ಎಐ ಚಿತ್ರ 
ಮೈಸೂರು

ಏಲಿಯನ್ಸ್ ಎಂಬುದು ಕಾಲ್ಪನಿಕ

ಸದೇಶ್ ಕಾರ್ಮಾಡ್
ಮೈಸೂರು: ಭೂಮಿ ಹೊರತು ಪಡಿಸಿ ಬೇರೆ ಗ್ರಹಗಳಲ್ಲಿ ಜೀವಿಗಳ ಇರುವಿಕೆ ಇನ್ನೂ ದೃಢಪಟ್ಟಿಲ್ಲ. ಹೀಗಾಗಿ ಏಲಿಯನ್ಸ್ (ಅನ್ಯಲೋಕದ ಜೀವಿಗಳು) ಎಂಬುದು ಕೇವಲ ಕಾಲ್ಪನಿಕ ಅಷ್ಟೆ ಎಂದು ನಗರದ ಪ್ರಾದೇಶಿಕ ಶಿಕ್ಷಣ ಸಂಸ್ಥೆಯ (ಆರ್‌ಐಇ) ನಿವೃತ್ತ ಪ್ರಾಧ್ಯಾಪಕ ಪ್ರೊ.ಎಸ್.ಎನ್. ಪ್ರಸಾದ್ ಅಭಿಪ್ರಾಯಪಟ್ಟರು.
ಮೈಸೂರು ವಿಶ್ವವಿದ್ಯಾಲಯದ ಶಾಲೆಗಳಲ್ಲಿ ವಿಜ್ಞಾನ ಶಿಕ್ಷಣ ಕೇಂದ್ರ ವತಿಯಿಂದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಶನಿವಾರ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವಿಜ್ಞಾನ ಮತ್ತು ಗಣಿತ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಕುತೂಹಲದ ಪ್ರಶ್ನೆಗಳಿಗೆ ಉತ್ತರಿಸಿದರು.
ನಮ್ಮ ಸೌರ ಮಂಡಲದಲ್ಲಿ ಭೂಮಿ ಹೊರತು ಪಡಿಸಿ ಬೇರೆ ಯಾವುದೇ ಗ್ರಹಗಳಲ್ಲಿ ಜೀವಿಗಳ ಇರುವಿಕೆಯನ್ನು ವಿಜ್ಞಾನ ದೃಢಪ ಡಿಸಿಲ್ಲ. ಬ್ರಹ್ಮಾಂಡದಲ್ಲಿ ಭೂಮಿಯ ಮಾದರಿಯ ಗ್ರಹಗಳನ್ನು ಗುರುತಿಸಲಾಗಿದೆ. ಅಲ್ಲಿ ಜೀವಿಗಳು ಇದೆಯೋ ಇಲ್ಲವೋ ಎಂಬುದು ಇನ್ನೂ ದೃಢಪಟ್ಟಿಲ್ಲ. ಏಲಿಯನ್ಸ್ ಕುರಿತು ಯಾವುದೇ ವಿಜ್ಞಾನದ ಪುಸ್ತಕಗಳಲ್ಲಿ ಉಲ್ಲೇಖಗಳು ಇಲ್ಲ. ಸಿನಿಮಾ ಹಾಗೂ ಕತೆಗಳಲ್ಲಿ ಮಾತ್ರ ಏಲಿಯನ್ಸ್‌ಅನ್ನು ಕಾಣಬಹುದು. ಒಂದರ್ಥದಲ್ಲಿ ಮನುಷ್ಯನನ್ನೇ ಏಲಿಯನ್ಸ್ ಎಂದು ಕರೆಯಬಹುದು ಎಂದರು.
ಬ್ರಹ್ಮಾಂಡದಲ್ಲಿ ಭೂಮಿಯ ಮಾದರಿಯ ಗ್ರಹಗಳನ್ನು ತಲುಪಲು ಹಾಗೂ ಅಲ್ಲಿ ಜೀವವೈವಿಧ್ಯತೆ ಇರುವುದನ್ನು ಗುರುತಿಸಲು ಇನ್ನೂ ನೂರಾರು ವರ್ಷಗಳ ಅವಶ್ಯಕತೆ ಇದೆ. ವೈಜ್ಞಾನಿಕವಾಗಿ ಇಂತಹ ಪ್ರಯತ್ನಗಳು ನಡೆಯುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಭೂಮಿ ಮಾತ್ರ ಮನುಷ್ಯನಿಗೆ ವಾಸಯೋಗ್ಯವಾಗಿದ್ದು, ಮಂಗಳ ಗ್ರಹದಲ್ಲಿ ಮನುಷ್ಯನ ವಾಸಕ್ಕೆ ಪೂರಕವಾದ ವಾತಾವರಣ ಇಲ್ಲ. ಆದರೆ, ಅಲ್ಲಿ ಅಂತಹ ವಾತಾವರಣ ಸೃಷ್ಟಿಸಬೇಕಾಗಿದ್ದು, ವೈಜ್ಞಾನಿಕವಾಗಿ ಅಂತಹ ಪ್ರಯತ್ನಗಳು ನಡೆಯುತ್ತಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ರಸಾಯನಶಾಸ್ತ್ರ ನಿವೃತ್ತ ಪ್ರಾಧ್ಯಾಪಕ ಪ್ರೊ.ಎಸ್. ಶಶಿಕಾಂತ್, ಗಣಿತಶಾಸ್ತ್ರ ಪ್ರಾಧ್ಯಾಪಕ ಡಾ.ರಂಗರಾಜನ್ ಇದ್ದರು.

