ಸಾಮೂಹಿಕ ಹನುಮಾನ್ ಚಾಲೀಸಾ ಪಾರಾಯಣ ಮಹಾಯಜ್ಞಕ್ಕಾಗಿ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಸನದ ವ್ಯವಸ್ಥೆ ಮಾಡಿರುವುದು.
- ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜನೆ
- ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ನೇತೃತ್ವ
- ನೀರು, ಪ್ರಸಾದ ವಿತರಣೆಗೆ ವ್ಯವಸ್ಥೆ
ಮೈಸೂರು: ಲೋಕ ಕಲ್ಯಾಣದ ಸಂಕಲ್ಪದೊಂದಿಗೆ ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ನೇತೃತ್ವದಲ್ಲಿ ಫೆ.14ರಂದು ಬೆಳಗ್ಗೆ 9ಕ್ಕೆ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಸಾಮೂಹಿಕ ಹನುಮಾನ್ ಚಾಲೀಸಾ ಪಾರಾಯಣ ಮಹಾಯಜ್ಞಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿವೆ.
ರೈತರು, ಸೈನಿಕರು ಹಾಗೂ ಜನಸಾಮಾನ್ಯರ ಒಳಿತಿಗಾಗಿ ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಈ ಪಾರಾಯಣದಲ್ಲಿ ಈ ಬಾರಿ ಅಂದಾಜು 75 ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇದಕ್ಕಾಗಿ ಮೈದಾನದಲ್ಲಿ ಬೃಹತ್ ಶಾಮಿಯಾನ ಹಾಕಲಾಗಿದ್ದು, ಗಣ್ಯರು, ಸ್ವಾಮೀಜಿಗಳು ಮತ್ತು ಸಂತರಿಗಾಗಿ ವಿಶೇಷ ವೇದಿಕೆ ನಿರ್ಮಿಸಲಾಗಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸುವ ಭಕ್ತರಿಗಾಗಿ ಕುಡಿಯುವ ನೀರು, ಪ್ರಸಾದ ಹಾಗೂ ಹನುಮದ್ ರಕ್ಷೆ ನೀಡಲು ವ್ಯವಸ್ಥೆ ಮಾಡಲಾಗಿದೆ. 40 ರಿಂದ 50 ಸಾವಿರ ಭಕ್ತರು ಕುಳಿತು ಪಾರಾಯಣ ಮಾಡಲು ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ತಾತ್ಕಾಲಿಕ ಶೌಚಗೃಹಗಳು ಮತ್ತು ವೈದ್ಯಕೀಯ ಸೇವಾ ಘಟಕದ ವ್ಯವಸ್ಥೆ ಮಾಡಲಾಗಿದೆ.
ಗಣ್ಯರ ವಾಹನಗಳ ನಿಲುಗಡೆಗೆ ವೇದಿಕೆ ಬಳಿ ಹಾಗೂ ಸಾರ್ವಜನಿಕರ ವಾಹನಗಳಿಗೆ ಮಹಾರಾಜ ಕಾಲೇಜು ಮೈದಾನ, ಜಿಪಂ ರಸ್ತೆ ಹಾಗೂ ಅಕ್ಕಪಕ್ಕದ ರಸ್ತೆಗಳಲ್ಲಿ ಪಾರ್ಕಿಂಗ್, ದೂರದ ಬಡಾವಣೆಗಳಿಂದ ಬರುವ ಭಕ್ತರಿಗೆ ಅನುಕೂಲವಾಗಲು ಬಸ್ ಸೌಕರ್ಯವನ್ನೂ ಕಲ್ಪಿಸಲಾಗಿದೆ. ಭಕ್ತರು ಒಗ್ಗೂಡಿ ಹನುಮಾನ್ ಚಾಲೀಸಾ ಪಾರಾಯಣ ಮಾಡಲಿದ್ದಾರೆ. ತುಳಸೀದಾಸರು ರಚಿಸಿರುವ ಹನುಮಾನ್ ಚಾಲೀಸಾ ಅತ್ಯಂತ ಪವಿತ್ರವಾದದ್ದು ಹಾಗೂ ಸುಂದರಕಾಂಡ, ಸಂಪೂರ್ಣ ರಾಮಾಯಣದ ಸಾರವನ್ನು ಒಳಗೊಂಡಿದೆ.
ಐತಿಹಾಸಿಕ ಕಾರ್ಯಕ್ರಮ:
ಶುಕ್ರವಾರ ಮೈದಾನದಲ್ಲಿ ಅಂತಿಮ ಹಂತದ ಸಿದ್ಧತೆ ಪರಿಶೀಲಿಸಿದ ನಂತರ ಮಾತನಾಡಿದ ಶಾಸಕ ಟಿ.ಎಸ್.ಶ್ರೀವತ್ಸ , ಮೈಸೂರಿನಲ್ಲಿ ಐತಿಹಾಸಿಕ ಕಾರ್ಯಕ್ರಮ ನಡೆಯಲಿದ್ದು, ಶ್ರೀಗಳ ನೇತೃತ್ವದಲ್ಲಿ ನಡೆಯುವ ಈ ಪಾರಾಯಣ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ ಎಂದರು.
