ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೊಡ್ಡ ಜಾತ್ರೆ ಹಿನ್ನೆಲೆ ಗೌತಮ ಪಂಚಮಹ ರಥೋತ್ಸವಕ್ಕೆ ಸಿದ್ಧತೆಗಳನ್ನ ನಡೆಸುತ್ತಿರುವ ದೃಶ್ಯ.
- ನಾಳೆ ಗೌತಮ ಪಂಚ ಮಹಾರಥೋತ್ಸವ
- ನಂಜನಗೂಡಿನಲ್ಲಿ ಸಂಭ್ರಮ
ನಂಜನಗೂಡು: ದಕ್ಷಿಣಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ನಂಜನಗೂಡಿನ ಶ್ರೀ ನಂಜುಂಡೇಶ್ವರ ಸ್ವಾಮಿಯ ದೊಡ್ಡ ಜಾತ್ರಾ ಮಹೋತ್ಸವ ಮಾ.30ರಂದು ಜರುಗಲಿದ್ದು, ಗೌತಮ ಪಂಚ ಮಹಾರಥೋತ್ಸವಕ್ಕೆ ಸಿದ್ಧತೆ ಪೂರ್ಣಗೊಂಡಿದೆ.
ಸೋಮವಾರ ಬೆಳಗ್ಗೆ 5.50 ರಿಂದ 6.30 ರೊಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಶ್ರೀ ಮನ್ನಹಾಗೌತಮ ರಥಾರೋಹಣ ನೆರವೇರಲಿದ್ದು, ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಲಿದೆ. ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಶುಕ್ರವಾರ ಸಂಜೆ 7 ಗಂಟೆಗೆ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದಲ್ಲಿ ಶ್ರೀಕಂಠ ಮುಡಿ ಉತ್ಸವ ನೆರವೇರಿತು. ಜಾತ್ರೆಯ ಪ್ರಮುಖ ಮತ್ತೊಂದು ಆಕರ್ಷಣೆಯಾದ ತೆಪ್ಪೋತ್ಸವ ಏ. 1 ರಂದು ರಾತ್ರಿ 7 ಗಂಟೆಗೆ ಕಪಿಲಾ ನದಿಯಲ್ಲಿ ನಡೆಯಲಿದೆ.
90 ಅಡಿ ಎತ್ತರದ ಬೃಹತ್ ರಥ: ದೊಡ್ಡಜಾತ್ರೆಯ ರಥೋತ್ಸವದಲ್ಲಿ ಶ್ರೀಕಂಠೇಶ್ವರ ಸ್ವಾಮಿ ಸೇರಿದಂತೆ ಗಣಪತಿ, ಸುಬ್ರಹ್ಮಣ್ಯ, ಚಂಡಿಕೇಶ್ವರ, ಪಾರ್ವತಿ ದೇವಿಯ 5 ಅಲಂಕೃತ ರಥಗಳು ಮೆರವಣಿಗೆಯಲ್ಲಿ ಸಾಗುತ್ತವೆ. ಶ್ರೀಕಂಠೇಶ್ವರಸ್ವಾಮಿಯ ಗೌತಮ ರಥ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದ್ದು, ಸುಮಾರು 90 ಅಡಿ ಎತ್ತರದ ಬೃಹತ್ ರಥ ಅಂದಾಜು ಇನ್ನೂರಕ್ಕೂ ಹೆಚ್ಚು ಟನ್ ತೂಕವನ್ನು ಹೊಂದಿದೆ. ಗೌತಮ ರಥದ ಉತ್ಸವ ಮಂಟಪ ವಿಶಿಷ್ಟ ಹೊಯ್ಸಳ ಶೈಲಿಯ ಕಲಾ ಕೆತ್ತನೆಯಿಂದ ಕೂಡಿದೆ. ಜಾತ್ರೆ ಸಂದರ್ಭ ನಾನಾ ಬಣ್ಣಗಳ ವಸ್ತ್ರಗಳು, ವಿವಿಧ ಬಗೆಯ ಪುಷ್ಪಗಳು ಹಾಗೂ ಬಣ್ಣದ ಧ್ವಜಗಳನ್ನು ರಥಕ್ಕೆ ಕಟ್ಟಿ ಸಿಂಗರಿಸಲಾಗುತ್ತದೆ. 1.5 ಕಿಮೀ ಉದ್ದದ ರಥ ಬೀದಿಯಲ್ಲಿ ಒಂದು ಸುತ್ತು ಐದೂ ರಥಗಳನ್ನು ಎಳೆಯುವ ಮೂಲಕ ಭಕ್ತರು ಸಂಭ್ರಮಿಸುತ್ತಾರೆ.
