ಹುಣಸೂರು ತಾಲೂಕು ಬಿಳಿಕೆರೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮವನ್ನು ವಿವೇಕ್ ವಿನ್ಸೆಂಟ್ ಪಾಯಸ್ ಉದ್ಘಾಟಿಸಿದರು. ಹಂದನಹಳ್ಳಿ ಸೋಮಶೇಖರ್, ಪ್ರಸನ್ನ, ಮುಖೇಶ್, ಮಾಧವ್‌ಗೌಡ ಇತರರಿದ್ದರು.
ಹುಣಸೂರು: ಮದ್ಯಪಾನಮುಕ್ತ ಜೀವನವೆನ್ನುವುದು ವ್ಯಕ್ತಿಯ ಜೀವನದಲ್ಲಿ ನೈತಿಕ ಮೌಲ್ಯಗಳನ್ನು ರೂಢಿಸಿಕೊಂಡು ಸರಳ ಜೀವನ ನಡೆಸುವ ಮಹತ್ತರ ಘಟ್ಟವಾಗಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಅಭಿಪ್ರಾಯಪಟ್ಟರು.
ತಾಲೂಕಿನ ಚಿಕ್ಕ ಹುಣಸೂರು ಯೋಜನಾ ವ್ಯಾಪ್ತಿಯ ಬಿಳಿಕೆರೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮದ್ಯಪಾನ ಮುಕ್ತ ಜೀವನವನ್ನು ನಡೆಸುತ್ತಿರುವ ನವ ಜೀವನ ಸಮಿತಿ ಬಂಧುಗಳ ನವಜೀವನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಶ್ರೀ ಕ್ಷೇತ್ರದ ವತಿಯಿಂದ ರಾಜ್ಯಾದ್ಯಂತ ಮದ್ಯಪಾನಮುಕ್ತ ಶಿಬಿರಗಳನ್ನು ಆಯೋಜಿಸಿ ಈವರೆಗೆ ಸಾವಿರಾರು ಕುಟುಂಬಗಳನ್ನು ಮರಳಿ ಸಕುಟುಂಬ ಜೀವನದ ಹಾದಿಯಲ್ಲಿ ನಡೆಸುತ್ತಿರುವ ಹೆಮ್ಮೆ ಹೊಂದಿದ್ದೇವೆ ಎಂದು ಹೇಳಿದರು.
ಮದ್ಯಪಾನ ಮುಕ್ತ ಜೀವನ ಎನ್ನುವುದು ಕುಡಿತದ ಚಟವನ್ನು ಮಾತ್ರ ತ್ಯಜಿಸುವುದು ಎಂದಲ್ಲ. ಸರಳ, ಸನ್ನಡತೆಯ, ಸುಮಧುರ ನವ ಜೀವನಕ್ಕೆ ಮುನ್ನುಡಿ ಆಗಿದೆ. ನವ ಜೀವನ ಸಮಿತಿ ಸದಸ್ಯರು ಸ್ವಾರ್ಥಿಗಳಾಗಬಾರದು, ನಿರೀಕ್ಷೆಗಳನ್ನು ಇಟ್ಟುಕೊಳ್ಳಬಾರದು, ಶ್ರೀಮಂತಿಕೆಗೆ ಆಸೆ ಪಡಬಾರದು, ನಡೆಸುತ್ತಿರುವ ಪಾನಮುಕ್ತ ಜೀವನದಲ್ಲಿಯೇ ಶ್ರೀಮಂತಿಕೆ ಅನುಭವಿಸಬೇಕು. ನಿಮ್ಮನ್ನು ನೀವು ಇನ್ನೊಬ್ಬರ ಜೊತೆ ಹೋಲಿಕೆ ಮಾಡಿಕೊಳ್ಳಬಾರದು. ಸಾಲದ ಸುಳಿಗೆ ಬೀಳಬಾರದು. ನಮ್ಮ ವ್ಯಕ್ತಿತ್ವದಿಂದ ನಾವು ಗೌರವವನ್ನು ಸಂಪಾದಿಸುವಂತಾಗಬೇಕು ಎಂದರು.
ಅಖಿಲ ಕರ್ನಾಟಕ ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ಹಂದನಹಳ್ಳಿ ಸೋಮಶೇಖರ್ ಮಾತನಾಡಿ, ನವ ಜೀವನ ಸದಸ್ಯರ ಮದ್ಯಪಾನ ಮುಕ್ತ ಜೀವನ ಇತರರಿಗೆ ಮಾದರಿಯಾಗಬೇಕು. ಸಾಮಾಜಿಕ ಕಳಕಳಿಯೊಂದಿಗೆ ಧರ್ಮಸ್ಥ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ರೂಪಿಸಿರುವ ಈ ಯೋಜನೆಯ ಸಫಲತೆ ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ಕಂಡಾಗ ಮಾತ್ರ ಸಾದ್ಯವೆಂದರು.
ಜನ ಜಾಗೃತಿ ವೇದಿಕೆ ಕೇಂದ್ರ ಕಚೇರಿ ಆಡಳಿತ ವಿಭಾಗದ ಯೋಜನಾಧಿಕಾರಿ ಮಾಧವ್ ಗೌಡ, ವೇದಿಕೆಯ ಮೈಸೂರು ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಮುಖೇಶ್, ಬಿಳಿಕೆರೆ ವಲಯದ ಮೇಲ್ವಿಚಾರಕಿ ಸೌಮ್ಯಾ, ಮೇಲ್ವಿಚಾರಕ ವಸಂತ್, ಸೇವಾಪ್ರತಿನಿಧಿಗಳು, ನವಜೀವನ ಸಮಿತಿ ಪೋಷಕರು, ವಿವಿಧ ಗ್ರಾಮಗಳಿಂದ ಸುಮಾರು 70 ಜನ ನವ ಜೀವನ ಸಮಿತಿ ಸದಸ್ಯರು ಭಾಗವಹಿಸಿದ್ದರು.