೆನ್ಸ್ ಸಿಬ್ಬಂದಿ, ಆಸ್ಪತ್ರೆಯ ಮುಖ್ಯಸ್ಥರು ಮತ್ತು ಸಂಚಾರಿ ಪೊಲೀಸ್ ಅಧಿಕಾರಿಗಳು ಭಾಗವಹಿಸಿ, ಜೀವ ಉಳಿಸುವಲ್ಲಿ ತುರ್ತು ವೈದ್ಯಕೀಯ ಸೇವೆಯ ಪಾತ್ರದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
10 'ಮಾರ್ಸ್' (MARS) ಆಂಬ್ಯುಲೆನ್ಸ್‌ಗಳಿದ್ದ ಈ ರ‍್ಯಾಲಿಗೆ ಮೈಸೂರಿನ ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತರಾದ (DCP) ಕೆ. ಎಸ್. ಸುಂದರ್ ರಾಜ್ ಮತ್ತು ಮೈಸೂರು ಎನ್.ಆರ್. ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ (ACP) ಕೆ. ಟಿ. ಮ್ಯಾಥ್ಯೂಸ್ ಥಾಮಸ್ ಅವರು ಹಸಿರು ನಿಶಾನೆ ತೋರಿದರು. ಈ ಸಂದರ್ಭದಲ್ಲಿ ಪ್ರಮೋದ್ ಕುಂದರ್, ಕ್ಲಸ್ಟರ್ ಡೈರೆಕ್ಟರ್ - ಕೆಎಂಸಿ, ಎಸಿ ಮತ್ತು ಮಣಿಪಾಲ್ ಆಸ್ಪತ್ರೆ ಮೈಸೂರು, ಸಂದೀಪ್ ಪಟೇಲ್ ಬಿ. ಜೆ., ನಿರ್ದೇಶಕರು, ಮಣಿಪಾಲ್ ಆಸ್ಪತ್ರೆ ಮೈಸೂರು, ಡಾ. ಮಕ್ಸೂದ್ ಅಹ್ಮದ್ ಎ. ಆರ್., ಸೀನಿಯರ್ ಕನ್ಸಲ್ಟೆಂಟ್ - ನ್ಯೂರೋಸರ್ಜನ್ (ಸೆರೆಬ್ರೊವಾಸ್ಕುಲರ್ ಮತ್ತು ಎಂಡೋವಾಸ್ಕುಲರ್), ಮಣಿಪಾಲ್ ಆಸ್ಪತ್ರೆ ಮೈಸೂರು ಹಾಗೂ ಡಾ. ಸಿ. ಬಿ. ಕೇಶವಮೂರ್ತಿ, ಸೀನಿಯರ್ ಕನ್ಸಲ್ಟೆಂಟ್ - ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್, ಮಣಿಪಾಲ್ ಆಸ್ಪತ್ರೆ ಮೈಸೂರು ಸೇರಿದಂತೆ ಹಲವು ವೈದ್ಯರು ಉಪಸ್ಥಿತರಿದ್ದರು. ರ‍್ಯಾಲಿಯು ನಗರದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ, "ವೈದ್ಯಕೀಯ ತುರ್ತು ಸಂದರ್ಭದಲ್ಲಿ ಪ್ರತಿ ಸೆಕೆಂಡೂ ಅಮೂಲ್ಯ" ಎಂಬ ಪ್ರಮುಖ ಸಂದೇಶವನ್ನು ಸಾರುತ್ತಾ ಆಸ್ಪತ್ರೆಗೆ ಮರಳಿತು.
