ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್
- ಸಿಎಂ ಹಾಗೂ ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿ ಅಧಿಕಾರ ಹಂಚಿಕೆ ಗೊಂದಲಕ್ಕೆ ತೆರೆ ಎಳೆದಿದ್ದಾರೆ
- ಸಮುದಾಯದ ಮುಖಂಡರು ಅಥವಾ ಸ್ವಾಮೀಜಿ ಹೇಳಿದರೆ ಅದು ಆಗಲ್ಲ
- ನಮ್ಮಲ್ಲಿ ಯಾವ ಗೊಂದಲವೂ ಇಲ್ಲ, ಏನೇ ಇದ್ದರೂ ಹೈಕಮಾಂಡ್ ತೀರ್ಮಾನ ಮಾಡಲಿದೆ
ಮೈಸೂರು: ಅಧಿಕಾರ ಹಂಚಿಕೆ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧ ಎಂದು ಸಿಎಂ ಹಾಗೂ ಡಿಸಿಎಂ ಹೇಳಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಅಧಿಕಾರ ಹಂಚಿಕೆ ವಿಚಾರವಾಗಿ ನಡೆದ ಎಲ್ಲ ಚರ್ಚೆಗಳು ಮುಗಿದಿವೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಹಾಗೂ ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿ ಅಧಿಕಾರ ಹಂಚಿಕೆ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಹೀಗಿರುವಾಗ ಗೊಂದಲ ಎಲ್ಲಿದೆ? ಎಲ್ಲವೂ ಮಾಧ್ಯಮಗಳ ಸೃಷ್ಟಿ ಅಷ್ಟೆ. ಕಳೆದ ಎರಡೂವರೆ ವರ್ಷದಿಂದಲೂ ಗೊಂದಲ ಅಂತಲೇ ಮಾಧ್ಯಮಗಳು ಹೇಳುತ್ತಲೇ ಇವೆ. ಆದರೆ ನಮ್ಮಲ್ಲಿ ಯಾವ ಗೊಂದಲವೂ ಇಲ್ಲ, ಏನೇ ಇದ್ದರೂ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದರು.
ಒಕ್ಕಲಿಗ ಸಮಾಜ ಡಿಕೆಶಿ ಸಿಎಂ ಆಗಬೇಕೆಂದು ಒತ್ತಾಯಿಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಮುದಾಯದ ಮುಖಂಡರು ಅಥವಾ ಸ್ವಾಮೀಜಿ ಹೇಳಿದರೆ ಅದು ಆಗಲ್ಲ. ಯಾರು ಏನಾಗಬೇಕೆಂದು ತೀರ್ಮಾನಿಸುವುದು ಕಾಂಗ್ರೆಸ್ ಹೈಕಮಾಂಡ್. ಪ್ರಜಾಪ್ರಭುತ್ವದಲ್ಲಿ ಹೇಳಿಕೆ ಕೊಡಲು ಎಲ್ಲರಿಗೂ ಅವಕಾಶ ಇರಲಿದೆ ಅಷ್ಟೆ ಎಂದರು. ಡಿಕೆಶಿ ಮುಖ್ಯಮಂತ್ರಿ ಆಗುತ್ತಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸದೆ ತೆರಳಿದರು.
ಕೇಂದ್ರ ಜವಾಬ್ದಾರಿ ಹೊರಬೇಕಿದೆ
ಉತ್ತರ ಕರ್ನಾಟಕದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಹೋರಾಟದ ಕುರಿತು ಕೇಂದ್ರ ಸರ್ಕಾರ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು. ರಾಜ್ಯದ ಸಂಸದರು ಇದರ ಬಗ್ಗೆ ಕೇಂದ್ರದಲ್ಲಿ ಧ್ವನಿ ಎತ್ತಬೇಕು. ರಾಜ್ಯ ಸರ್ಕಾರ ಸದಾ ರೈತರ ಪರವಾಗಿ ಕೆಲಸ ಮಾಡಲಿದೆ. ಮೆಕ್ಕೆಜೋಳ ಖರೀದಿ ವಿಚಾರವಾಗಿ ಈಗಾಗಲೇ ಸಿಎಂ ಸಭೆ ನಡೆಸಿದ್ದು, ಕೇಂದ್ರ ಸರ್ಕಾರ ಇದರ ಜವಾಬ್ದಾರಿ ಹೊರಬೇಕಿದೆ ಎಂದರು.
ಈ ಬಾರಿಯ ಚಳಿಗಾಲದ ಅಧಿವೇಶನಕ್ಕೆ ತಯಾರಿ ಮಾಡಿಕೊಂಡಿದ್ದು, ಸರ್ಕಾರ ವಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧವಿದೆ. ನಮ್ಮನ್ನು ಪ್ರಶ್ನಿಸುವುದು ವಿಪಕ್ಷಗಳ ಕರ್ತವ್ಯವಾಗಿದ್ದು, ವಿಪಕ್ಷಗಳ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಲು ನಾವು ಸಿದ್ಧರಾಗಿದ್ದೇವೆ ಎಂದು ದಿನೇಶ್ ಗುಂಡೂರಾವ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.