ಹುಣಸೂರು ಮಡಿಕೇರಿ ಹೆದ್ದಾರಿಯಲ್ಲಿ ಸ್ಥಾಪನೆಯಾಗಿರುವ ಅಕ್ಕ ಕೆಫೆಯನ್ನು ಶಾಸಕ ಜಿ.ಡಿ.ಹರೀಶ್‌ಗೌಡ ಸಾರ್ವಜನಿಕ ಸೇವೆಗೆ ಸಮರ್ಪಿಸಿದರು. ಪಿಡಿ ಭೀಮಪ್ಪ ಕೆ.ಲಾಳಿ, ಸವಿತಾ, ಇಒ ಕೆ.ಹೊಂಗಯ್ಯ ಇತರರಿದ್ದರು.
- ಶಾಸಕ ಜಿ.ಡಿ.ಹರೀಶ್‌ಗೌಡ ಅಭಿಪ್ರಾಯ
- ಒಲವಿನ ಊಟ ಹೋಟೆಲ್ ಉದ್ಘಾಟನೆ
ಹುಣಸೂರು: ಮಹಿಳೆಯರು ಯಶಸ್ವಿ ಉದ್ಯಮಿಗಳಾಗಲು ಪ್ರೇರೇಪಣೆ ನೀಡುವ ಗುರಿಯೊಂದಿಗೆ ಕೇಂದ್ರ ಸರ್ಕಾರದ ಆರ್ಥಿಕ ಅನುದಾನದಡಿ ಸ್ಥಾಪಿತವಾಗಿರುವ ಅಕ್ಕ ಕೆಫೆ ಯಶಸ್ವಿಯಾಗಲು ಸಂಜೀವಿನಿ ಒಕ್ಕೂಟದ ಸದಸ್ಯರು ಕಟಿಬದ್ಧರಾಗಿ ದುಡಿಯಬೇಕು ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಕರೆ ನೀಡಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಸಹಯೋಗದಲ್ಲಿ ನಗರದ ಹುಣಸೂರು-ಮಡಿಕೇರಿ ಮುಖ್ಯರಸ್ತೆಯ ಹಾಲಗೆರೆ ವೃತ್ತದ ಬಳಿ 15 ಲಕ್ಷ ರೂ.ಗಳ ವೆಚ್ಚದಡಿ ಸ್ಥಾಪಿಸಿರುವ ಅಕ್ಕ ಕೆಫೆ(ಒಲವಿನ ಊಟ)ಯನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸಂಸತ್ತಿನಲ್ಲಿ ಮಹಿಳಾ ಮೀಸಲು ವಿಧೇಯಕ ಮಂಡನೆಯಾಗಿದೆ. ದೇಶದಲ್ಲಿ ಮಹಿಳೆಯರಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ದೊರಕಬೇಕೆಂಬ 3 ದಶಕಗಳ ಕನಸನ್ನು ಪ್ರಧಾನಿ ನರೇಂದ್ರ ಮೋದಿ ಇದೀಗ ನನಸಾಗಿಸುತ್ತಿದ್ದಾರೆ. ಇಂದಿನ ದಿನಮಾನಗಳಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಪುರುಷರಿಗೆ ಸಮಾನರಾಗಿ ದುಡಿಯುತ್ತಿದ್ದು, ಮಹಿಳಾ ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹೊರಬರುತ್ತಿದ್ದಾರೆ. ಅಕ್ಕ ಕೆಫೆಯಂತಹ ಸರ್ಕಾರದ ಯೋಜನೆಗಳು ಗ್ರಾಮೀಣ ಮಟ್ಟದಲ್ಲಿ ಕೂಡ ಮಹಿಳೆಯರು ಆರ್ಥಿಕ ಸಬಲೀಕರಣದತ್ತ ಹೆಜ್ಜೆ ಇಡುವ ಪ್ರಕ್ರಿಯೆಯಾಗಿದೆ. ಹುಣಸೂರು-ಮಡಿಕೇರಿ ಹೆದ್ದಾರಿಯಲ್ಲೇ ಅಕ್ಕಕೆಫೆ ಸ್ಥಾಪನೆಯಾಗಿದ್ದು, ಕಡಿಮೆ ಬೆಲೆಯಲ್ಲಿ ಶುಚಿ, ರುಚಿಯಾದ ತಿಂಡಿತಿನಿಸುಗಳನ್ನು ಸಂಜೀವಿನಿ ಒಕ್ಕೂಟದ ಸದಸ್ಯರು ನೀಡುವತ್ತ ಗಮನಹರಿಸಬೇಕು. ಹೋಟೆಲ್ ಉದ್ಯಮ ನಡೆಸುವುದು ಸುಲಭದ ಮಾತಲ್ಲ. ತಾ.ಪಂ.ವತಿಯಿಂದ ಒಕ್ಕೂಟದ ಸದಸ್ಯರಿಗೆ ತರಬೇತಿ ನೀಡುವ ವ್ಯವಸ್ಥೆ ಕೈಗೊಳ್ಳಲಿ. ನನ್ನ ವೈಯಕ್ತಿಕ ಖರ್ಚಿನಲ್ಲಿ ಹೋಟೆಲ್ ಉದ್ಯಮ ನಡೆಸುವ ಕುರಿತಾದ ಸಾಫ್ಟ್‌ವೇರ್ ಸೇವೆ ಒದಗಿಸುತ್ತೇನೆ ಎಂದು ಭರವಸೆ ನೀಡಿದರು.
