ನಗರದ ಮಾನಸ ಗಂಗೋತ್ರಿ ವಿಜ್ಞಾನ ಭವನದಲ್ಲಿ ಮೈಸೂರು ಜಿಲ್ಲಾ ಬಿಸಿಎಂ ವಿದ್ಯಾರ್ಥಿನಿಲಯಗಳ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಬೇಡ್ಕರ್, ಡಾ.ಬಾಬು ಜಗಜೀವನರಾಮ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಶಿವಸ್ವಾಮಿ.ಬಿ, ಆರ್.ಮಹದೇವ, ಅಹಿಂದ ಜವರಪ್ಪ ಇತರರಿದ್ದರು. 
ಮೈಸೂರು

ಸಮಾಜಕ್ಕೆ ಅಂಬೇಡ್ಕರ್-ಬಾಬೂಜಿ ಕೊಡುಗೆ ಅಪಾರ

ಶೋಷಿತ ವರ್ಗಗಳ ಅಭಿವೃದ್ಧಿಗೆ ಐಕ್ಯತೆ ಅಗತ್ಯ. ಬೇಸರದ ಸಂಗತಿ ಎಂದರೆ ದುರ್ಬಲರು, ಶೋಷಣೆಗೆ ಒಳಗಾದವರಲ್ಲಿ ಐಕ್ಯತೆ ಇಲ್ಲ. ಭಿನ್ನಾಭಿಪ್ರಾಯ ಹೆಚ್ಚುತ್ತಿದೆ. ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಮ್ ಶ್ರಮಕ್ಕೆ ಅರ್ಥ ಸಿಗಬೇಕಾದರೆ ಐಕ್ಯತೆಯಿಂದ ಸಾಗಬೇಕು ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ ಹೇಳಿದರು.
ನಗರದ ಮಾನಸಗಂಗೋತ್ರಿ ವಿಜ್ಞಾನ ಭವನದಲ್ಲಿ ಮೈಸೂರು ಜಿಲ್ಲಾ ಬಿಸಿಎಂ ವಿದ್ಯಾರ್ಥಿನಿಲಯಗಳ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಗುರುವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಮ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂಬೇಡ್ಕರ್, ಬಾಬೂಜಿ ಅವರ ಶ್ರಮಕ್ಕೆ ಅರ್ಥ ಸಿಗಬೇಕಾದರೆ ಐಕ್ಯತೆಯಿಂದ ಸಾಗಬೇಕು. ಐಕ್ಯತೆ ನಮ್ಮಲ್ಲಿ ಇದೆಯಾ? ಭೌತಿಕವಾಗಿ ಹೆಚ್ಚಿನ ಮಟ್ಟದ ವಿಚಾರಗಳನ್ನು ತಿಳಿದುಕೊಳ್ಳಬೇಕು. ಮೇಲು-ಕೀಳು, ಶ್ರೇಷ್ಠ-ಕನಿಷ್ಠ ಆಲೋಚನೆ ಬಿಡಬೇಕು. ಭಾರತೀಯ ಸಮಾಜಕ್ಕೆ ಅಂಬೇಡ್ಕರ್-ಬಾಬೂಜಿ ಅಪಾರ ಕೊಡುಗೆ ಕೊಟ್ಟಿದ್ದಾರೆ. ಅಂಬೇಡ್ಕರ್ ಹೇಳಿದಂತೆ ಶಿಕ್ಷಣ ಪಡೆದು ಸಂಘಟಿತರಾಗಿ ಹೋರಾಟ ಮಾಡಬೇಕು. ಐಕ್ಯತೆಯಿದ್ದಾಗ ಮಾತ್ರ ನಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯ ಎಂದರು.
ಅಂಬೇಡ್ಕರ್ 1936ರಲ್ಲಿ ಜಾತಿ ವಿನಾಶ ಪ್ರಬಂಧ ಬರೆದು ಇವತ್ತಿಗೆ 90 ವರ್ಷಗಳಾಗಿದೆ. ತಳವರ್ಗದ ಸಮುದಾಯಗಳು, ಶೋಷಿತರು, ಅಬಲರ ಉದ್ಧಾರಕ್ಕಾಗಿ ತಮ್ಮ ಬದುಕಿನುದ್ದಕ್ಕೂ ಶ್ರಮಪಟ್ಟರು. ಬಾಲ್ಯದಲ್ಲಿ ತಾವು ಅನುಭವಿಸಿದ ನೋವು ತಮ್ಮ ಜನಗಳಿಗೆ ತಟ್ಟಬಾರದೆಂದು ಪ್ರಪಂಚಕ್ಕೆ ಮಾದರಿಯಾಗುವ ಸಂವಿಧಾನ ಕೊಟ್ಟರು. ಹಾಗಾಗಿ ಎಲ್ಲರೂ ಅಂಬೇಡ್ಕರ್, ಬಾಬೂಜಿ ಸ್ಮರಿಸುವುದು ಆದ್ಯ ಕರ್ತವ್ಯ ಎಂದು ಹೇಳಿದರು.
ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಅಯುಕ್ತ ಕೆ.ಹರೀಶ್ ಕುಮಾರ್ ಮಾತನಾಡಿ, ಮಹನೀಯರ ಜಯಂತಿಯನ್ನು ಹಬ್ಬದ ರೀತಿಯಲ್ಲಿ ಸೌಹಾರ್ದಯುತವಾಗಿ ಆಚರಿಸುವ ಮೂಲಕ ಅವರ ಆದರ್ಶಗಳನ್ನು ಜನಸಾಮಾನ್ಯರಿಗೆ ತಲುಪಿಸುವುದು ಮುಖ್ಯ ಉದ್ದೇಶವಾಗಿರಬೇಕು. ಎಲ್ಲರನ್ನು ಸಮಾನವಾಗಿ ಕಾಣುವ ಸಮಾಜದ ನಿರ್ಮಾಣಕ್ಕಾಗಿ ಅವಿರತವಾಗಿ ಶ್ರಮಿಸಿದವರು ಅಂಬೇಡ್ಕರ್. ಶೋಷಿತರು, ಕಾರ್ಮಿಕರು, ಮಹಿಳೆಯರ ಉನ್ನತಿಗೆ ಹೋರಾಡಿದ, ಅಸಹಾಯಕರ ಧ್ವನಿಯಾದ, ಸಮಾನತೆಯ ಕನಸು ಕಂಡ ಎಲ್ಲರ ಬದುಕಿಗೆ ಸ್ಛೂರ್ತಿಯಾದ ಈ ಮಹಾನ್ ನಾಯಕರ ಕೊಡುಗೆಯನ್ನು ಸದಾ ಸ್ಮರಿಸೋಣ ಎಂದರು.
ಹಿರಿಯ ಕೆಎಎಸ್ ಅಧಿಕಾರಿ ಡಾ.ಪಿ.ಶಿವರಾಜು ಮಾತನಾಡಿ, ಅಂಬೇಡ್ಕರ್ ಮೇಲೆ ಸಂಶೋಧನಾ ಪ್ರಬಂಧಗಳು ಮಂಡನೆಯಾದಷ್ಟು ಯಾವ ಮಹಾಪುರುಷರ ಮೇಲೆಯೂ ಆಗಲಿಲ್ಲ. ಸಾಮಾಜಿಕ ಅಸಮಾನತೆ, ಬಡತನ, ಅನ್ಯಾಯ, ಅಧರ್ಮ, ಅಸ್ಪಶ್ಯತೆ, ಶೋಷಣೆ, ಸಾಮಾಜಿಕ ಅನಿಷ್ಠಗಳ ವಿರುದ್ಧ ಹೋರಾಡಿದ ಡಾ.ಅಂಬೇಡ್ಕರ್ ಹಾಗೂ ಹಸಿರು ಕ್ರಾಂತಿಯ ಹರಿಕಾರರಾಗಿದ್ದ ಡಾ.ಬಾಬು ಜಗಜೀವನರಾಮ್ ಅವರು ಭಾರತೀಯರ ಮನದಲ್ಲಿ ಚಿರಸ್ಥಾಯಿಯಾಗಿ ನಿಂತಿದ್ದಾರೆ ಎಂದರು.
ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಆರ್.ಮಹದೇವ, ಸಾಮಾಜಿಕ ಹೋರಾಟಗಾರ ಅಹಿಂದ ಜವರಪ್ಪ, ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ನಟರಾಜ್ ಶಿವಣ್ಣ, ಕರಾಮುವಿ ಸಿಂಡಿಕೇಟ್ ಸದಸ್ಯ ಮಹೇಶ ಸೋಸಲೆ, ಪ್ರಗತಿಪರ ಚಿಂತಕ ಬೀರಹಳ್ಳಿ ರಮೇಶ್ ಗೌಡ, ಬಿ.ಪಿ.ರಾಜೇಶ ಮತ್ತಿತರರು ಇದ್ದರು.