ಮಂಗಳನಲ್ಲಿ ಪರಿಸರ ಸೃಷ್ಟಿಗೆ ಪ್ರಯತ್ನ

ಅಮೆರಿಕದ ನಾಸಾ ವಿಜ್ಞಾನಿಗಳು ಮಂಗಳಗ್ರಹದಲ್ಲಿ ಭೂಮಿಯ ಮಾದರಿಯ ಪರಿಸರ ಸೃಷ್ಟಿಗೆ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಸಿಎಫ್‌ಟಿಆರ್‌ಐ ನಿವೃತ್ತ ವಿಜ್ಞಾನಿ ಡಾ.ಭಾಗ್ಯಲಕ್ಷ್ಮೀ ಹೇಳಿದರು. ಯಾವುದೇ ಸಸ್ಯ ಬೆಳವಣಿಗೆ ಹೊಂದಲು ಅದಕ್ಕೆ ಪೂರಕವಾದ ವಾತಾವರಣ ಅತ್ಯಂತ ಅವಶ್ಯಕ. ಸಸ್ಯದ ಬೆಳಣಿಗೆಗೆ ಪೂರಕವಾದ ಮಣ್ಣಿಜನ ಜತೆಗೆ ಆಕ್ಸಿಜನ್, ಕಾರ್ಬನ್ ಡೈಆಕ್ಸೈಡ್ ಹಾಗೂ ನೀರು ಅವಶ್ಯಕ. ನೀರು ಇಲ್ಲದೆ ಸಸ್ಯ ಹಾಗೂ ಪ್ರಾಣಿಗಳು ಬೆಳವಣಿಗೆ ಹೊಂದಲು ಹಾಗೂ ಬದುಕುಳಿಯಲು ಸಾಧ್ಯವಿಲ್ಲ. ನಮ್ಮ ದೇಹದಲ್ಲಿ ಶೇ.70 ರಷ್ಟು ನೀರಿನ ಅಂಶ ಇರುತ್ತದೆ. ಸಾಕಷ್ಟು ಸಸ್ಯಗಳಲ್ಲಿ ಶೇ.90 ರಷ್ಟು ನೀರಿನ ಅಂಶ ಇರುತ್ತದೆ. ಮಂಗಳಗ್ರಹದಲ್ಲಿ ನೀರು ಇಲ್ಲ. ಹೀಗಿದ್ದರೂ ರೋಬಟ್‌ಗಳನ್ನು ಮಂಗಳಗ್ರಹಕ್ಕೆ ಕಳುಹಿಸಿ ಅಲ್ಲಿ ಪರಿಸರ ಸೃಷ್ಟಿಗೆ ಪೂರಕವಾದ ವಾತಾವರಣ ಸೃಷ್ಟಿಗೆ ಪ್ರಯತ್ನ ನಡೆಯುತ್ತಿದೆ. ಇದು ತುಂಬಾ ಕ್ಲಿಷ್ಟಕರವಾದ ಸವಾಲಾಗಿದ್ದರೂ ಮನುಷ್ಯನಿಂದ ಅಸಾಧ್ಯವಾದದ್ದು ಏನೂ ಇಲ್ಲ ಎಂದರು.

