ಮೈಸೂರು ನಗರದ ಮಹಾರಾಜ ಕಾಲೇಜಿನ ಶತಮಾನೋತ್ಸವ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಪ್ರತಿಭಾನ್ವೇಷಣೆ ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಉದ್ಘಾಟಿಸಿದರು. ಪ್ರೊ. ಷಣ್ಮುಗಂ, ಡಾ. ಎಂ. ಮಂಜುಳಾ, ಪ್ರೊ.ವಿಜಯಲಕ್ಷ್ಮೀ ಮನಾಪುರ, ಅರುಣ್, ಉಮಾ ಹಾಗೂ ಇತರರು ಇದ್ದರು
ಮೈಸೂರು: ಜ್ಞಾನದ ಜತೆಗೆ ನಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿಕೊಂಡು ಅದನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಗ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಅಭಿಪ್ರಾಯಪಟ್ಟರು.
ನಗರದ ಮಹಾರಾಜ ಕಾಲೇಜಿನ ಶತಮಾನೋತ್ಸವ ಸಭಾಂಗಣದಲ್ಲಿ ಪಠ್ಯೇತರ ಚಟುವಟಿಕೆಗಳ ಸಮಿತಿಯ ವತಿಯಿಂದ ಬುಧವಾರ ಆಯೋಜಿಸಿದ್ದ ಪ್ರತಿಭಾನ್ವೇಷಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಂದಲ್ಲ ಒಂದು ಪ್ರತಿಭೆ ಇರುತ್ತದೆ. ಮೊದಲು ನಮ್ಮಲ್ಲಿರುವ ಪ್ರತಿಭೆಯನ್ನು ನಾವೇ ಗುರುತಿಸಿಕೊಳ್ಳಬೇಕು. ದೇಶದ ಹೆಸರಾಂತ ನಟ ರಜನಿಕಾಂತ್ ಅವರು ಬಸ್ ಕಂಡಕ್ಟರ್ ಆಗಿದ್ದವರು. ತಮ್ಮಲ್ಲಿದ್ದ ಪ್ರತಿಭೆಯನ್ನು ಗುರುತಿಸಿಕೊಂಡು ವಿಭಿನ್ನ ಶೈಲಿಯಲ್ಲಿ ಅದನ್ನು ವ್ಯಕ್ತಪಡಿಸಿದ ಬಳಿಕವೇ ಅವರು ನಾಯಕ ನಟನಾಗಿ ಜನಪ್ರಿಯರಾದರು ಎಂದು ಹೇಳಿದರು.
ಜೀವನದಲ್ಲಿ ಸೋಲು-ಗೆಲುವು ಎರಡೂ ಇರುತ್ತವೆ. ಪ್ರತಿದಿನವೂ ಸೋಲೇ ಎದುರಾಗುವುದಿಲ್ಲ. ನಮ್ಮಲ್ಲಿ ಪ್ರತಿಭೆ ಇದ್ದರೆ ಒಂದಲ್ಲ ಒಂದು ದಿನ ಗೆಲುವು ಸಿಗುತ್ತದೆ. ಪ್ರತಿಭೆ ಇದ್ದರೆ ನಾವು ಎಲ್ಲಿದ್ದರೂ ನಮ್ಮನ್ನು ಗುರುತಿಸುತ್ತಾರೆ. ಮಹಾರಾಜ ಕಾಲೇಜು ಮೈಸೂರಿನ ಅಸ್ಮಿತೆಯಾಗಿದೆ. ಈ ಕಾಲೇಜಿನಲ್ಲಿ ಓದಿದ ಹಾಗೂ ಕೆಲಸ ಮಾಡಿದ ಅನೇಕರು ಸಮಾಜದಲ್ಲಿ ದೊಡ್ಡ ವ್ಯಕ್ತಿಗಳಾಗಿ ಹೊರಹೊಮ್ಮಿದ್ದಾರೆ. ವಿದ್ಯಾರ್ಥಿಗಳು ಇದನ್ನು ಅರ್ಥ ಮಾಡಿಕೊಂಡು ಮುನ್ನಡೆದರೆ ಎಲ್ಲರೂ ಯಶಸ್ಸು ಕಾಣಬಹುದು ಎಂದು ಕಿವಿಮಾತು ಹೇಳಿದರು.
ಕೆಲಸ ಪಡೆಯುವ ಉದ್ದೇಶದಿಂದ ಮಾತ್ರ ಓದಬಾರದು, ಜ್ಞಾನಕ್ಕಾಗಿ ಓದಬೇಕು. ಓದು ಜ್ಞಾನವನ್ನು ಹೆಚ್ಚಿಸುತ್ತದೆ. ಆದರೆ ಇಂದು ಓದಿನ ಜತೆಗೆ ಕೌಶಲವನ್ನು ಮೈಗೂಡಿಸಿಕೊಳ್ಳಬೇಕು. ಶಿಕ್ಷಣದಿಂದ ಮಾತ್ರ ನಮ್ಮನ್ನು ನಾವು ಬದಲಿಸಿಕೊಳ್ಳಲು ಸಾಧ್ಯ. ಸಮಾಜದಲ್ಲಿ ಉನ್ನತ ವ್ಯಕ್ತಿ ಎನಿಸಿಕೊಳ್ಳಲು ಶಿಕ್ಷಣ ಕಲಿಯಬೇಕು. ಅದರಲ್ಲೂ ಉನ್ನತ ಶಿಕ್ಷಣವನ್ನು ಬಹಳ ಶಿಸ್ತಿನಿಂದ ಕಲಿಯಬೇಕು ಎಂದು ಹೇಳಿದರು.
ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಓದಿದಷ್ಟು ನಾವು ಓದಲು ಸಾಧ್ಯವಿಲ್ಲ. ಅವರು ಈ ಮಟ್ಟಕ್ಕೆ ಬರಲು ಎಷ್ಟು ಕಷ್ಟಪಟ್ಟಿದ್ದರು ಎಂಬುದನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕು. ಅವರಲ್ಲಿದ್ದ ಗುರಿ ಹಾಗೂ ಶ್ರಮವನ್ನು ವಿದ್ಯಾರ್ಥಿಗಳೂ ಮೈಗೂಡಿಸಿಕೊಂಡು ಅದೇ ರೀತಿಯ ಗುರಿ ಮತ್ತು ಶ್ರಮದೊಂದಿಗೆ ಓದಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಹಾರಾಜ ಕಾಲೇಜಿನ ಪ್ರಾಂಶುಪಾಲ ಪ್ರೊ. ಷಣ್ಮುಗಂ, ಆಡಳಿತಾಧಿಕಾರಿ ಡಾ. ಎಂ. ಮಂಜುಳಾ, ಪಠ್ಯೇತರ ಚಟುವಟಿಕೆಗಳ ಸಮಿತಿ ಸಂಚಾಲಕಿ ಪ್ರೊ.ವಿಜಯಲಕ್ಷ್ಮೀ ಮನಾಪುರ, ಗಾಯಕರಾದ ಅರುಣ್, ಉಮಾ ಹಾಗೂ ಇತರರು ಇದ್ದರು.