ಹುಣಸೂರು ನಗರದ ಡೀಡ್ ಸಂಸ್ಥೆ ಆವರಣದಲ್ಲಿ ಆದಿವಾಸಿ ಮುಖಂಡರು ಬೇಡಿಕೆ ಈಡೇರಿಕೆ ಆಗ್ರಹಿಸಿ ಹಕ್ಕೊತ್ತಾಯಗಳ ಪೋಸ್ಟರ್ ಪ್ರದರ್ಶಿಸಿದರು. ವಿಠಲ್ ನಾಣಚ್ಚಿ, ಹರ್ಷ, ಜಯಪ್ಪ ಇತರರಿದ್ದರು. 
ಮೈಸೂರು

ಆದಿವಾಸಿ ಸಮುದಾಯಕ್ಕೆ ವಿಶೇಷ ಅನುದಾನ ಮೀಸಲಿಡಿ

ಪ್ರಮುಖ ಮುಖ್ಯಾಂಶಗಳು

  • ಆದಿವಾಸಿ ಮುಖಂಡರು ಒತ್ತಾಯ

ವಿಜಯವಾಣಿ ಸುದ್ದಿಜಾಲ ಹುಣಸೂರು 
ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಆದಿವಾಸಿ ಸಮುದಾಯಕ್ಕೆ ವಿಶೇಷ ಅನುದಾನ ಮೀಸಲಿಡುವ ಮೂಲಕ ಆದಿವಾಸಿಗಳ ದಶಕಗಳ ಬೇಡಿಕೆ ಈಡೇರಿಕೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಮುಂದಡಿಯಿಡಬೇಕೆಂದು ಆದಿವಾಸಿ ಮುಖಂಡರು ಒತ್ತಾಯಿಸಿದ್ದಾರೆ. 
ನಗರದ ಡೀಡ್ ಸಂಸ್ಥೆ ಆವರಣದಲ್ಲಿ ಈ ಕುರಿತು ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಆದಿವಾಸಿ ಸಮುದಾಯದ ಹಕ್ಕೊತ್ತಾಯಗಳ ಪೋಸ್ಟರ್‌ಗಳನ್ನು ಹಿಡಿದು ಮುಖಂಡರು ರಾಜ್ಯ ಸರ್ಕಾರದ ಗಮನ ಸೆಳೆದರು.
ಈ ವೇಳೆ ಮಾತನಾಡಿದ ಡೀಡ್ ಸಂಸ್ಥೆ ನಿರ್ದೇಶಕ ಡಾ.ಎಸ್.ಶೀಕಾಂತ್, ಕರ್ನಾಟಕದಲ್ಲಿ ಹೆಚ್ಚುಕಾಲ ಆಡಳಿತ ನಡೆಸಿರುವ ಹೆಗ್ಗಳಿಕೆಗೆ ಈಗತಾನೇ ಪಾತ್ರರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಬಾರಿಯ ಬಜೆಟ್‌ನಲ್ಲಾದರೂ ಅವಕಾಶ ವಂಚಿತ ಹಾಗು ಧ್ವನಿಯಿಲ್ಲದ ಆದಿವಾಸಿ ಸಮುದಾಯಗಳ ಬಲವರ್ಧನೆ ಕಡೆಗೆ ಗಮನಹರಿಸಿ ಕರ್ನಾಟವನ್ನು ಮುನ್ನಡೆ ಸಬೇಕಿದೆ. ಕರ್ನಾಟಕದಲ್ಲಿ ಪಶ್ಚಿಮ ಘಟ್ಟ ಎಲ್ಲೆಯ 9 ಜಿಲ್ಲೆಗಳ 38 ತಾಲೂಕು ಗಳಲ್ಲಿ 12 ಅರಣ್ಯ ವಾಸದ ಹಿನ್ನೆಲೆಯ ಬುಡಕಟ್ಟಿನ 90 ಸಾವಿರ ಕುಟುಂಬಗಳು 1500 ಹಾಡಿಗಳಲ್ಲಿ 6 ಲಕ್ಷ ಜನಸಂಖ್ಯೆ ಹೊಂದಿ ಕಾಡಿನಲ್ಲಿ ಕಾಡಂಚಿನಲ್ಲಿ, ಅರಣ್ಯ ಇಲಾಖೆಯ ಉಪ್ಪಟಳ ಸಹಿಸುತ್ತ, ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಈ ಸಾಲಿನ ಆಯವ್ಯಯದಲ್ಲಾದರೂ ವಿಶೇಷ ಯೋಜನೆ ಘೋಷಿಸಿ ಆದಿವಾಸಿಗಳು ಅಭಿವೃದ್ಧಿ ಪಥದಲ್ಲಿ ಸಾಗುವಂತೆ ಮಾಡಲಿ. 10 ವಷರ್ಗಳಿಂದ, ತಮ್ಮ ಅಧಿಕಾರ ಅವಧಿಯಲ್ಲಿಯೇ ಆದ ಹೈಕೋರ್ಟ್ ಆದೇಶ ಜಾರಿಗೊಳಿಸುವ ಸುವರ್ಣ ಅವಕಾಶ ತಮಗೆ ಇದ್ದರೂ ಹೈಕೋರ್ಟ್ ನೀಡಿರುವ 3418 ಆದಿವಾಸಿ ಕುಟುಂಬಗಳಿಗೆ ಪುನರ್ವಸತಿ ಆದೇಶ ಜಾರಿ ನಿಮ್ಮಿಂದಾಗಿಲ್ಲವೆನ್ನುವುದು ವಿಪರ್ಯಾಸದ ಸಂಗತಿ ಎಂದು ಬೇಸರಿಸಿದರು. 
