ವಿಜಯನಗರದ ಭಾರತೀಯ ವಿದ್ಯಾಭವನ ಶಾಲೆಯಲ್ಲಿ ಶನಿವಾರ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 69ನೇ ವರ್ಷದ ಮಹಾಪರಿನಿರ್ವಾಣ ದಿನ ಆಚರಿಸಲಾಯಿತು. ಎಸ್.ಲೇಖಾ ನಾಯರ್, ಡಾ.ಜೆ ಸೋಮಶೇಖರ್, ಪ್ರೊ.ಎಸ್.ನರೇಂದ್ರಕುಮಾರ್ ಇತರರಿದ್ದರು.
- ಪ್ರಾಂಶುಪಾಲರಾದ ಎಸ್.ಲೇಖಾ ನಾಯರ್ ಅಭಿಮತ
- ಡಾ.ಬಿ.ಆರ್.ಅಂಬೇಡ್ಕರ್ ಅವರ 69ನೇ ವರ್ಷದ ಮಹಾಪರಿನಿರ್ವಾಣ ದಿನ
- ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರ ಆಯೋಜನೆ
ಮೈಸೂರು: ಡಾ.ಬಿ.ಆರ್.ಅಂಬೇಡ್ಕರ್ ಅವರು ಭಾರತದಲ್ಲಿ ಧ್ವನಿಯಿಲ್ಲದವರ ಧ್ವನಿಯಾಗಿ ಕತ್ತಲೆಯಲ್ಲಿದ್ದವರಿಗೆ ಬೆಳಕು, ಘನತೆ ಮತ್ತು ಸಮಾನತೆ ನೀಡಿದರು ಎಂದು ಭಾರತೀಯ ವಿದ್ಯಾಭವನ ಶಾಲೆಯ ಪ್ರಾಂಶುಪಾಲರಾದ ಎಸ್.ಲೇಖಾ ನಾಯರ್ ತಿಳಿಸಿದರು.
ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರ ಸಹಯೋಗದಲ್ಲಿ ವಿಜಯನಗರದ ಭಾರತೀಯ ವಿದ್ಯಾಭವನ ಶಾಲೆಯಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 69ನೇ ವರ್ಷದ ಮಹಾಪರಿನಿರ್ವಾಣ ದಿನದ ಅಂಗವಾಗಿ ಶನಿವಾರ ಆಯೋಜಿಸಿದ್ದ ‘ಭಾರತ ಭಾಗ್ಯ ವಿಧಾತ’ ರೂಪಕ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ಆಲೋಚನೆಗಳು ಆಧುನಿಕ ಭಾರತವನ್ನು ರೂಪಿಸಲು ಸಾಧ್ಯವಾಗಿದೆ. ಸಂವಿಧಾನದ ಪಿತಾಮಹ ಬಾಬಾ ಸಾಹೇಬರು ಕೇವಲ ಸಂವಿಧಾನವನ್ನು ಬರೆಯಲಿಲ್ಲ. ಬದಲಾಗಿ ಭಾರತದ ಕೋಟ್ಯಂತರ ಶೋಷಿತ ಜನರ ಜೀವನದಲ್ಲಿ ಭರವಸೆಯನ್ನು ಬರೆದರು. ಪ್ರತಿಯೊಬ್ಬ ಭಾರತೀಯ ಅವರನ್ನು ಸ್ಮರಿಸಬೇಕು ಎಂದರು.
ಸ್ವಾತಂತ್ರ್ಯ ಚಳವಳಿಗಾರ ಹಾಗೂ ಭಾರತೀಯ ವಿದ್ಯಾಭವನದ ಸಂಸ್ಥಾಪಕರಾದ ಕೆ.ಎಂ.ಮುನ್ಷಿ ಹಾಗೂ ಅಂಬೇಡ್ಕರ್ ನಡುವೆ ಹೆಚ್ಚು ಒಡನಾಟವಿತ್ತು. ಅವರಿಬ್ಬರು ವಿಭಿನ್ನ ಸಾಮಾಜಿಕ ಹಿನ್ನೆಲೆಗಳು ಮತ್ತು ಬೌದ್ಧಿಕ ಸಂಪ್ರದಾಯಗಳಿಂದ ಬಂದಿದ್ದರೂ, ಸಂವಿಧಾನದ ರಚನೆ ಸಭೆಯಲ್ಲಿ ಪರಸ್ಪರ ಗೌರವದ ಭಾವವನ್ನಿಟ್ಟುಕೊಂಡಿದ್ದರು ಎಂದರು.
ಬಾಬಾ ಸಾಹೇಬರು ಪ್ರತಿಪಾದಿಸಿದ ಸಮಾನತೆ, ನ್ಯಾಯ, ವೈಚಾರಿಕ ಚಿಂತನೆ ಮತ್ತು ಮೌಲ್ಯಗಳನ್ನು ಇಡೀ ಸಮಾಜ ಪಾಲಿಸುವ ಮೂಲಕ ಅವರನ್ನು ಗೌರವಿಸೋಣ ಎಂದು ಸ್ಮರಿಸಿದರು.
ವೇದಿಕೆ ಕಾರ್ಯಕ್ರಮದ ಬಳಿಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ಮಾಣದ ‘ಭಾರತ ಭಾಗ್ಯ ವಿಧಾತ’ ರೂಪಕವನ್ನು ಪ್ರದರ್ಶನ ಮಾಡಲಾಯಿತು. ಜತೆಗೆ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ಹಿರಿಯ ಪ್ರಾಧ್ಯಾಪಕ ಡಾ.ಜೆ ಸೋಮಶೇಖರ್ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಕೇಂದ್ರ ನಿರ್ದೇಶಕ ಪ್ರೊ.ಎಸ್.ನರೇಂದ್ರಕುಮಾರ್ ಇತರರಿದ್ದರು.