ಹೃದಯಾಘಾತ, ಸ್ಟ್ರೋಕ್ ಹಾಗೂ ಅಪಘಾತಗಳಂತಹ ತುರ್ತು ಸ್ಥಿತಿಯಲ್ಲಿ ಚಿಕಿತ್ಸೆಗೆ ಅತ್ಯಂತ ಸೀಮಿತ ಸಮಯವಿರುತ್ತದೆ. ಆಸ್ಪತ್ರೆ ತಲುಪಲು ತಡವಾದರೆ ಜೀವಕ್ಕೆ ಅಪಾಯ. ಆದ್ದರಿಂದ ಆಂಬ್ಯುಲೆನ್ಸ್‌ಗೆ ದಾರಿ ಬಿಡುವುದು ಮತ್ತು ತಕ್ಷಣ ವೈದ್ಯಕೀಯ ನೆರವು ಪಡೆಯುವ ಮಹತ್ವವನ್ನು ಈ ರ‍್ಯಾಲಿ ಮೂಲಕ ಜನರಿಗೆ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮೈಸೂರು ನಗರದ ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತರಾದ (DCP) ಕೆ. ಎಸ್. ಸುಂದರ್ ರಾಜ್ ಅವರು, "ರಸ್ತೆಯಲ್ಲಿ ಹೋಗುವ ಆಂಬ್ಯುಲೆನ್ಸ್ ಕೇವಲ ರೋಗಿಯನ್ನಷ್ಟೇ ಅಲ್ಲ, ಒಂದು ಜೀವದ ಭರವಸೆಯನ್ನು ಕೊಂಡೊಯ್ಯುತ್ತಿರುತ್ತದೆ. ಟ್ರಾಫಿಕ್ ಅಥವಾ ಸಾರ್ವಜನಿಕರ ಸಹಕಾರದ ಕೊರತೆಯಿಂದ ವ್ಯರ್ಥವಾಗುವ ಪ್ರತಿಯೊಂದು ನಿಮಿಷವೂ ಗಂಭೀರ ಪರಿಣಾಮ ಬೀರಬಹುದು. ವಾಹನ ಚಾಲಕರು ಜಾಗರೂಕರಾಗಿರಬೇಕು, ಸಂಚಾರ ನಿಯಮಗಳನ್ನು ಪಾಲಿಸಬೇಕು ಮತ್ತು ಆಂಬ್ಯುಲೆನ್ಸ್‌ಗೆ ತಕ್ಷಣ ದಾರಿ ಬಿಡಬೇಕು," ಎಂದು ವಿನಂತಿಸಿದರು.
ಮೈಸೂರು ಎನ್.ಆರ್. ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ (ACP) ಕೆ.ಟಿ. ಮ್ಯಾಥ್ಯೂಸ್ ಥಾಮಸ್, ಅವರು ಮಾತನಾಡಿ, "ತುರ್ತು ಸಂದರ್ಭಗಳಲ್ಲಿ ಜೀವ ಉಳಿಸುವುದು ಕೇವಲ ಆಸ್ಪತ್ರೆ ಅಥವಾ ಪೊಲೀಸರ ಕೆಲಸವಲ್ಲ, ಅದು ಸಾರ್ವಜನಿಕರ ಜವಾಬ್ದಾರಿಯೂ ಹೌದು. ರಸ್ತೆ ಜಂಕ್ಷನ್‌ಗಳನ್ನು ಮುಕ್ತವಾಗಿಡುವುದು, ಅನಗತ್ಯವಾಗಿ ದಾರಿ ತಡೆಯದೆ ಆಂಬ್ಯುಲೆನ್ಸ್‌ಗಳಿಗೆ ತಕ್ಷಣ ದಾರಿ ಮಾಡಿಕೊಡುವುದರಿಂದ ರೋಗಿಗಳನ್ನು ಬೇಗ ಆಸ್ಪತ್ರೆಗೆ ತಲುಪಿಸಬಹುದು. ಇಂತಹ ಜಾಗೃತಿ ರ‍್ಯಾಲಿಗಳು ಪ್ರತಿಯೊಂದು ಸೆಕೆಂಡ್ ಎಷ್ಟು ಮುಖ್ಯ ಎಂಬುದನ್ನು ಸಾರ್ವಜನಿಕರಿಗೆ ನೆನಪಿಸಿಕೊಡುತ್ತವೆ" ಎಂದು ಹೇಳಿದರು.
ಡಾ. ಕೇಶವಮೂರ್ತಿ ಸಿ. ಬಿ. ಅವರು ಮಾತನಾಡಿ, "ಹೃದಯಾಘಾತವಾದಾಗ ಕಳೆಯುವ ಪ್ರತಿ ನಿಮಿಷವೂ ಹೃದಯಕ್ಕೆ ದೊಡ್ಡ ಹಾನಿ ಉಂಟುಮಾಡುತ್ತದೆ. ಆರಂಭಿಕ ಲಕ್ಷಣಗಳನ್ನು ನಿರ್ಲಕ್ಷಿಸುವುದರಿಂದ ಅಥವಾ ಟ್ರಾಫಿಕ್‌ನಿಂದಾಗಿ ರೋಗಿಗಳು ಆಸ್ಪತ್ರೆಗೆ ತಡವಾಗಿ ತಲುಪುತ್ತಿದ್ದಾರೆ. ಇಂತಹ ವಿಳಂಬ ಜೀವಕ್ಕೇ ಕುತ್ತು ತರಬಹುದು. ರಸ್ತೆಯಲ್ಲಿ ಆಂಬ್ಯುಲೆನ್ಸ್ ಕಂಡಾಗ ಅದಕ್ಕೆ ತಕ್ಷಣ ದಾರಿ ಮಾಡಿಕೊಡುವುದು ನಾವೊಬ್ಬ ಮನುಷ್ಯನಾಗಿ ಮಾಡಬಹುದಾದ ಅತ್ಯಂತ ಶಕ್ತಿಶಾಲಿ ಕೆಲಸವಾಗಿದೆ" ಎಂದರು.
