ಮೈಸೂರಿನ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಅಂಬಿಗರ ಚೌಡಯ್ಯ ಜಯಂತಿಯನ್ನು ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಉದ್ಘಾಟಿಸಿದರು. ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ, ಸುದರ್ಶನ್, ಬಸವಯ್ಯ, ವಸಂತಮ್ಮ ಹಾಗೂ ಇತರರು ಇದ್ದರು.
ಮೈಸೂರು: ಅಂಬಿಗರ ಚೌಡಯ್ಯ ಹಲವು ವಚನಗಳನ್ನು ರಚಿಸಿದ್ದು, ಅವರ ವಚನಗಳ ತತ್ವಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಹೇಳಿದರು.
ಜಿಲ್ಲಾಡಳಿತ, ನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಕಲಾಮಂದಿರ ಆವರಣದ ಕಿರುರಂಗಮ ಂದಿರದಲ್ಲಿ ಬುಧವಾರ ಆಯೋಜಿಸಿದ್ದ ಅಂಬಿಗರ ಚೌಡಯ್ಯ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಂದುವರೆಯಲು ಕಾನೂನಿನನಲ್ಲಿ ಅವಕಾಶವಿದೆ. ಸಮಾಜದ ಅಸಂಘಟಿತ ಸಮಾಜ ಸಂಘಟಿತರಾಗಬೇಕು ಎಲ್ಲರು ಒಂದುಗೂಡಿದಾಗ ಮಾತ್ರ ಸಮಸ್ಯೆಗಳನ್ನು ನಿವಾರಣೆ ಮಾಡಲು ಸಾಧ್ಯ ಎಂದು ಹೇಳಿದರು.
ಬಸವಣ್ಣನವರ ಅನುಭವ ಮಂಟದಲ್ಲಿ ಅಂಬಿಗರ ಚೌಡಯ್ಯ ಅವರು ಸಮಾಜದಲ್ಲಿ ಹಿಂದುಳಿದ ವರ್ಗದ ಜನರ ಬೆನ್ನೆಲುಬಾಗಿ ನಿಂತಿದ್ದರು. ಅನುಭವ ಪಂಟಪದಲ್ಲಿ 180 ಸದಸ್ಯರು ಇದ್ದರು. ಮುಖ್ಯವಾಗಿ ಅಲ್ಲಮಪ್ರಭು, ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ, ಮಾದರ ಚನ್ನಯ, ಜೇಡರ ದಾಸಿಮ್ಮಯ್ಯ, ಮತ್ತಿತರರು ಈ ಅನುಭವ ಪಂಟಪದಲ್ಲಿ ಒಂದು ಪರಿಪೂರ್ಣ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿದರು ಎಂದರು.
ಚೌಡಯ್ಯ ಅವರು ದೋಣಿ ನಡೆಸುವ ಕಾಯಕದಲ್ಲಿ ಜೀವನ ಮಾಡುತ್ತಿದ್ದರು. ವಸ್ತು, ಭಾಷೆ, ಶೈಲಿ ಗಮನಿಸಿದರೆ ಅವರೊಬ್ಬ ಕೆಚ್ಚೆದೆಯ ನೇರ ನಿಷ್ಠೂರ, ಪ್ರಕೃತಿಯ ಗ್ರಾಮ್ಯ ಮನೋಭಾವ ಹೊಂದಿದ ವಚನಕಾರ. ಚೌಡಯ್ಯ ಅವರು ಯಾರನ್ನೇ ಆಗಲಿ ಯಾವುದನ್ನೇ ಆಗಲಿ ಟೀಕಿಸದೆ ಬಿಡುತ್ತಿರಲಿಲ್ಲ. ಮೃದುವಾಗಿ ಮಾತನಾಡುವರು ಮತ್ತು ನೇರವಾಗಿ ಮಾತನಾಡುವ ವ್ಯಕ್ತಿ ಇವರು. ಶ್ರೇಣಿಕೃತ ಸಮಾಜದಲ್ಲಿ ಬ್ರಾಹ್ಮಣ, ಕ್ಷತ್ರೀಯ, ವೈಶ್ಯ, ಶೂದ್ರ ಎಂಬ ವ್ಯವಸ್ಥೆ ಇತ್ತು. ಸಮಾಜದಲ್ಲಿನ ಲೋಪದೋಷಗಳನ್ನು ನಿರ್ದಾಕ್ಷಿಣ್ಯವಾಗಿ ಎತ್ತಿ ತೋರುತ್ತಿದ್ದರು. ಅಂಬಿಗರ ಚೌಡಯ್ಯನವರು ಸಮಾಜವನ್ನು ಕೆಲ ಅನಿಷ್ಟ ಪದ್ಧತಿಯನ್ನು ಹೋಗಲಾಡಿಸಿ ಸಮಾಜದ ಬೆಳವಣಿಗೆ ತಮ್ಮ ಕಾಯಕದಲ್ಲಿ ತೊಡಗಿದರು ಎಂದು ಹೇಳಿದರು.