ಶಾಸಕ ಕೆ. ಹರೀಶ್‌ಗೌಡ ಮಾತನಾಡಿ, ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಸದಾ ಭಕ್ತರನ್ನು ಭಕ್ತಿಮಾರ್ಗದ ಕಡೆಗೆ ಕೊಂಡೊಯ್ಯುತ್ತಿದ್ದಾರೆ. ಅವರ ಸಾನ್ನಿಧ್ಯದಲ್ಲಿ ಪಾರಾಯಣದ ಜತೆಗೆ ಶಿವ ಪಾರ್ವತಿ ಕಲ್ಯಾಣವೂ ನಡೆಯಲಿದೆ ಎಂದು ತಿಳಿಸಿದರು.
ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಮಾತನಾಡಿ, 2016ರ ನಂತರ ಇದು ಎರಡನೇ ಬಾರಿಗೆ ನಡೆಯುತ್ತಿರುವ ಬೃಹತ್ ಪಾರಾಯಣ. ನಗರದ ಜನತೆ ಸ್ವಯಂಪ್ರೇರಣೆಯಿಂದ ಇದಕ್ಕೆ ಬೆಂಬಲ ನೀಡಿದ್ದಾರೆ ಎಂದರು.
ಮಾಜಿ ಮೇಯರ್ ನಾರಾಯಣ ಮಾತನಾಡಿ, ಪೌರ ಕಾರ್ಮಿಕರ ಮಕ್ಕಳಿಗೆ ಸಂಸ್ಕೃತ ಮತ್ತು ಪೂಜಾ ವಿಧಿವಿಧಾನಗಳನ್ನು ಕಲಿಸುವ ಮೂಲಕ ಶ್ರೀಗಳು ಧಾರ್ಮಿಕ ಅರಿವು ಮೂಡಿಸಿದ್ದಾರೆ. ದೇವರಾಜ ಅರಸು ಬಡಾವಣೆ ಸೇರಿದಂತೆ ಹಲವು ಕಡೆ ದೇವಸ್ಥಾನಗಳ ಜೀರ್ಣೋದ್ಧಾರ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಪೌರಕಾರ್ಮಿಕ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಮಾಜಿ ಶಾಸಕ ಎಲ್. ನಾಗೇಂದ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಎಂ. ರಾಜೇಂದ್ರ, ಅವಧೂತ ದತ್ತಪೀಠದ ಕಾರ್ಯದರ್ಶಿ ಎಚ್.ವಿ. ಪ್ರಸಾದ್ ಇನ್ನಿತರರಿದ್ದರು.
ಈ ಹಿಂದೆ ಆಂಧ್ರದ ತೆನಾಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ 2 ಲಕ್ಷ ಭಕ್ತರು ಪಾಲ್ಗೊಂಡು ವಿಶ್ವ ದಾಖಲೆ ನಿರ್ಮಿಸಿದ್ದರು. ಮೈಸೂರು ನಗರದಲ್ಲಿ ಎರಡನೇ ಬಾರಿಗೆ ಪಾರಾಯಣ ಏರ್ಪಡಿಸಲಾಗಿದೆ. ಹನುಮಾನ್ ಚಾಲೀಸಾ ಎಂದರೆ ಚಿಕ್ಕವರಿಂದ ದೊಡ್ಡವರವರೆಗೂ ಎಲ್ಲರೂ ಹಾಡಬಹುದಾದ ಸುಲಭ ಹಾಗೂ ಶಕ್ತಿಶಾಲಿ ಸ್ತೋತ್ರ. ಲೋಕ ಕಲ್ಯಾಣಕ್ಕಾಗಿ ಈ ಸಾಮೂಹಿಕ ಪ್ರಾರ್ಥನೆ ಏರ್ಪಡಿಸಲಾಗಿದೆ. ಮರುದಿನವೇ ಶಿವರಾತ್ರಿ ಇರುವುದು ಈ ಕಾರ್ಯಕ್ರಮದ ವಿಶೇಷತೆ ಹೆಚ್ಚಿಸಿದೆ. ಹನುಮಂತನು ಶಿವನ ಅಂಶ ಹಾಗೂ ರಾಮನ ಪ್ರಿಯ ಭಕ್ತ. ಈ ಸಂದರ್ಭದಲ್ಲಿ ಹನುಮಾನ್ ಚಾಲೀಸಾ ಪಾರಾಯಣ ಮಾಡುವುದು ಅತ್ಯಂತ ಫಲಪ್ರದ.