ರಾಜ್ಯ ಕಾನೂನು ಸೇವಾ ಆಯೋಗದ ಮಾಜಿ ಸದಸ್ಯ ವಿಠಲ್ ನಾಣಚ್ಚಿ ಮಾತನಾಡಿ, ರಾಜ್ಯದ  1500 ಹಾಡಿಗಳಲ್ಲಿ ವಾಸಿಸುವ 90ಸಾವಿರ ಆದಿವಾಸಿ ಕುಟುಂಬಗಳಿಗೂ ಅರಣ್ಯ ಹಕ್ಕುಕಾಯ್ದೆ ಅನ್ವಯ ಮಾನ್ಯ ಮಾಡಿ ಹಕ್ಕುಪತ್ರ ನೀಡಬೇಕಿದೆ. ಆದಿವಾಸಿಗಳಿಗೆ ಅರಣ್ಯ ಕಿರುಸಂಪನ್ಮೂಲ ದೊರಕುವಂತೆ ಮಾಡಲು ಹಣ ನಿಗದಿ ಪಡಿಸಿ. ಹಾಡಿ ಅರಣ್ಯ ಹಕ್ಕು ಸಮಿತಿಗಳು ಚಟುವಟಿಕೆಯಿಂದ ಕಾರ್ಯ ಮಾಡಲು ಪ್ರೇರೇಪಿಸಿ. ಬಕ್ಕಲು ಅರಣ್ಯ ಪ್ರದೇಶ, ರೈತರಭೂಮಿ,  ಸಾರ್ವಜನಿಕ ಜಾಗಗಳಲ್ಲಿ, ಸರ್ಕಾರಿ ಜಾಗಗಳಲ್ಲಿ ಜೈವಿಕ ಇಂಧನ ಮರಗಳಾದ ಹೊಂಗೆ, ಹಿಪ್ಪೆ, ಬೇವು, ಸಿಮರೋಬ, ಸುರಹೊನ್ನೇ ಬೆಳೆಸಲು ಹಾಗೂ ಅವುಗಳ ಬೀಜ ಸಂಗ್ರಹ ಮಾಡಲು ಹಣ ನಿಗದಿ ಪಡಿಸಿ. ಇಂಧನ ಸ್ವಾವಲಂಬನೆಗೆ ನಾಂದಿ ಹಾಡಬೇಕಿದ್ದು ಮುಖ್ಯಮಂತ್ರಿಗಳು ಈ ವಿಷಯಗಳ ಕುರಿತು ಗಮನಿಸಲಿ ಎಂದು ಆಗ್ರಹಿಸಿದರು.
ಆದಿವಾಸಿ ಪಾರ್ಲಿಮೆಂಟ್ ಸಮಿತಿ ಅಧ್ಯಕ್ಷ ಹರ್ಷ ಮಾತನಾಡಿ, ನಗರದಲ್ಲಿ ಒಂದು ಹಾಡಿ ಯೋಜನೆ ಜಾರಿಗೆ ತಂದು ಪ್ರಾಯೋಗಿಕವಾಗಿ 9 ಜಿಲ್ಲೆಗಳಲ್ಲಿ ಒಂದೊಂದು ಸುವ್ಯವಸ್ಥಿತ ಹಾಡಿ ನಿರ್ಮಿಸಬೇಕು ಎಂದು ಅಗ್ರಹಿಸಿದರು. ಆಶ್ರಮ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರಕಿಸಲು, ಯುವಜನರ ಕೌಶಲ್ಯ ಅಭಿವೃದ್ಧಿಗೆ ವಿಶೇಷ ಅನುದಾನ ನಿಗದಿಪಡಿಸಿ ಈಸಾಲಿನಲ್ಲಿ ಕನಿಷ್ಠ 20 ಸಾವಿರ ಮನೆ ನಿರ್ಮಾಣ ಮಾಡಲು, ಕೃಷಿಗೆ ಪ್ರೋತ್ಸಾಹಿಸಲು ಅನುದಾನ ನಿಗದಿಪಡಿಸಿ. ಆದಿವಾಸಿ ಅಧಿವೃದ್ಧಿ ಮಂಡಳಿ ರಚನೆ, ಆದಿವಾಸಿ ನಿಗಮ ರಚನೆ  ಮಾಡಿ ಅಭಿವೃದ್ಧಿಗೆ ಬೆಂಬಲ ನೀಡಲು ಅನುದಾನ ನಿಗದಿಪಡಿಸಿರೆಂದು ಒತ್ತಾಯಿಸಿದರು.
ಸಭೆಯಲ್ಲಿ  ಆದಿವಾಸಿ ಮಹಿಳಾ ಸಂಘದ ಅಧ್ಯಕ್ಷೆ ಲಕ್ಷ್ಮೀ, ಹಾಡಿ ಅರಣ್ಯ ಹಕ್ಕು ಸಮಿತಿ ಒಕ್ಕೂಟಗಳ ಅಧ್ಯಕ್ಷ ಶಿವಣ್ಣ ಸೇರಿದಂತೆ ಆದಿವಾಸಿ ಮುಖಂಡರು ಹಾಜರಿದ್ದರು.