ಉಪನ್ಯಾಸಕಿ ಡಾ. ಎಲ್. ಭವಾನಿ ಮಾತನಾಡಿ, ಅಂಬಿಗರ ಚೌಡಯ್ಯ ಅವರು ತುಂಗಭದ್ರಾತೀರದ ಶಿವಪುರ ಎಂಬ ಸ್ಥಳದಲ್ಲಿ ಜನಿಸಿದರು. ಇವರು ಬಸವಣ್ಣ ಅವರ ತತ್ವ ಸಿದ್ಧಾಂತಗಳಿಂದ ಪ್ರೇರಣೆ ಹೊಂದಿದರು. ಚೌಡಯ್ಯ ಅವರು ಅನುಭವ ಮಂಟಪದ ಸದ್ಯಸರಲ್ಲಿ ಒಬ್ಬರಾಗಿದ್ದರು. ಬಸವಣ್ಣರಂತೆ ಚೌಡಯ್ಯ ಅವರು ವಚನಗಳ ಮೂಲಕ ತಮ್ಮ ಸಿದ್ಧಾಂತ, ತತ್ವ ತಿಳಿಸಲು ಪ್ರಾರಂಭಿಸಿದರು ಹಾಗೂ ತಮ್ಮ ಜೀವನವನ್ನು ಆಧ್ಯಾತ್ಮಿಕತೆ ಕಡೆಗೆ ನಡೆಸುತಿದ್ದರು ಎಂದರು.
ಆಚಾರ ವಿಚಾರ ಮೂಢನಂಬಿಕೆಯನ್ನು ಖಂಡಿಸಿದರು. ತರ್ಕ, ವ್ಯಾಕರಣ, ಛಂದಸ್ಸುಗಳನ್ನು ತಿಳಿದುಕೊಂಡಿದ್ದರು. ವರ್ಣಬೇದ ವ್ಯವಸ್ಥೆಯನ್ನು ಹಾಗೂ ಸಾಂಸಾರಿಕ ಮತ್ತು ಲೌಖಿಕ ಬದುಕನ್ನು ಕಡೆಗೆಣಿಸಿದರು. ಸಮಾಜದ ಸುಧಾರಣೆಗಾಗಿ ತಮ್ಮ ಜೀವನವನ್ನೇ ಮುಡಾಪಾಗಿ ಇಟ್ಟರು ಎಂದು ಹೇಳಿದರು.
ಗಂಗಮತದ ಅಧ್ಯಕ್ಷೆ ವಸಂತಮ್ಮ ಮಾತನಾಡಿ, ಜ್ಯಾತ್ಯತೀತ ವಿಚಾರ ಧಾರೆಗಳನ್ನು ಎಲ್ಲರು ತಿಳಿದುಕೊಳ್ಳಬೇಕು. ಹಿಂದಿನ ಕಾಲದಲ್ಲಿ ಇದ್ದ ತಾರತಮ್ಯವನ್ನು ಹೋಗಲಾಡಿಸಲು ಬಸವಣ್ಣನವರು ಕೈಗೊಂಡ ಕಾರ್ಯಗಳ ಬಗ್ಗೆ ಎಲ್ಲರು ತಿಳಿಯಬೇಕು. ಸಮಾಜದಲ್ಲಿ ಎಲ್ಲರು ಸಮಾನರು ಎಂದು ಹೇಳಿ ಜ್ಯಾತ್ಯತೀತ ಸಮಾಜ ನಿರ್ಮಾಣ ಮಾಡಲು ಹೋರಾಡಿದರು. ಇಂದಿನ ಜನರು ಬಸವಣ್ಣ ಅವರ ವಚನವನ್ನು ತಿಳಿದುಕೊಳ್ಳಬೇಕು ಎಂದರು.
ವಚನ ಸಾಹಿತ್ಯ ಬದುಕಿನಲ್ಲಿ ಬಹಳ ಮುಖ್ಯ. ಜಾತಿ ಪದ್ಧತಿ ಹೋಗಲಾಡಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ ಹಾಗೂ ವೈಚಾರಿಕತೆ ಜತೆಗೆ ಮಾನವಿಯತೆ ಮೌಲ್ಯ ಬೆಳಸಿಕೊಳ್ಳಬೇಕು. ಎಲ್ಲರು ಒಂದುಗೂಡಿ ಸಮಾಜದಲ್ಲಿ ಬಾಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸುದರ್ಶನ್, ಗಂಗಮತದ ಮುಖಂಡ ಬಸವಯ್ಯ ಹಾಗೂ ಇತರರು ಇದ್ದರು.