ಡಾ.ಬಿ.ಆರ್.ಅಂಬೇಡ್ಕರ್ ಅವರು ಕೇವಲ ಒಂದು ಸಮುದಾಯದ ನಾಯಕರಲ್ಲ, ಇಡೀ ದೇಶಕ್ಕೆ ಸೇರಿದವರು. ದೇಶದ ಪ್ರಗತಿಯ ಬಗ್ಗೆ ನಿಜವಾದ ಕಾಳಜಿ ಹೊಂದಿದ್ದರು ಎಂದು ಲೇಖಕಿ ದು.ಸರಸ್ವತಿ ಹೇಳಿದರು.
ನಗರದ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರ, ಡಾ.ಬಿ.ಆರ್.ಅಂಬೇಡ್ಕರ್ ತರಬೇತಿ, ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರ, ಬೆಂಗಳೂರು ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಅಂಬೇಡ್ಕರ್ ಮತ್ತು ಮಹಿಳಾ ಪ್ರಗತಿ ವಿಷಯ ಕುರಿತ ರಾಜ್ಯ ಮಟ್ಟದ ಎರಡು ದಿನಗಳ ವಿಚಾರಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ಕೇವಲ ಅಂಕೆ, ಸಂಖ್ಯೆಗಳ ಆಳ್ವಿಕೆಯಲ್ಲ ಎಂದು ಅಂಬೇಡ್ಕರ್ ನಂಬಿದ್ದರು. ಪ್ರಭುತ್ವ ಎತ್ತಿ ಹಿಡಿದು, ಭಿನ್ನಮತ ಗೌರವಿಸಿದರು. ಶೋಷಿತರು, ಹಿಂದುಳಿದವರ ದನಿಯಾದರು. ಅವರೊಂದು ಪ್ರೇರೇಪಣೆಯ ಶಕ್ತಿ. ಭಾರತದ ಇತಿಹಾಸದಲ್ಲಿ ಒಂದು ದೊಡ್ಡ ಭಾಗವಾಗಿ ನಿಲ್ಲುವರು ಎಂದು ಬಣ್ಣಿಸಿದರು.
ಸಂವಿಧಾನ ಧರ್ಮ ಗ್ರಂಥವಾಗಿದ್ದು, ದೇಶ ಒಳಗೊಳ್ಳುವ ಬಂಧುತ್ವವಾಗಿದೆ. ನಮ್ಮಲ್ಲಿನ ಕೀಳರಿಮೆ ಹೋಗಲಾಡಿಸಿದೆ. ಸಮಾನತೆ ಮೂಡಿಸಿದೆ ಎಂದರು.
ಭಾರತೀಯ ಮಹಿಳೆಯರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ವಿಮೋಚನೆಯಲ್ಲಿ ಅಂಬೇಡ್ಕರ್ ಪ್ರಮುಖ ಹರಿಕಾರ. ಸಂವಿಧಾನದ ಮೂಲಕ ಸಮಾನ ಹಕ್ಕು, ಹಿಂದೂ ಕೋಡ್ ಬಿಲ್ ಮೂಲಕ ಆಸ್ತಿ, ವಿಚ್ಛೇದನ ಹಕ್ಕು ಮತ್ತು ಶಿಕ್ಷಣ, ಉದ್ಯೋಗದಲ್ಲಿ ಸಮಾನ ಅವಕಾಶ ಕಲ್ಪಿಸುವ ಮೂಲಕ ಮಹಿಳೆಯರನ್ನು ಪುರುಷರ ಸಮಾನರನ್ನಾಗಿಸಲು ಬಲವಾಗಿ ಪ್ರತಿಪಾದಿಸಿದರು ಎಂದು ತಿಳಿಸಿದರು.
ಗಾರ್ಮೆಂಟ್ಸ್ ಆ್ಯಂಡ್ ಟೆಕ್ಸ್‌ಟೈಲ್ಸ್ ವರ್ಕರ್ಸ್ ಯೂನಿಯನ್ ಅಧ್ಯಕ್ಷೆ ಆರ್.ಪ್ರತಿಭಾ ಮಾತನಾಡಿ, ಮಹಿಳೆಯರು ಕೇವಲ ಮನೆಯೊಳಗಿರದೆ, ಸಮಾಜದ ಮುಖ್ಯವಾಹಿನಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಮತ್ತು ನಾಯಕತ್ವ ವಹಿಸಬೇಕು ಎಂಬುದು ಅಂಬೇಡ್ಕರ್ ಅವರ ಆಶಯವಾಗಿತ್ತು. ಜಾತಿಯನ್ನು ಕೇವಲ ಕಾರ್ಮಿಕರ ವಿಭಜನೆಯಲ್ಲ, ಬದಲಾಗಿ ಕಾರ್ಮಿಕರ ಶ್ರೇಣೀಕೃತ ವಿಭಜನೆ ಎಂದು ಕರೆದಿದ್ದರು ಎಂದು ತಿಳಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ಪ್ರೊ.ಎಸ್.ನರೇಂದ್ರಕುಮಾರ್, ಪ್ರಾಂಶುಪಾಲೆ ಪ್ರೊ.ಎಂ.ಎಸ್.ಅನಿತಾ ಇದ್ದರು.