ಬನ್ನಿಮಂಟಪದಲ್ಲಿ ನಿರ್ಮಾಣ ಹಂತದ ಹೊಸ ಬಸ್ ನಿಲ್ದಾಣ ಕಾಮಗಾರಿಯನ್ನು ಸಚಿವ ಡಾ.ಎಚ್.ಸಿ.ಮಹದೇವಪ್ಪ ವೀಕ್ಷಿಸಿದರು. ತನ್ವೀರ್ ಸೇಠ್, ಜಿ.ಲಕ್ಷ್ಮೀಕಾಂತರೆಡ್ಡಿ, ಶ್ರೀನಿವಾಸ್, ಎಚ್.ಡಿ.ವೀರೇಶ್ ಇನ್ನಿತರರಿದ್ದರು.
- ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಭರವಸೆ
- 2 ಸಾವಿರ ಜನರ ಕೂರಬಹುದಾದ ವಿಶಾಲವಾದ ಸಭಾಂಗಣ, ಪಾರ್ಕಿಂಗ್ ಸೇರಿದಂತೆ ಅತ್ಯಾಧುನಿಕ ಸೌಕರ್ಯದೊಂದಿಗೆ ಭವನ
ಮೈಸೂರು: ನಗರದ ದಿವಾನ್ಸ್ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ಆಗಸ್ಟ್‌ನಲ್ಲಿ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು.
ಶನಿವಾರ ಅಂಬೇಡ್ಕರ್ ಭವನದ ಕಾಮಗಾರಿ ಪರಿಶೀಲಿಸಿ, ಶೀಘ್ರವಾಗಿ ಕಾಮಗಾರಿಯನ್ನು ಗುಣಮಟ್ಟದಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಭವನ ನಿರ್ಮಾಣಕ್ಕೆ ಆರಂಭದಲ್ಲಿ 21 ಕೋಟಿ ರೂ. ನೀಡಲಾಗಿತ್ತು. ಕಟ್ಟಡ ನಿರ್ಮಾಣದ ಯೋಜನೆ ಬದಲಾಗುತ್ತ ವೆಚ್ಚವೂ ಏರಿಕೆಯಾಯಿತು. ಈಗ ಮುಡಾದಿಂದ 24 ಕೋಟಿ ರೂ. ಅನುದಾನ ನೀಡಲಾಗಿದ್ದು, ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
2 ಸಾವಿರ ಜನರ ಕೂರಬಹುದಾದ ವಿಶಾಲವಾದ ಸಭಾಂಗಣ, ಪಾರ್ಕಿಂಗ್ ಸೇರಿದಂತೆ ಅತ್ಯಾಧುನಿಕ ಸೌಕರ್ಯದೊಂದಿಗೆ ಭವನ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಆಕರ್ಷಕ ಹೊರಾಂಗಣ: ಭವನದ ಹೊರಾಂಗಣ, ಪ್ರವೇಶದ್ವಾರ ಅತ್ಯಂತ ವಿಶಿಷ್ಟವಾಗಿರಲಿದೆ. ಬುದ್ಧರ ಪರಿಕಲ್ಪನೆಯಲ್ಲಿ ನಿರ್ಮಿಸಲಾಗುತ್ತಿದೆ. ಭವನಕ್ಕೆ ಪ್ರವೇಶಿಸಿದವರು ವಿಶಿಷ್ಟವಾದ ಅನುಭವ ಸಿಗಲಿದೆ ಎಂದರು.
ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ, ಮಾಜಿ ಮೇಯರ್ ಪುರುಷೋತ್ತಮ್, ಮುಖಂಡರಾದ ಎನ್ ಭಾಸ್ಕರ್, ಅಹಿಂದ ಜವರಪ್ಪ, ಹರಿಹರ ಆನಂದಸ್ವಾಮಿ, ಜಿ.ಮಹದೇವ, ವಿಜಯಕುಮಾರ್, ಜೆ.ಪ್ರಭು, ಡಾ.ಮಹೇಶ್ ಸೋಸ್ಲೆ, ಗಜೇಂದ್ರ ಚಿನ್ನಸ್ವಾಮಿ ಇನ್ನಿತರರಿದ್ದರು.
ಹೊಸ ಬಸ್ ನಿಲ್ದಾಣ ಕಾಮಗಾರಿ ವೀಕ್ಷಣೆ
120 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಹೊಸ ಬಸ್ ನಿಲ್ದಾಣ ಕಾಮಗಾರಿಯನ್ನು ಸಚಿವ ಡಾ.ಎಚ್.ಸಿ.ಮಹದೇವಪ್ಪ ಪರಿಶೀಲನೆ ನಡೆಸಿದರು. ಶೇ.30ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, 2027ರ ಮಾರ್ಚ್ ಒಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಹಾಗೂ ಗುಣಮಟ್ಟದ ಕಾಮಗಾರಿ ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕಾಮಗಾರಿ ಕುರಿತು ಮಾಹಿತಿ ನೀಡಿದ ಕೆಎಸ್‌ಆರ್‌ಟಿಸಿ ಗ್ರಾಮೀಣ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಅವರು, ಬನ್ನಿಮಂಟಪದ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿದ್ದು, ಕೆಎಸ್‌ಆರ್‌ಟಿಸಿ ಬಸ್‌ಗಳು ನಿಲ್ದಾಣದ ಒಳಗೆ ಹಾಗೂ ಹೊರ ಭಾಗಕ್ಕೆ ಹೋಗಲು ಪ್ರತ್ಯೇಕ 100 ಅಡಿ ರಸ್ತೆಯ ಅವಶ್ಯಕತೆ ಇರುವುದಾಗಿ ಸಚಿವರ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ನಿಲ್ದಾಣ ನಿರ್ಮಾಣಕ್ಕೆ ಬೇಕಿರುವ ಎಲ್ಲ ಸೌಲಭ್ಯವನ್ನು ಒದಗಿಸಲಾಗುವುದು. 100 ಅಡಿ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯೋಜನೆ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು. ಶಾಸಕ ತನ್ವೀರ್ ಸೇಠ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಇನ್ನಿತರರಿದ್ದರು.