ಮೈಸೂರಿನ ಮಣಿಪಾಲ್ ಆಸ್ಪತ್ರೆಯ ಡಾ. ಮಕ್ಸೂದ್ ಅಹ್ಮದ್ ಎ. ಆರ್. ಅವರು ಮಾತನಾಡಿ, "ಪಾರ್ಶ್ವವಾಯು (ಸ್ಟ್ರೋಕ್) ಮತ್ತು ತಲೆಯ ತೀವ್ರ ಗಾಯಗಳಂತಹ ತುರ್ತು ಸಂದರ್ಭಗಳಲ್ಲಿ ಪ್ರತಿ ನಿಮಿಷವೂ ನಿರ್ಣಾಯಕ. ಅನೇಕ ರೋಗಿಗಳು 'ಗೋಲ್ಡನ್ ಅವರ್' (ಅಮೂಲ್ಯ ಸಮಯ) ಕಳೆದ ನಂತರ ಆಸ್ಪತ್ರೆಗೆ ಬರುತ್ತಾರೆ. ಇದರಿಂದ ಚಿಕಿತ್ಸೆ ಕಷ್ಟವಾಗಿ, ಜೀವಕ್ಕೆ ಅಪಾಯ ಎದುರಾಗಬಹುದು. ಲಕ್ಷಣಗಳನ್ನು ಬೇಗ ಗುರುತಿಸಿ ಆಸ್ಪತ್ರೆಗೆ ತಲುಪಿಸುವುದು ಮುಖ್ಯ. ಆಂಬ್ಯುಲೆನ್ಸ್‌ಗೆ ದಾರಿ ಬಿಡುವ ಮೂಲಕ ಪ್ರತಿಯೊಬ್ಬ ನಾಗರಿಕನೂ ಒಂದು ಜೀವವನ್ನು ಉಳಿಸಬಹುದು" ಎಂದು ಹೇಳಿದರು.
ಮೈಸೂರು ಮಣಿಪಾಲ್ ಆಸ್ಪತ್ರೆಯ ನಿರ್ದೇಶಕರಾದ ಸಂದೀಪ್ ಪಟೇಲ್ ಬಿ. ಜೆ. ಅವರು ಮಾತನಾಡಿ, "ರೋಗಿಯು ಆಸ್ಪತ್ರೆಗೆ ಬರುವ ಮೊದಲೇ ಜೀವ ಉಳಿಸುವ ಕೆಲಸ ಶುರುವಾಗುತ್ತದೆ ಎಂದು ನಾವು ನಂಬುತ್ತೇವೆ. ಮೈಸೂರು ಸಂಚಾರಿ ಪೊಲೀಸರ ಜೊತೆ ಸೇರಿ ನಾವು ಸಾರ್ವಜನಿಕರಿಗೆ ಮತ್ತು ಪೊಲೀಸರಿಗೆ ಸಿಪಿಆರ್ (CPR) ಹಾಗೂ ಪ್ರಥಮ ಚಿಕಿತ್ಸೆಯ (BLS) ತರಬೇತಿ ನೀಡುತ್ತಿರುತ್ತೇವೆ. ತುರ್ತು ಸಂದರ್ಭದಲ್ಲಿ ಆಂಬ್ಯುಲೆನ್ಸ್ ಬರುವ ಮೊದಲೇ ಹತ್ತಿರವಿರುವ ಸಾರ್ವಜನಿಕರು ಸಕಾಲದಲ್ಲಿ ಮಾಡುವ ಸಿಪಿಆರ್ ಪ್ರಯತ್ನವು ರೋಗಿಯ ಜೀವ ಉಳಿಸಲು ತುಂಬಾ ಸಹಾಯ ಮಾಡುತ್ತದೆ," ಎಂದರು.
"ತುರ್ತು ಪರಿಸ್ಥಿತಿಯಲ್ಲಿ ಪ್ರತಿ ನಿಮಿಷವೂ ಮುಖ್ಯ, ನಾವು ಮಾಡುವ ಪ್ರತಿಯೊಂದು ಸಣ್ಣ ಸಹಾಯವೂ ಒಂದು ಜೀವವನ್ನು ಉಳಿಸಬಲ್ಲದು" ಎಂಬ ಸಂದೇಶದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.