ಎನ್‌ಆರ್‌ಎಲ್‌ಎಂ ಸಂಜೀವಿನಿ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಮಂಜುಳಾ ನರಗುಂದ ಮಾತನಾಡಿ, ಮಹಿಳೆಯರ ಆರ್ಥಿಕ ಸಬಲತೆಗಾಗಿ ಸರ್ಕಾರ ಈ ಯೋಜನೆ ರೂಪಿಸಿದ್ದು, ಜಿಲ್ಲೆಯಲ್ಲಿ ಮೈಸೂರು ಜಿ.ಪಂ.ಆವರಣದಲ್ಲಿ ಒಂದು, ಮೈಸೂರು ತಾಲೂಕು, ಹುಣಸೂರು ತಾಲೂಕುಗಳಲ್ಲಿ ಒಂಂದೊಂದು(ಒಟ್ಟು 3 ಕಡೆಗಳಲ್ಲಿ) ಅಕ್ಕ ಕೆಫೆ ಸ್ಥಾಪಿಸಲು ಅನುಮತಿ ದೊರಕಿದೆ. ಕೆಫೆಯನ್ನು ನಿಲುವಾಗಿಲು ಗ್ರಾಮದ ಶ್ರೀ ಕಾಳಿಕಾಂಬ ಸ್ವಸಹಾಯ ಸಂಘದ ಸದಸ್ಯರು ನಿರ್ವಹಿಸಲಿದ್ದಾರೆ. ಹೋಟೆಲ್ ಉದ್ಯಮದ ಕುರಿತು ಈಗಾಗಲೆ ಅವರಿಗೆ ತರಬೇತಿ ನೀಡಲಾಗಿದೆ. ಕೈಗೆಟುಕುವ ದರದಲ್ಲಿ ಶುಚಿ, ರುಚಿಯಾದ ತಿಂಡಿ ನೀಡುವ ಮೂಲಕ ಆರ್ಥಿಕ ಸಬಲತೆ ಸಾಧಿಸುವಂತಾಗುವುದೇ ಯೋಜನೆಯ ಮೂಲ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮೈಸೂರು ಜಿ.ಪಂ.ಯೋಜನಾ ನಿರ್ದೇಶಕ(ಪ್ರಭಾರ ಭೀಮಪ್ಪ ಕೆ.ಲಾಳಿ, ಯೋಜನಾ ನಿರ್ದೇಶಕಿ-2 ಸವಿತಾ, ತಾ.ಪಂ.ಆಡಳಿತಾಧಿಕಾರಿ ಸಿದ್ದಗಂಗಮ್ಮ, ತಾ.ಪಂ.ಇಒ ಕೆ.ಹೊಂಗಯ್ಯ, ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟದ ಅಧ್ಯಕ್ಷೆ ಯಶೋಧಮ್ಮ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ರಾಘು ಕಲ್ಕುಣಿಕೆ, ಬೀಜಗನಹಳ್ಳಿ ಗ್ರಾ.ಪಂ.ಪಿಡಿಒ ಎಚ್.ಎಂ.ಮಹದೇವಸ್ವಾಮಿ, ಬಸವರಾಜು, ಜಗದೀಶ್ ಇತರ ಸಿಬ್ಬಂದಿ ಹಾಜರಿದ್ದರು.