ಮೈಸೂರು ಆಕಾಶವಾಣಿ ಕೇಂದ್ರದಲ್ಲಿ ಸಂಗೀತ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.
- ಮೈಸೂರು ಆಕಾಶವಾಣಿಯಿಂದ ಕಾರ್ಯಕ್ರಮ ಆಯೋಜನೆ
- ಇದೇ ವೇಳೆ ದೇಶದ 24 ಕಡೆಗಳಲ್ಲಿ ಸಂಗೀತ ಸಮ್ಮೇಳನ ಆಯೋಜನೆ
- ದೇಶದ ಸಮೃದ್ಧ ಸಂಗೀತ ಪರಂಪರೆ ಜನಪ್ರಿಯಗೊಳಿಸುವ ಉದ್ದೇಶ
ಮೈಸೂರು: ಮೈಸೂರು ಆಕಾಶವಾಣಿ ವತಿಯಿಂದ ನ.23 ರಂದು ಕುವೆಂಪುನಗರದ ಗಾನಭಾರತಿ ವೀಣೆಶೇಷಣ್ಣ ಭವನದಲ್ಲಿ 67ನೇ ಆಕಾಶವಾಣಿ ಸಂಗೀತ ಸಮ್ಮೇಳನ ಆಯೋಜಿಸಲಾಗಿದೆ ಎಂದು ಮೈಸೂರು ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥ ಮಂಜುನಾಥ ಎನ್. ಬೇದ್ರೆ ತಿಳಿಸಿದರು.
ಅಂದು ಸಂಜೆ 6ಕ್ಕೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ ಉಪಸ್ಥಿತಿಯಲ್ಲಿ ಸಂಗೀತ ಸಮ್ಮೇಳನ ಆಯೋಜಿಸಲಾಗಿದೆ. ವಿದ್ವಾನ್ ಎಚ್.ಎಲ್. ಶಿವಶಂಕರಸ್ವಾಮಿ ಅವರಿಂದ ಮೃದಂಗ ತರಂಗ ಹಾಗೂ ಡಾ.ಎಸ್.ವಿ. ಸಹನಾ ಅವರಿಂದ ವೀಣಾವಾದನ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರಿಗೆ ಮುಕ್ತ ಪ್ರವೇಶಾವಕಾಶ ನೀಡಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ದೇಶದ ಸಮೃದ್ಧ ಸಂಗೀತ ಪರಂಪರೆಯನ್ನು ಜನಪ್ರಿಯಗೊಳಿಸುವುದು ಈ ಸಮ್ಮೇಳನದ ಉದ್ದೇಶವಾಗಿದೆ. ಸುಪ್ರಸಿದ್ಧ ಗಾಯಕರು, ಗಾಯಕಿಯರು ಮಾತ್ರವಲ್ಲದೆ ಉದಯೋನ್ಮುಖ ಪ್ರತಿಭೆಗಳ ಪ್ರದರ್ಶನಕ್ಕೆ ಇದು ಪ್ರತಿಷ್ಠಿತ ವೇದಿಕೆಯಾಗಿದೆ. ಈ ಸಂಗೀತ ಸಮ್ಮೇಳನ ಬೆಂಗಳೂರು ದೂರದರ್ಶದಲ್ಲೂ ಬಿತ್ತರಗೊಳ್ಳಲಿದೆ ಎಂದರು.
ನ.2 ರಿಂದ 29ರ ಅವಧಿಯಲ್ಲಿ ದೇಶದ 24 ಕಡೆಗಳಲ್ಲಿ ವಿವಿಧ ದಿನಾಂಕಗಳಂದು ಸಂಗೀತ ಸಮ್ಮೇಳನ ನಡೆಯಲಿದೆ. ಈ ಎಲ್ಲ ಸಮ್ಮೇಳನಗಳಲ್ಲಿ ಕಲಾವಿದರು ನಡೆಸಿಕೊಡುವ ಸಂಗೀತ ಕಾರ್ಯಕ್ರಮವನ್ನು ಜನವರಿ ತಿಂಗಳಿನಿಂದ ಪ್ರತಿನಿತ್ಯ ರಾತ್ರಿ 10 ರಿಂದ 11ರವರೆಗೆ ದೇಶವ್ಯಾಪಿ ಆಕಾಶವಾಣಿ ಜಾಲದಲ್ಲಿ ಪ್ರಸಾರ ಮಾಡಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮ ಸಂಯೋಜಕ ಎನ್.ಕೇಶವಮೂರ್ತಿ, ತಾಂತ್ರಿಕ ವಿಭಾಗದ ಮುಖ್ಯಸ್ಥ ಪಿ.ಆನಂದ್, ಉದ್ಘೋಷಕ ಮೈಸೂರು ಉಮೇಶ್ ಇದ್ದರು.