ನಗರದ ಹೆಬ್ಬಾಳದಲ್ಲಿ ಇರುವ ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಎಚ್.ಪಿ.ಮಂಜುನಾಥ್ ಉದ್ಘಾಟಿಸಿದರು. ಎಸ್.ಬಸವರಾಜು, ಸೋಮಶೇಖರ್ ಇತರರಿದ್ದರು. 
ಮೈಸೂರು

ಪ್ರತಿ ಚುನಾವಣೆಯಲ್ಲೂ ಮದ್ಯದ ಘಾಟು

ಅವಿನಾಶ್ ಜೈನಹಳ್ಳಿ
ಮೈಸೂರು: ನಗರದ ಹೆಬ್ಬಾಳದಲ್ಲಿ ಇರುವ ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದ 6ನೇ ವರ್ಷದ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ 10 ದಿನಗಳ 56ನೇ ಕುಡಿತ ಬಿಡಿಸುವ ಉಚಿತ ಶಿಬಿರ ಬುಧವಾರ ಸಮಾರೋಪಗೊಂಡಿತು.
ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ, ನಮ್ಮ ದೇಶದಲ್ಲಿ ಚುನಾವಣೆಗಳು ಬಂದಾಗ ಮದ್ಯ ಸೇವಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿ ಚುನಾವಣೆಯಲ್ಲೂ ಮದ್ಯದ ಘಾಟು ಹೆಚ್ಚಾಗುತ್ತಲೇ ಇದೆ. ಈ ಕೂಪಕ್ಕೆ ಯುವ ಸಮೂಹ ಸಿಲುಕುತ್ತಿರುವುದು ದುರದೃಷ್ಟಕರ ಸಂಗತಿ. ಹುಣಸೂರು ಕ್ಷೇತ್ರದಿಂದ ನಾನು ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಮದ್ಯ ಹಂಚಿ ಚುನಾವಣೆ ಮಾಡಿದ ಇತಿಹಾಸವೇ ನಮ್ಮಲ್ಲಿ ಇಲ್ಲ ಎಂದರು.
ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದ ಸಂಸ್ಥಾಪಕ ಎಸ್.ಬಸವರಾಜು ಮಾತನಾಡಿ, ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರ ಸಮಾಜ ಸೇವೆಗೆ ತನ್ನನ್ನು ತಾನು ಅರ್ಪಿಸಿಕೊಂಡಿದೆ. ಸಂಸ್ಥೆ 6 ವರ್ಷಗಳಲ್ಲಿ 56ನೇ ಕುಡಿತ ಬಿಡಿಸುವ ಉಚಿತ ಶಿಬಿರವನ್ನು ಆಯೋಜಿಸಿ ಯಶಸ್ವಿಯಾಗಿದೆ. ಇದುವರೆಗೆ 15 ಸಾವಿರಕ್ಕೂ ಹೆಚ್ಚು ಜನರು ಇಲ್ಲಿಂದ ಚಿಕಿತ್ಸೆ ಪಡೆದಿದ್ದಾರೆ. ಸಾವಿರಾರು ಜನರಲ್ಲಿ ಮನಃಪರಿವರ್ತನೆಯಾಗಿ ಹೆಂಡತಿ, ಮಕ್ಕಳ ಜತೆ ಉತ್ತಮ ಬದಕು ಕಂಡುಕೊಂಡು ಉತ್ತಮ ಪ್ರಜೆಗಳಾಗಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಹುಣಸೂರು ಘಟಕದ ಅಧ್ಯಕ್ಷ ಸೋಮಶೇಖರ್ ಇತರರು ಇದ್ದರು.