ಜಾಗತಿಕ ತಾಪಮಾನ ತಡೆಯುವುದು ಹೇಗೆ?

ಜಾಗತಿಕ ತಾಪಮಾನವನ್ನು ವಿಜ್ಞಾನದ ಮೂಲಕ ತಡೆಯುವುದು ಕಷ್ಟಸಾಧ್ಯ. ಆದರೆ, ವಿಶ್ವದ ಪ್ರತಿಯೊಂದು ಭಾಗದಲ್ಲಿ ಜನರು ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿದರೆ ಯಶಸ್ಸು ಕಾಣಬಹುದು ಎಂದು ಭೌತವಿಜ್ಞಾನ ಪ್ರಾಧ್ಯಾಪಕ ಪ್ರೊ.ಎಂ.ಎಸ್. ಚಂದ್ರಶೇಖರ ಅಭಿಪ್ರಾಯಪಟ್ಟರು. ಜಾಗತಿಕ ತಾಪಮಾನ ತಡೆಗೆ ಒಂದು ಪ್ರದೇಶದಲ್ಲಿ ಪ್ರಯತ್ನ ನಡೆಸಿದರೆ ಸಾಲದು. ವಿಶೇಷವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ ತಡೆಗೆ ಮೊದಲ ಆದ್ಯತೆ ನೀಡಬೇಕಾಗಿದೆ. ವಿಜ್ಞಾನದ ಯಾವುದಾದರು ಒಂದು ಪ್ರಯೋಗದ ಮೂಲಕ ತಾಪಮಾನ ಕಡಿಮೆ ಮಾಡಬಹುದೇ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ವಿಜ್ಞಾನಿಗಳು ಪ್ರಯತ್ನ ನಡೆಸಿದ್ದಾರೆ. ಆದರೆ, ಭೂಮಿಯ ಗಾತ್ರ ತುಂಬಾ ದೊಡ್ಡದಾಗಿರುವ ಹಿನ್ನೆಲೆಯಲ್ಲಿ ಇಂತಹ ಪ್ರಯತ್ನಗಳಿಗೆ ದುಬಾರಿ ವೆಚ್ಚವಾಗುತ್ತದೆ. ಹಾಗಾಗಿ ಜನರ ಸಾಂಘಿಕ ಪ್ರಯತ್ನದಿಂದ ಜಾಗತಿಕ ತಾಪಮಾನ ತಡೆಯಬೇಕು ಎಂದು ಸಲಹೆ ನೀಡಿದರು.

ಹೃದಯಾಘಾತಕ್ಕೆ ಕಾರಣವೇನು?

ಪ್ರಸ್ತುತ ಹೆಚ್ಚುತ್ತಿರುವ ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣವೇ ಅಥವಾ ಜೀವನಶೈಲಿಯಲ್ಲಿ ಆಗಿರುವ ಬದಲಾವಣೆಗಳು ಕಾರಣವೇ ಎಂಬ ವಿದ್ಯಾರ್ಥಿಯ ಪ್ರಶ್ನೆಗೆ ಉತ್ತರಿಸಿದ ಸಿಎಫ್‌ಟಿಆರ್‌ಐ ನಿವೃತ್ತ ವಿಜ್ಞಾನಿ ಡಾ.ಭಾಗ್ಯಲಕ್ಷ್ಮೀ, ಹೃದಯಾಘಾತ ಹೆಚ್ಚಾಗಲು ಜೀವಶೈಲಿಯ ಬದಲಾವಣೆಯೇ ಪ್ರಮುಖ ಕಾರಣ. ಹಿಂದಿನ ಕಾಲದಲ್ಲಿ ಆಹಾರ ಮಿತವಾಗಿ ದೊರೆಯುತಿತ್ತು. ಜತೆಗೆ ದೈಹಿಕ ಪರಿಶ್ರಮದ ಕೆಲಸಗಳು ಹೆಚ್ಚಾಗಿ ಇರುತಿತ್ತು. ಆದರೆ, ಪ್ರಸ್ತುತ ಜನರು ದೈಹಿಕ ಶ್ರಮಕ್ಕಿಂತ ಹೆಚ್ಚಾಗಿ ಆಹಾರ ಸೇವನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಹೃದಯಾಘಾತ ಹೆಚ್ಚಾಗಿ ಆಗುತ್ತಿದೆ ಎಂದರು.