ಉದ್ಯೋಗ ಸಮಸ್ಯೆಗೆ ಶಾಶ್ವತ ಪರಿಹಾರ ಹಾಗೂ ಖಾಲಿ ಹುದ್ದೆಗಳ ಭರ್ತಿಗೆ ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಶನ್‌ನಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು. ಸುನೀಲ್, ಸಂಘಟನೆಯ ಪುಷ್ಪಾ, ಸುಮಾ ಇತರರು ಇದ್ದರು.
- ಎಲ್ಲ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಬೇಕು ಮತ್ತು ಹೊಸ ಉದ್ಯೋಗಗಳನ್ನು ಸೃಷ್ಟಿಸಬೇಕು
- ನೇಮಕಾತಿ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಇರಬೇಕು
ಮೈಸೂರು:ಉದ್ಯೋಗ ಸಮಸ್ಯೆಗೆ ಶಾಶ್ವತ ಪರಿಹಾರ ಹಾಗೂ ಖಾಲಿ ಹುದ್ದೆಗಳ ಭರ್ತಿಗೆ ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಶನ್ (ಎಐಒಡಿವೈಒ) ದಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ನಗರದ ದೇವರಾಜ ಮಾರುಕಟ್ಟೆ ಬಳಿಯ ಚಿಕ್ಕಗಡಿಯಾರ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಬೇಕು ಮತ್ತು ಹೊಸ ಉದ್ಯೋಗಗಳನ್ನು ಸೃಷ್ಟಿಸಬೇಕು, ಎಲ್ಲ ನೇಮಕಾತಿಗಳ ವಯೋಮಿತಿಯಲ್ಲಿ ಕನಿಷ್ಠ 5 ವರ್ಷಗಳ ಸಡಿಲಿಕೆ ನೀಡಬೇಕು, ನೇಮಕಾತಿ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಇರಬೇಕು, ಎಲ್ಲ ತೆರನಾದ ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿದರು.
ಕೆಪಿಎಸ್‌ಸಿಯಲ್ಲಿನ ಅಕ್ರಮ ತಡೆಗಟ್ಟಲು ರಾಜ್ಯ ಸರ್ಕಾರ ಕೋಟಾ ಸಮಿತಿ ಶಿಫಾರಸ್ಸುಗಳನ್ನು ಜಾರಿಗೊಳಿಸಬೇಕು. ಗುತ್ತಿಗೆ ವ್ಯವಸ್ಥೆಯನ್ನು ರದ್ದುಗೊಳಿಸಬೇಕು ಮತ್ತು ಎಲ್ಲ ಹುದ್ದೆಗಳಿಗೂ ಖಾಯಂ ನೇಮಕಾತಿ ಮಾಡಬೇಕು, ದೇಶಾದ್ಯಂತ ಗಿಗ್ ಕಾರ್ಮಿಕರಿಗೆ ಕಾರ್ಮಿಕರೆಂದು ಪರಿಗಣಿಸಿ ಮತ್ತು ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸಬೇಕು. ಉದ್ಯೋಗಾವಕಾಶ ದೊರೆಯುವವರೆಗೆ ಗೌರವಾನ್ವಿತ ಜೀವನ ನಡೆಸಲು ಸೂಕ್ತವಾದ ನಿರುದ್ಯೋಗ ಭತ್ಯೆ ನೀಡಬೇಕು. ಸರ್ಕಾರಿ ಸಂಸ್ಥೆಗಳ ಖಾಸಗೀಕರಣ ನೀತಿಯನ್ನು ರದ್ದುಗೊಳಿಸಬೇಕು, ನೇಮಕಾತಿಗಳಲ್ಲಿ ದುಬಾರಿ ಪರೀಕ್ಷಾ ಶುಲ್ಕ ಕೈಬಿಡಬೇಕು ಹಾಗೂ ಪರೀಕ್ಷಾರ್ಥಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಲಾಯಿತು.
ಸಮಿತಿ ಅಧ್ಯಕ್ಷ ಸುನೀಲ್, ಸಂಘಟನೆಯ ಪುಷ್ಪಾ, ಸುಮಾ ಇತರರು ಇದ್ದರು