ಜ್ಞಾನಬುತ್ತಿ ಉಚಿತ ತರಬೇತಿ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಿಸಿ ಮತ್ತು ಪಿಎಸ್‌ಐ ಸ್ಪರ್ಧಾತ್ಮಕ ಪರೀಕ್ಷಾ ಅಧ್ಯಯನ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಸಿದ್ದನಗೌಡ ವೈ.ಪಾಟೀಲ, ಎಸ್.ಎನ್.ಸಂದೇಶ್ ಕುಮಾರ್, ಜೆ.ಬಿ.ರಂಗಸ್ವಾಮಿ, ಪ್ರೊ.ಎಂ.ಕೃಷ್ಣೇಗೌಡ, ಬಿ.ಕೆ ಮನು, ರಾಜಶೇಖರ್, ಬಿ.ಎಸ್.ರವಿಶಂಕರ್ ಇದ್ದರು.
- ಡಿಸಿಪಿ ಸಿದ್ದನಗೌಡ ವೈ.ಪಾಟೀಲ ಸಲಹೆ
- ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವವರಿಗೆ ದೃಢ ನಿಶ್ಚಯ, ಸಮಯ ನಿರ್ವಹಣೆ ಅತ್ಯಗತ್ಯ.
ಮೈಸೂರು: ಯಾವುದೇ ಹುದ್ದೆ ಪಡೆಯಲು ಕಿಚ್ಚು ಬೇಕು. ಜ್ಞಾನದ ಹಸಿವಿದ್ದವರಿಗೆ ಕಿಚ್ಚು ಸಹಜವಾಗಿ ಬರುತ್ತದೆ. ಸಾಧನೆ ಎನ್ನುವುದು ಅಂತಿಮ ಗುರಿಯಲ್ಲ, ಅದು ನಿರಂತರ ಪಯಣ ಎಂದು ನಗರ ಪೊಲೀಸ್ ಮೀಸಲು ಪಡೆಯ ಡಿಸಿಪಿ ಸಿದ್ದನಗೌಡ ವೈ. ಪಾಟೀಲ ಹೇಳಿದರು.
ಲಕ್ಷ್ಮೀಪುರಂ ಸರ್ಕಾರಿ ಪ್ರೌಢಶಾಲೆ ಮತ್ತು ಪಿಯು ಕಾಲೇಜು ಆವರಣದಲ್ಲಿರುವ ಜ್ಞಾನಬುತ್ತಿ ಉಚಿತ ತರಬೇತಿ ಸಂಸ್ಥೆಯಲ್ಲಿ ಸೋಮವಾರ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದ ಸಮಾರೋಪದಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಮತ್ತು ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಸ್ಪರ್ಧಾತ್ಮಕ ಪರೀಕ್ಷಾ ಅಧ್ಯಯನ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
ಯುಪಿಎಸ್‌ಸಿ-ಕೆಪಿಎಸ್‌ಸಿ ಪರೀಕ್ಷೆಗಳಲ್ಲಿ ಯಶಸ್ವಿಯಾದವರ ಹಿನ್ನೆಲೆ ನೋಡಿದರೆ ಅವರು ಕೊರತೆಯಿಂದ ಬಳಲುತ್ತಿದ್ದವರು. ವಸ್ತುನಿಷ್ಠವಾಗಿ ಎಲ್ಲ ವಿಷಯ ಕಲಿಯಬೇಕು. ಇಂಟರ್‌ನೆಟ್‌ನಲ್ಲಿ ಎಲ್ಲ ಮಾಹಿತಿ ಸಿಗುತ್ತದೆಯಾದರೂ ತರಬೇತಿ ಸಂಸ್ಥೆಗಳು ಉನ್ನತ ಮಟ್ಟದ ಮಾರ್ಗದರ್ಶನ ನೀಡುತ್ತವೆ.
ಉನ್ನತ ಹುದ್ದೆ ಪಡೆಯುವ ಗುರಿ ಇಟ್ಟುಕೊಳ್ಳಿ. ಯಾವುದೇ ಹುದ್ದೆ ಅಲಂಕರಿಸಿದರೂ ಅದಕ್ಕೆ ಕಳಂಕ ಬಾರದಂತೆ ನಿರ್ವಹಿಸಿ. ಹುದ್ದೆಗೇರಿದ ಮೇಲೆ ಸಮಾಜಮುಖಿಯಾಗಿ ಕೆಲಸ ಮಾಡಿ. ಸಾಹಿತಿ, ಪೊಲೀಸ್, ಡಾಕ್ಟರ್ ಯಾವುದೇ ಆಗಿ ಮೊದಲು ಮಾನವೀಯತೆ ಇಟ್ಟುಕೊಳ್ಳಿ ಎಂದು ಅಭ್ಯರ್ಥಿಗಳಿಗೆ ಸಲಹೆ ನೀಡಿದರು.
ಕರ್ನಾಟಕ ಪೊಲೀಸ್ ಅಕಾಡೆಮಿ ಸಹಾಯಕ ನಿರ್ದೇಶಕ ಎಸ್.ಎನ್.ಸಂದೇಶ್ ಕುಮಾರ್ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವವರಿಗೆ ದೃಢ ನಿಶ್ಚಯ, ಸಮಯ ನಿರ್ವಹಣೆ ಅತ್ಯಗತ್ಯ. ಸವಾಲುಗಳು ಎದುರಾದಷ್ಟು ಮನುಷ್ಯ ಮತ್ತಷ್ಟು ಬಲಗೊಳ್ಳುತ್ತಾನೆ. ಕಷ್ಟಪಟ್ಟು ಸಾಧನೆ ಮಾಡಿದವರು ಇತರರಿಗಿಂತ ಮಾನಸಿಕವಾಗಿ ಗಟ್ಟಿತನ ಹೊಂದಿರುತ್ತಾರೆ.
