ಪಿರಿಯಾಪಟ್ಟಣದಲ್ಲಿ ನಡೆದ ಡಾ.ಬಾಬು ಜಗಜೀವನರಾಮ್ ಅವರ 119ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಸಚಿವ ಕೆ.ಎಚ್.ಮುನಿಯಪ್ಪ ಉದ್ಘಾಟಿಸಿದರು. ಸಚಿವರಾದ ಕೆ.ವೆಂಕಟೇಶ್, ಡಾ.ಡಿ.ತಿಮ್ಮಯ್ಯ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಡಾ.ಬಿ.ಜೆ.ವಿಜಯ್ ಕುಮಾರ್, ನಿತಿನ್ ವೆಂಕಟೇಶ್, ಸೀಗೂರು ವಿಜಯ ಕುಮಾರ್, ಭೂತನಹಳ್ಳಿ ಶಿವಣ್ಣ ಇತರರು ಇದ್ದರು.
ಪಿರಿಯಾಪಟ್ಟಣ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಮ್ ಅವರು ರಾಷ್ಟ್ರಕ್ಕೆ ನೀಡಿದ ಕೊಡುಗೆಯು ಅವಿಸ್ಮರಣೀಯ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಅಭಿಪ್ರಾಯಪಟ್ಟರು.
ತಾಲೂಕಿನ ಕರ್ನಾಟಕ ಮಾದರ ಮಹಾಸಭಾ ಮತ್ತು ಆದಿಜಾಂಬವ ಮಾದಿಗ ಸಂಘಟನೆಗಳ ಒಕ್ಕೂಟದಿಂದ ಪಟ್ಟಣದಲ್ಲಿ ಗುರುವಾರ ಆಯೋಜಿಸಿದ್ದ ಡಾ.ಬಾಬು ಜಗಜೀವನರಾಮ್ ಅವರ 119ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ಈ ದೇಶಕ್ಕೆ ಶ್ರೇಷ್ಠವಾದ ಸಂವಿಧಾನ ಮತ್ತು ಕಾನೂನಿನ ಮೂಲಕ ಎಲ್ಲರಿಗೂ ಸಮಾನವಾಗಿ ಹಕ್ಕು ನೀಡುವಂತೆ ಮಾಡಿದ ಮಹಾನ್ ವ್ಯಕ್ತಿಯಾಗಿದ್ದ್ದಾರೆ, ಡಾ.ಬಾಬು ಜಗಜೀವನರಾಮ್ ಅವರು ಹಸಿರು ಕ್ರಾಂತಿಯ ಮೂಲಕ ದೇಶಕ್ಕೆ ಅನ್ನ ನೀಡಿದ ಮಹಾನ್ ಚೇತನರಾಗಿದ್ದಾರೆ ಎಂದರು.
ಬಾಬೂಜಿ ಅವರು ಕೇಂದ್ರದ ಉಪ ಪ್ರಧಾನಿಯಾಗಿ, ರೈಲ್ವೆ, ಕೃಷಿ ಹಾಗೂ ಇತರ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಶೋಷಿತರ ಪರವಾಗಿ ಅನೇಕ ಹೋರಾಟಗಳನ್ನು ಮಾಡಿದ್ದಾರೆ ಎಂದರು.
ಇತ್ತೀಚಿನ ದಿನಗಳಲ್ಲಿ ಒಳ ಮೀಸಲಾತಿ ಗೊಂದಲಗಳು ಉಂಟಾಗಿದ್ದವು. ಇದನ್ನು ಎಡ ಬಲ ಎನ್ನದೆ ಎಲ್ಲ ಸಚಿವರ ಸಮ್ಮುಖದಲ್ಲಿ ಎ,ಬಿ, ಸಿ ಎಂದು ವರ್ಗಾಯಿಸಿ ಎಲ್ಲರಿಗೂ ಸಮಾನವಾಗಿ ಹಂಚಿಕೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಇದಕ್ಕೆ ಯಾರು ಗೊಂದಲ ಸೃಷ್ಟಿ ಮಾಡಿಕೊಳ್ಳದೆ ಒಗ್ಗಟ್ಟಾಗಿ ಇರಬೇಕು ಎಂದು ಮನವಿ ಮಾಡಿದರು.
ಪಶುಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್ ಮಾತನಾಡಿ, ಡಾ.ಬಾಬು ಜಗಜೀವ ರಾಮ್ ಅವರು ಈ ದೇಶದ ಆರ್ಥಿಕತೆ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಬಡವರಿಗೆ ಬದುಕು ಕಲ್ಪಿಸಿಕೊಟ್ಟ ಅಗ್ರಗಣ್ಯ ವ್ಯಕ್ತಿಯಾಗಿದ್ದಾರೆ ಎಂದರು.
ಹಸಿರು ಕ್ರಾಂತಿಯ ಮೂಲಕ ರಾಷ್ಟ್ರದಲ್ಲಿ ಆಹಾರ ಕೊರತೆ ಹೋಗಲಾಡಿಸಿ ರೈತರ ಬಾಳನ್ನು ಹಸನುಮಾಡಿದ ವ್ಯಕ್ತಿಯಾಗಿದ್ದಾರೆ. ನಮ್ಮ ಸರ್ಕಾರದಲ್ಲಿ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜನರಿಗೆ ತಲುಪುವಂತೆ ಮಾಡಲಾಗಿದೆ ಎಂದರು.
ಒಳ ಮೀಸಲಾತಿಗೆ ಸಂಬಂಧಿಸಿದಂತೆ ಏರ್ಪಟ್ಟಿದ್ದ ಗೊಂದಲವನ್ನು ಸಚಿವರಾದ ಎಚ್.ಕೆ.ಮುನಿಯಪ್ಪ ಮತ್ತು ಡಾ.ಎಚ್.ಸಿ.ಮಹದೇವಪ್ಪ ಸೇರಿದಂತೆ ಎಲ್ಲ ಎಡ, ಬಲ, ಲಂಬಾಣಿ ಮತ್ತು ಭೋವಿ ಸಮಾಜವನ್ನು ಪ್ರತಿನಿಧಿಸುವ ಸಚಿವರ ಸಹಕಾರದೊಂದಿಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಸಮಸ್ಯೆ ಬಗೆಹರಿಸಿದ್ದು ವಿರೋಧ ಪಕ್ಷಗಳ ಮಾತಿಗೆ ಕಿವಿಗೊಡದೆ ಅಣ್ಣ-ತಮ್ಮಂದಿರ ಹಾಗೆ ಒಗ್ಗಟ್ಟಿನಿಂದ ಇರಬೇಕು ಎಂದರು.
ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ಶ್ರೀ ಮಸಣಿಕಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಬೆಳ್ಳಿರಥ ಮತ್ತು ಕಲಾ ತಂಡಗಳೊಂದಿಗೆ ಬಾಬು ಜಗಜೀವನರಾಮ್ ಅವರ ಭಾವಚಿತ್ರವನ್ನು ಪಟ್ಟಣದ ಬಿ.ಎಂ.ರಸ್ತೆ ಮೂಲಕ ಮೆರವಣಿಗೆ ಮಾಡಲಾಯಿತು.
ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಕಾಂಗ್ರೆಸ್ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಸಾಹಿತಿ ಕೆ.ಆರ್.ರಾಚಯ್ಯ, ಎಂಪಿವಿಎಲ್ ಅಧ್ಯಕ್ಷ ಎಚ್.ಡಿ.ಗಣೇಶ್, ಕೆಪಿಸಿಸಿ ಸದಸ್ಯ ಎಚ್.ಟಿ.ಅನಿಲ್, ಮೈಸೂರು ಮಾಜಿ ಮೇಯರ್ ನಾರಾಯಣ, ಮುಖಂಡರಾದ ಎಡತೊರೆ ಎಂ.ನಿಂಗರಾಜ್, ಸಿ.ರಮೇಶ್, ರಹಮತ್‌ಜಾನ್ ಬಾಬು, ಸೀಗೂರು ವಿಜಯಕುಮಾರ್, ಭೂತನಹಳ್ಳಿ ಶಿವಣ್ಣ ಇತರರಿದ್ದರು.