ಹುಣಸೂರಿನ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ತಹಸೀಲ್ದಾರ್ ಜೆ.ಮಂಜುನಾಥ್, ದೊಡ್ಡಹೆಜ್ಜೂರು ನಾಗೇಶ್, ಚಿಕ್ಕಹುಣಸೂರು ರಾಜು, ವಸಂತ, ಡೆವಿಡ್ ರತ್ನಪುರಿ ಇತರರಿದ್ದರು.
ಹುಣಸೂರು : ಅಸ್ಪಶ್ಯತೆ ಎನ್ನುವುದು ಈ ದೇಶದ ದೊಡ್ಡ ಕಳಂಕ ಎಂದು ತಹಸೀಲ್ದಾರ್ ಜೆ.ಮಂಜುನಾಥ್ ಅಭಿಪ್ರಾಯಪಟ್ಟರು.
ನಗರದ ಅಂಬೇಡ್ಕರ್ ಭವನದಲ್ಲಿ ಬುಧವಾರ ಬೆಳಕು ಸೇವಾ ಸಂಸ್ಥೆ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಅಸ್ಪಶ್ಯತೆ ನಿರ್ಮೂಲನಾ ಪಿಡುಗು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಸ್ಪಶ್ಯತೆ ಒಂದು ಮಾನಸಿಕ ರೋಗ. ದೇಶಕ್ಕೆ ದೊಡ್ಡ ಕಳಂಕವಾಗಿದ್ದು, ಈ ಅನಿಷ್ಟ ಪದ್ಧತಿಯನ್ನು ನಿರ್ಮೂಲನೆ ಮಾಡಲು ಕಾನೂನಿನ ಜತೆಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಅನಿಷ್ಟ ಪದ್ಧತಿಗಳು ದಲಿತರನ್ನು ಬಾಧಿತರನ್ನಾಗಿ ಮಾಡುತ್ತಿದ್ದು, ಮನುಷ್ಯರ ಮನಸ್ಥಿತಿ ಬದಲಾಗದ ಹೊರತು ಸುಧಾರಣೆ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸತತ ಜಾಗೃತಿಯೇ ಇದಕ್ಕೆ ಪರಿಹಾರ ಎಂದರು.
ನಗರಸಭೆ ಪೌರಾಯುಕ್ತೆ ಮಾನಸಾ ಮಾತನಾಡಿ, ಆಧುನಿಕ ಯುಗದಲ್ಲಿ ಮಹಿಳೆಯರು ಶೋಷಣೆಗೆ ಒಳಗಾಗುತ್ತಿದ್ದು, ಇದನ್ನು ವಿರೋಧಿಸುವ ಮನಸ್ಥಿತಿಯನ್ನು ಹೊಂದಲು ಪ್ರತಿಯೊಬ್ಬ ಮಹಿಳೆಯರು ಶಿಕ್ಷಣ ಪಡೆದು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕಾದ ಅಗತ್ಯವಿದೆ ಎಂದರು.
ದಲಿತ ಮುಖಂಡ ಹರಿಹರ ಆನಂದಸ್ವಾಮಿ ಮಾತನಾಡಿ, ಅಸ್ಪೃಶ್ಯತೆ ನಿರ್ಮೂಲನೆ ಕಾನೂನುಗಳಿದ್ದರೂ ಇದರಿಂದ ದಲಿತರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಗ್ರಾಮೀಣ ಪ್ರದೇಶದ ಕೆಲವು ಭಾಗಗಳಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ಇದನ್ನು ಎಲ್ಲರೂ ಒಟ್ಟಾಗಿ ವಿರೋಧಿಸುವ ಅಗತ್ಯವಿದೆ ಎಂದರು.
ಬೆಳಕು ಸೇವಾ ಸಂಸ್ಥೆಯ ನಿಂಗರಾಜ್ ಮಲ್ಲಾಡಿ ಮಾತನಾಡಿ, ಹುಣಸೂರು ತಾಲೂಕಿನ ಕೆಲ ಗ್ರಾಮಗಳಲ್ಲಿ ಇಂದಿಗೂ ದಲಿತರಿಗೆ ಕ್ಷೌರ ಮಾಡುತ್ತಿಲ್ಲ. ಹೋಟೆಲ್, ದೇವಸ್ಥಾನಗಳಿಗೆ ನಿರ್ಭಂಧಿಸಲಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆ ಮತ್ತು ಬೆಳಕು ಸೇವಾ ಸಂಸ್ಥೆ ವತಿಯಿಂದ ನಡೆಯುವ ಈ ಜಾಗೃತಿ ಕಾರ್ಯಕ್ರಮದಲ್ಲಿ ಗ್ರಾಮೀಣ ಪ್ರದೇಶದ ಹೋಟೆಲ್ ಮಾಲೀಕರು, ಕ್ಷೌರದ ಅಂಗಡಿ ಮಾಲೀಕರು, ಮುಜರಾಯಿ ದೇವಾಲಯದ ಅರ್ಚಕರು, ಅಂಗನವಾಡಿ ಕೇಂದ್ರಗಳ ಶಿಕ್ಷಕರು, ಸರ್ಕಾರಿ ಶಾಲೆಗಳ ಅಡುಗೆ ಮಾಡುವವರು ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರು ಇವರನ್ನು ಈ ಸಭೆಗೆ ಕರೆದು ತಮ್ಮ ಕ್ಷೇತ್ರಗಳಲ್ಲಿ ಅಸ್ಪೃಶ್ಯತೆ ಆಚರಣೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಮತ್ತು ಜಾಗೃತಿ ಮೂಡಿಸುವ ಕೆಲಸ ಮಾಡಸಲಾಗುತ್ತಿದೆ ಎಂದರು.
ದಲಿತ ಮುಖಂಡ ನಾಗರಾಜ್ ಮಲ್ಲಾಡಿ, ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ತಾಪಂ ಇಒ ಕೆ.ಹೊಂಗಯ್ಯ, ಸಿಡಿಪಿಒ ಹರೀಶ್ ಮಾತನಾಡಿದರು. ಮುಖಂಡರಾದ ಡಿ. ಕುಮಾರ್, ಬಸವಲಿಂಗಯ್ಯ, ಎಚ್.ಎಸ್. ವರದರಾಜು, ಅಣ್ಣಯ್ಯನಾಯ್ಕ, ನಗರಸಭೆ ಮಾಜಿ ಅಧ್ಯಕ್ಷ ಎಸ್.ಶರವಣ, ವಿ.ಗಣೇಶ್, ಡೇವಿಡ್ ರತ್ನಪುರಿ, ಕಣ್ಣಯ್ಯ, ಆದಿವಾಸಿ ಮುಖಂಡ ಬೀರತಮ್ಮನಹಳ್ಳಿ ಗಿರೀಶ, ಖಾಲೀದ್ ಗುರುಪುರ, ದಲಿತ ಮಹಿಳಾ ಒಕ್ಕೂಟದ ಮಹದೇವಮ್ಮ, ಹೊನ್ನಪ್ಪ ತೊಂಡಾಳು, ಗಿರೀಶ್ ಗದ್ದಿಗೆ, ಜಿಲ್ಲಾ ಎಸ್‌ಸಿ, ಎಸ್‌ಟಿ ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯ ನೇರಳಕುಪ್ಪೆ ಮಹದೇವ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ಮಹದೇವ್, ಸಮಾಜ ಕಲ್ಯಾಣಾಧಿಕಾರಿ ಭರತ್ ಕುಮಾರ್ ಇದ್ದರು.