ಕಷ್ಟ, ಹಣಕಾಸಿನ ತೊಂದರೆಯಿಂದಾಗಿ ಓದಲು ಏಕಾಗ್ರತೆ ಸಿಗುತ್ತಿಲ್ಲ ಎಂಬ ಮುಂತಾದ ಕಾರಣ ನೀಡಿ ಕಲಿಕೆಯಿಂದ ಹಲವರು ದೂರ ಸರಿಯುತ್ತಾರೆ. ಇಂತಹ ಸಮಸ್ಯೆಗಳನ್ನೆಲ್ಲ ಪಕ್ಕಕ್ಕಿಟ್ಟು ಓದಬೇಕು. ಸಮಸ್ಯೆ ಮೀರಿ ನಿಲ್ಲಲು ನಮಗೆ ಬೇಕಿರುವುದು ಉತ್ತೇಜನ ಎಂದು ಕಿವಿಮಾತು ಹೇಳಿದರು.
ಪರೀಕ್ಷೆಗಳು ಹಿಂದಿನಂತಿಲ್ಲ. ನಿರಂತರ ಅಭ್ಯಾಸ, ಸತತ ಕಠಿಣ ಪರಿಶ್ರಮ ಬೇಕು. ಶಾಲಾ ಹಂತದ ಎನ್‌ಸಿಇಆರ್‌ಟಿ ಪುಸ್ತಕ ಓದಿ, ತಳಹದಿ ಗಟ್ಟಿಯಾಗಿಸಿಕೊಳ್ಳಬೇಕು. ಸಮಯ ನಿರ್ವಹಣೆ, ಉತ್ತಮ ಆಹಾರ ಪದ್ಧತಿ, ವ್ಯಾಯಾಮ, ಪ್ರತಿದಿನ ದಿನಪತ್ರಿಕೆ ಓದುವುದು, ದೃಢ ನಿಶ್ಚಯ ಮತ್ತು ನೆಗೆಟಿವ್ ಯೋಚನೆ ಬಿಡುವುದು ಅಗತ್ಯ ಎಂದರು.
ನಿವೃತ್ತ ಪೊಲೀಸ್ ಉಪ ಅಧೀಕ್ಷಕ ಜೆ.ಬಿ.ರಂಗಸ್ವಾಮಿ ಮಾತನಾಡಿ, ಸರ್ಕಾರಿ ಕೆಲಸ ಪಡೆಯಲು ಯಾವುದೇ ಹಿನ್ನೆಲೆ ಬೇಕಾಗಿಲ್ಲ. ನಿಮ್ಮ ಪ್ರತಿಭೆಯೇ ನಿಮ್ಮ ಹಿನ್ನೆಲೆ ಎಂಬುದನ್ನು ಮನಸ್ಸಿನಲ್ಲಿಟ್ಟಿಕೊಳ್ಳಿ. ಸರ್ಕಾರಿ ಹುದ್ದೆಗಾಗಿ ಯುವಕರು ದೃಢ ನಿರ್ಧಾರದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಬೇಕು. ಆ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ. ಜ್ಞಾನ ಮತ್ತು ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದರು.
ಯಾವುದೇ ಒಂದು ವಿಷಯ ಕೈಗೆತ್ತಿಕೊಂಡಾಗ ಅದನ್ನು ಸಂಪೂರ್ಣವಾಗಿ ಮುಗಿಸುವ ದೃಢ ನಿಶ್ಚಯ ಇಟ್ಟುಕೊಳ್ಳಬೇಕು. ಪ್ರಾಮಾಣಿಕತೆ, ಕಠಿಣ ಪರಿಶ್ರಮ, ಸಮಾಜಮುಖಿ ದೃಷ್ಟಿಕೋನ ಉನ್ನತ ಮಟ್ಟಕ್ಕೆ ಕೊಂಡೊಯ್ಯಬಲ್ಲದು ಎಂದು ತಿಳಿಸಿದರು.
ಚಿಂತಕ ಪ್ರೊ.ಎಂ.ಕೃಷ್ಣೇಗೌಡ ಮಾತನಾಡಿ, ಪದವಿಯಲ್ಲಿರುವಾಗಲೇ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಆರಂಭಿಸಬೇಕು. ಪರೀಕ್ಷಾ ಮಾದರಿ ಅರ್ಥ ಮಾಡಿಕೊಂಡು ಬೇಗ ಅಧ್ಯಯನ ಶುರು ಮಾಡಿ. ಅದೇ ಯಶಸ್ಸಿಗೆ ಮುಖ್ಯ ಎಂದು ಹೇಳಿದರು.
ಅಬ್ದುಲ್ ನಜೀರ್‌ಸಾಬ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಂಸ್ಥೆಯ ಉಪ ನಿರ್ದೇಶಕ ಬಿ.ಕೆ ಮನು, ಎಸಿಪಿ ರಾಜಶೇಖರ್, ಲಕ್ಷ್ಮೀಪುರಂ ಠಾಣೆ ಇನ್‌ಸ್ಪೆಕ್ಟರ್ ಬಿ.ಎಸ್.ರವಿಶಂಕರ್, ಪ್ರೊ.ವಿ.ಜಯಪ್ರಕಾಶ್, ಯು.ಎಂ.ಶರದ್‌ರಾವ್, ಡಾ.ವಿ.ಕೃಷ್ಣಕುಮಾರ್, ಸಂಯೋಜಕ ಕೆ.ವೈ.ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಜೈನಹಳ್ಳಿ ಸತ್ಯನಾರಾಯಣಗೌಡ ಇದ್ದರು.