ತಿ.ನರಸಿಪುರ ತಾಲೂಕಿನ ಯಡದೊರೆ ಗ್ರಾಮದ ಗ್ರಂಥಾಲಯದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಜಿ.ಎಸ್.ಮಲ್ಲೇಶ್, ಡಾ.ಬಿ.ಪ್ರದೀಪ್, ಎ.ಎಂ. ಹರಿಣಾಕ್ಷಿ, ಮಹೇಶ, ಶಿವಮಲ್ಲಯ್ಯ ಇತರರು ಇದ್ದರು. 
ಮೈಸೂರು

ಉನ್ನತ ಹುದ್ದೆ ಪಡೆಯುವ ಗುರಿ ಇರಲಿ

ಪ್ರಮುಖ ಮುಖ್ಯಾಂಶಗಳು

  • high position
ತಿ.ನರಸೀಪುರ: ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ತಾಲೂಕಿನ ಯಡದೊರೆ ಗ್ರಾಮದ ವಿದ್ಯಾರ್ಥಿಗಳ ಮುಂದಿನ ಶಿಕ್ಷಣಕ್ಕೆ ಉತ್ತೇಜನ ನೀಡಲು ನಿವೃತ್ತ ಉಪ ಪ್ರಾಂಶುಪಾಲ ಜಿ.ಎಸ್.ಮಲ್ಲೇಶ್ ಅವರು ಪ್ರತಿಭಾ ಪುರಸ್ಕಾರ ನೀಡಿದರು.
ಗ್ರಾಮದ ಗ್ರಂಥಾಲಯದಲ್ಲಿ ಮಂಗಳವಾರ ಸರಳವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಸೋನು, ವರ್ಷಿತಾ, ಅನುಷಾ, ದೀಕ್ಷಿತಾ, ಸ್ಮಿತಾ, ಅನನ್ಯ, ನಿಶ್ಚಿತಾ, ಕೀರ್ತನಾ, ರಾಜೇಶ್ ಸೇರಿದಂತೆ ಹತ್ತಾರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ಜತೆಗೆ ನಗದು ಒಂದು ಸಾವಿರ ರೂ. ಗಳ ಪ್ರೋತ್ಸಾಹ ಧನವನ್ನು ನೀಡಿದರು.
ಬಳಿಕ ಮಾತನಾಡಿದ ಜಿ.ಎಸ್.ಮಲ್ಲೇಶ್ ಅವರು, ಉನ್ನತ ವ್ಯಾಸಂಗಕ್ಕೆ ಹೆಚ್ಚು ಆದ್ಯತೆ ನೀಡಿ ಉನ್ನತ ಹುದ್ದೆಯನ್ನು ಪಡೆಯುವ ಗುರಿ ನಿಮ್ಮದಾಗಬೇಕು. ಪ್ರತಿ ವರ್ಷವೂ ನಮ್ಮ ಗ್ರಾಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತೇನೆ ಎಂದರು.
ಡಾ. ಬಿ.ಪ್ರದೀಪ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಎಸ್ಸಿ, ಎಸ್ಟಿ ಸಮುದಾಯದ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಉನ್ನತ ವ್ಯಾಸಂಗ ಮಾಡಲು ಸಹಾಯಧನವನ್ನು ನೀಡುತ್ತಿದ್ದಾರೆ. ಇಂತಹ ಸವಲತ್ತುಗಳನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕೆಂದು ತಿಳಿಸಿದರು.
ಗ್ರಾಮದ ಮುಖಂಡ ಮಹದೇವಪ್ಪ ಮಾತನಾಡಿ, ವಿದ್ಯಾರ್ಥಿಗಳ ಜೀವನ ಉತ್ತಮಗೊಳ್ಳಬೇಕಾದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ. ಹೀಗಾಗಿ ಓದಿನ ಕಡೆ ಹೆಚ್ಚು ಗಮನ ನೀಡಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಬೇಕು. ಪರಿಶ್ರಮ ಉತ್ತಮವಾಗಿ ಇದ್ದರೆ ಉನ್ನತ ಹುದ್ದೆಗಳು ದೊರೆಯುತ್ತವೆ. ಇದಕ್ಕೆ ನಮ್ಮ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರೇ ನಿದರ್ಶನ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎ.ಎಂ. ಹರಿಣಾಕ್ಷಿ, ಗ್ರಾಪಂ ಮಾಜಿ ಸದಸ್ಯ ಮಹೇಶ, ಗ್ರಂಥಪಾಲಕ ಶಿವಮಲ್ಲಯ್ಯ, ಕಾಳಯ್ಯ, ಕುಳ್ಳಯ್ಯ ಹಾಗೂ ವಿದ್ಯಾರ್ಥಿಗಳ ಪಾಲಕರು ಹಾಜರಿದ್ದರು.