ಚಾಮುಂಡಿಪುರಂನ ಬಾಲಬೋಧಿನಿ ಶಾಲೆ 
ಮೈಸೂರು

ಸರ್ಕಾರಿ ಶಾಲೆಗಳ ವಿಲೀನಕ್ಕೆ ಎಐಡಿಎಸ್‌ಒ ಖಂಡನೆ

ಪ್ರಮುಖ ಮುಖ್ಯಾಂಶಗಳು

  • ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಶಾಲೆ ಮುಚ್ಚುವ ಹುನ್ನಾರ
  • ಶ್ರೀ ಕೃಷ್ಣರಾಜ ಸರ್ಕಾರಿ ಶಾಲೆ, ಚಾಮುಂಡಿಪುರಂನ ಬಾಲ ಬೋಧಿನಿ ಶಾಲೆ ಹಾಗೂ ಜಯನಗರದ ಸರ್ಕಾರಿ ಶಾಲೆಗಳನ್ನು ವಿಲೀನ
ಮೈಸೂರು: ಗಾಡಿಚೌಕ ನಂಜುಮಳಿಗೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಕೆಪಿಎಸ್ ಮ್ಯಾಗ್ನೆಟ್ ಶಾಲೆಯನ್ನಾಗಿ ಮಾಡಲು ನಿರ್ಧರಿಸಿ, ಈ ಶಾಲೆಗೆ ಬಿಬಿ ಗಾರ್ಡನ್‌ನಲ್ಲಿರುವ ಶ್ರೀ ಕೃಷ್ಣರಾಜ ಸರ್ಕಾರಿ ಶಾಲೆ, ಚಾಮುಂಡಿಪುರಂನ ಬಾಲ ಬೋಧಿನಿ ಶಾಲೆ ಹಾಗೂ ಜಯನಗರದ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವುದನ್ನು ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ಖಂಡಿಸಿದೆ.
ಬಿಬಿ ಗಾರ್ಡನ್‌ನಲ್ಲಿರುವ ಶ್ರೀ ಕೃಷ್ಣರಾಜ ಸರ್ಕಾರಿ ಶಾಲೆಯನ್ನು ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ದೀನ ದಲಿತರ ಮಕ್ಕಳಿಗೆ ಆಧುನಿಕ ಶಿಕ್ಷಣ ನೀಡಲು 1918ರಲ್ಲಿ ಅಂದರೆ 108 ವರ್ಷಗಳ ಹಿಂದೆ ಭಕ್ಷಿ ಬಸಪ್ಪ ಅವರು, ದಾನ ಮಾಡಿದ ಜಾಗದಲ್ಲಿ ಸ್ಥಾಪಿಸಿದ್ದರು. ಪ್ರಸ್ತುತ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ ಎಂದು ಸಂಘಟನೆ ಜಿಲ್ಲಾ ಕಾರ್ಯದರ್ಶಿ ನಿತಿನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಈ ಶಾಲೆಯನ್ನು ಮುಚ್ಚಲು ಹೊರಟಿರುವುದು ಬಡ ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಉದಾತ್ತ ಆಶಯಕ್ಕೆ ಸರ್ಕಾರ ದ್ರೋಹ ಬಗೆದಂತಾಗುತ್ತದೆ. ಚಾಮುಂಡಿಪುರಂನಲ್ಲಿರುವ ಬಾಲ ಬೋಧಿನಿ ಶಾಲೆ 150 ವರ್ಷ ಪೂರೈಸಿದೆ. ಸಾವಿರಾರು ಮಕ್ಕಳು ಶಿಕ್ಷಣ ಪಡೆದುಕೊಂಡಿದ್ದಾರೆ. 
ಪ್ರಸ್ತುತ 25ರಿಂದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. 8 ಕಿ.ಮೀ. ದೂರದಲ್ಲಿರುವ ಮಾದಾಪುರದಿಂದ ಸಹ ಮಕ್ಕಳು ಇಲ್ಲಿಗೆ ಬಂದು ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ರೀತಿ ಶತಮಾನ ಪೂರೈಸಿರುವ ಐತಿಹಾಸಿಕ ಶಾಲೆಗಳು ಇಂದಿಗೂ ಮೂಲ ಸೌಕರ್ಯಗಳಿಲ್ಲದೆ, ಹೊಸದಾಗಿ ಬಣ್ಣ ಕಾಣದೆ, ಹೆಂಚುಗಳೂ ಬದಲಾಗದ ಸ್ಥಿತಿಯಲ್ಲಿವೆ. ಈ ಶಾಲೆಗಳಿಗೆ ಅಗತ್ಯ ಸೌಕರ್ಯ ಒದಗಿಸಿ, ಅಭಿವೃದ್ಧಿಪಡಿಸಿ, ಸಂರಕ್ಷಿಸಬೇಕಾದದ್ದು ಸರ್ಕಾರ ಹಾಗೂ ಶಿಕ್ಷಣ ಇಲಾಖೆಯ ಕರ್ತವ್ಯ. ಆದರೆ ಈ ಜವಾಬ್ದಾರಿಯಿಂದ ನುಣುಚಿಕೊಂಡು, ಶಾಲೆಗಳನ್ನೇ ವಿಲೀನದ ಹೆಸರಲ್ಲಿ ಮುಚ್ಚುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಈಗಾಗಲೇ ನಗರಗಳಲ್ಲಿ ಖಾಸಗಿ ಶಾಲೆಗಳ ಹಾವಳಿ ಹೆಚ್ಚಾಗಿದೆ. ಅತಿ ಬಡವರು, ಕಟ್ಟಡ ಕಾರ್ಮಿಕರು, ಗಾರ್ಮೆಂಟ್ಸ್ ಅಲ್ಲಿ ಕೆಲಸ ಮಾಡುವ ಕಾರ್ಮಿಕರು ಹಾಗೂ ಪೌರಕಾರ್ಮಿಕರ ಮಕ್ಕಳು ನಗರಗಳಲ್ಲಿ ಸರ್ಕಾರಿ ಶಾಲೆಯನ್ನು ನಂಬಿ ಬರುತ್ತಿದ್ದಾರೆ. ಈಗಲೂ ನಗರದಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ವ್ಯಾಸಂಗ ಮಾಡುತ್ತಿರುವುದು ವಾಸ್ತವ. 
ಒಂದು ವೇಳೆ ಈ ಶಾಲೆಗಳು ಮುಚ್ಚಿದರೆ ಬಡವರ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದು ಸತ್ಯ. ಹೀಗಾಗಿ ನೂರು ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟಿರುವ ಈ ಐತಿಹಾಸಿಕ  ಶಾಲೆಗಳನ್ನು ವಿಲೀನಗೊಳಿಸುವುದನ್ನು ಕೈ ಬಿಟ್ಟು, ಬಲಪಡಿಸಬೇಕು ಎಂದು ಆಗ್ರಹಿಸಿದ್ದಾರೆ.