ಭಕ್ತರಿಗೆ ಮೂಲಸೌಲಭ್ಯ: ಜಾತ್ರೆಗೆ ಆಗಮಿಸುವ ಭಕ್ತರಿಗೆ ದೇವಸ್ಥಾನದ ಆಡಳಿತ ಮಂಡಳಿ ಕುಡಿಯುವ ನೀರು, ಶೌಚಗೃಹ, ಸಾರಿಗೆ ಸೌಲಭ್ಯ ಪಾರ್ಕಿಂಗ್ ವ್ಯವಸ್ಥೆ ಮಾಡಿದೆ. ಸಾರಿಗೆ ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳು ಹಾಗೂ ದೇವಾಲಯದ ಸುತ್ತಲೂ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಸಿಸಿ ಕ್ಯಾಮರಾ ಅಳವಡಿಕೆ: ದೊಡ್ಡ ಜಾತ್ರೆ ಪ್ರಯುಕ್ತ ರಥಗಳ ಗಾಲಿಗಳನ್ನು ದುರಸ್ತಿಪಡಿಸಿ ಐದೂ ರಥಗಳಿಗೆ ಬಣ್ಣ ಬಳಿಯಲಾಗಿದೆ. ಜತೆಗೆ ದೊಡ್ಡ ರಥವನ್ನು ಎಳೆಯಲು ನೆರವಾಗುವಂತೆ 300 ಅಡಿ ಉದ್ದದ ಬೃಹತ್ ಹಗ್ಗವನ್ನು ಪ್ರತಿವರ್ಷವೂ ನೂತನವಾಗಿ ಖರೀದಿಸಿ ರಥಕ್ಕೆ ಅಳವಡಿಸಲಾಗುತ್ತದೆ. ಹೆಚ್ಚಿನ ಜನಸಂದಣಿ ಇರುವ ನದಿ ತೀರ, ದೇವಾಲಯದ ಆವರಣ, ದಾಸೋಹ ಭವನ ಇನ್ನಿತರ ಪ್ರದೇಶಗಳಲ್ಲಿ ಕಳ್ಳತನ, ಇನ್ನಿತರ ಅಕ್ರಮ ಚಟುವಟಿಕೆಗಳು ಜರುಗದಂತೆ ಸಿಸಿ ಕ್ಯಾಮರಾ ಅಳವಡಿಸುವ ಕಾರ್ಯ ಪೂರ್ಣಗೊಂಡಿದೆ.
ಪೊಲೀಸರಿಂದ ವಾಚ್ ಟವರ್ ನಿರ್ಮಾಣ: ಸಾರ್ವಜನಿಕರು ಓಡಾಡುವ ಪ್ರದೇಶಗಳಲ್ಲಿ ಪೊಲೀಸ್ ವಾಚ್ ಟವರ್‌ಗಳನ್ನು ನಿರ್ಮಿಸಲಾಗಿದೆ. ಬೆಂಗಳೂರು, ಮೈಸೂರು, ಚಾಮರಾಜನಗರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚುವರಿ ಕೆಎಸ್‌ಆರ್‌ಟಿಸಿ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಏ.3 ರಂದು ದೇವಾಲಯದಲ್ಲಿ ನಡೆಯಲಿರುವ ನಂದಿ ವಾಹನೋತ್ಸವದೊಂದಿಗೆ ಪ್ರಸಕ್ತ ವರ್ಷದ ದೊಡ್ಡ ಜಾತ್ರಾ ಮಹೋತ್ಸವದ ಧಾರ್ಮಿಕ ಪೂಜಾ ಕಾರ್ಯಗಳು ಸಂಪನ್ನಗೊಳ್ಳಲಿವೆ.
ಹೆಚ್ಚುವರಿ ವಿಶೇಷ ರೈಲು ಸೇವೆ: ಶ್ರೀಕಂಠೇಶ್ವರ ಸ್ವಾಮಿ ದೊಡ್ಡ ಜಾತ್ರೆ (ಪಂಚ ಮಹಾರಥೋತ್ಸವ) ಪ್ರಯುಕ್ತ, ನೈರುತ್ಯ ರೈಲ್ವೆಯು ಮಾರ್ಚ್ 30 ರಿಂದ ಏಪ್ರಿಲ್ 3ರವರೆಗೆ ಮೈಸೂರು ಮತ್ತು ನಂಜನಗೂಡು ಟೌನ್ ನಡುವೆ (06225/06226) ವಿಶೇಷ ರೈಲನ್ನು ಕಲ್ಪಸಲಾಗಿದೆ. 5 ದಿನಗಳಲ್ಲಿ ದಿನಕ್ಕೆ 5 ಟ್ರಿಪ್‌ಗಳಂತೆ ಈ ಸೇವೆ ಲಭ್ಯವಿದ್ದು, ಭಕ್ತರ ಅನುಕೂಲಕ್ಕಾಗಿ ಹೆಚ್ಚುವರಿ ರೈಲುಗಳ ವ್ಯವಸ್ಥೆ ಮಾಡಲಾಗಿದೆ. ರೈಲು ಸಂಖ್ಯೆ 06225 ಮೈಸೂರು ನಂಜನಗೂಡು ಟೌನ್ ನಿಂದ ಎಕ್ಸ್‌ಪ್ರೆಸ್ ಮೈಸೂರಿನಿಂದ ಮಧ್ಯಾಹ್ನ 1 ಗಂಟೆಗೆ ಹೊರಟು, ನಂಜನಗೂಡು ಟೌನ್‌ಗೆ 2 ಗಂಟೆಗೆ ತಲುಪಲಿದೆ, ಮಧ್ಯಂತರ ನಿಲ್ದಾಣಗಳಲ್ಲಿ ಆಗಮನ / ನಿರ್ಗಮನ ಸಮಯಗಳು ಚಾಮರಾಜಪುರಂ 1.7/1. 8 ಗಂಟೆ, ಅಶೋಕಪುರಂ 1.15/1.16 ಗಂಟೆ, ಕಡಕೊಳ 1.29/1.30 ಗಂಟೆ, ತಾಂಡವಪುರ 1.35/1.36 ಗಂಟೆ, ಸುಜಾತಪುರಂ 1.41/1.42 ಗಂಟೆಗೆ ಬರಲಿದೆ. ರೈಲು ಸಂಖ್ಯೆ 06226 ನಂಜನಗೂಡು ಟೌನ್ - ಮೈಸೂರು ಎಕ್ಸ್‌ಪ್ರೆಸ್ ನಂಜನಗೂಡು ಟೌನ್‌ನಿಂದ 1.10 ಗಂಟೆಗೆ ಹೊರಟು, ಮೈಸೂರಿಗೆ 2.10 ಗಂಟೆಗೆ ತಲುಪಲಿದೆ, ಮಧ್ಯಂತರ ನಿಲ್ದಾಣಗಳಲ್ಲಿ ಆಗಮನ / ನಿರ್ಗಮನ ಸಮಯಗಳು, ಸುಜಾತಪುರಂ 1.15/1.16 ಗಂಟೆ, ತಾಂಡವಪುರ 1.21/1.22 ಗಂಟೆ, ಕಡಕೊಳ 1.27/1.28 , 1.48/15.50 ಗಂಟೆ, ಚಾಮರಾಜಪುರಂ 1.55/15.56 ಗಂಟೆಗೆ ಬರಲಿದೆ ಎಂದು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಗಿರೀಶ ಧರ್ಮರಾಜ ಕಲಗೊಂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.