ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೈದ್ಯರನ್ನು ಸನ್ಮಾನಿಸಲಾಯಿತು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಟಿ.ಎಸ್.ಶ್ರೀವತ್ಸ, ಡಾ.ಆರ್.ಬಾಲಸುಬ್ರಮಣ್ಯಂ, ಡಾ.ಸಿ.ಜೆ.ಬೆಟಸೂರ ಮಠ, ಡಾ.ಎಚ್.ಬಸವನಗೌಡಪ್ಪ, ಡಾ.ಬಿ.ಸುರೇಶ್, ಡಾ.ಸಿ.ಪಿ.ಮಧು, ಡಾ.ವಿಕ್ರಮ್ ಪಾಟೀಲ್ ಇತರರು ಇದ್ದರು. 
ಮೈಸೂರು

ಎಐನಿಂದ ಎಲ್ಲ ಕ್ಷೇತ್ರಗಳಲ್ಲೂ ಕ್ರಾಂತಿಕಾರಕ ಬದಲಾವಣೆ: ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ

ಪ್ರಮುಖ ಮುಖ್ಯಾಂಶಗಳು

  • ಮುಂದಿನ ದಿನಗಳಲ್ಲಿ ಆರೋಗ್ಯ ಸೇವೆಯಲ್ಲಿ ಎಐ ಮಹತ್ತರ ಬದಲಾವಣೆಗಳನ್ನು ತರಲಿದೆ
ಮೈಸೂರು:ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ಕ್ರಾಂತಿಕಾರಕ ಬದಲಾವಣೆ ತರುತ್ತಿದ್ದು, ಇದರ ಬಗ್ಗೆ ತರಬೇತಿ ಪಡೆಯುವ ಅಗತ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಜೆಎಸ್‌ಎಸ್ ಆಸ್ಪತ್ರೆಯ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜೆಎಸ್‌ಎಸ್ ಎಎಚ್‌ಇಆರ್‌ನಿಂದ ಪ್ರಾರಂಭಿಸಲಾದ ಇಡಿಜಿಇ, ಜಿಐಎಫ್‌ಟಿ ಹಾಗೂ ಎಐ ಇನ್ ಹೆಲ್ತ್ ಕೇರ್ ಕೋರ್ಸ್‌ಗಳ ಚಾಲನೆ ಹಾಗೂ ವಿಶ್ವ ವೈದ್ಯರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದಾಗಿ ಎಲ್ಲ ಕ್ಷೇತ್ರದಲ್ಲೂ ಕ್ರಾಂತಿಕಾರಕ ಬದಲಾವಣೆ ಆಗುತ್ತಿದ್ದು, ಇದಕ್ಕೆ ವೈದ್ಯಕೀಯ ಕ್ಷೇತ್ರವೂ ಹೊರತಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಆರೋಗ್ಯ ಸೇವೆಯಲ್ಲಿ ಎಐ ಮಹತ್ತರ ಬದಲಾವಣೆಗಳನ್ನು ತರಲಿದೆ. ಆದ್ದರಿಂದ ವೈದ್ಯರು, ದಾದಿಯರು ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ಸೂಕ್ತ ತರಬೇತಿ ಪಡೆದುಕೊಳ್ಳುವುದು ಅವಶ್ಯವಾಗಿದೆ ಎಂದರು.
ಜೆಎಸ್‌ಎಸ್ ಸಂಸ್ಥೆಯು ಎಐ ಇನ್ ಇಂಡಿಯನ್ ಹೆಲ್ತ್ ಕೇರ್ ಎಂಬ ಪ್ರಮಾಣಪತ್ರ ಕೋರ್ಸ್‌ಅನ್ನು ಆರಂಭಿಸಿರುವುದು ಅತ್ಯಂತ ಶ್ಲಾಘನೀಯ. ಇಂತಹ ಕೋರ್ಸ್ ಬಗ್ಗೆ ನಾನು ಇದುವರೆಗೆ ಎಲ್ಲಿಯೂ ಕೇಳಿರಲಿಲ್ಲ. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿಯೂ ಈ ರೀತಿಯ ಕೋರ್ಸ್ ಆರಂಭಿಸುವ ಅಗತ್ಯವಿದೆ ಎಂದರು.
ಪ್ರಸ್ತುತ ಕಾಲಘಟ್ಟದಲ್ಲಿ ಕಾಲಕ್ಕೆ ತಕ್ಕಂತೆ ಬದಲಾವಣೆ ಅಳವಡಿಸಿಕೊಳ್ಳುವ ಸಂಸ್ಥೆಗಳು ಮಾತ್ರ ಯಶಸ್ವಿಯಾಗಿ ಮುನ್ನಡೆಯುತ್ತವೆ. ಈ ನಿಟ್ಟಿನಲ್ಲಿ ಜೆಎಸ್‌ಎಸ್ ಸಂಸ್ಥೆಯೂ ಹೊಸ-ಹೊಸ ಬದಲಾವಣೆಗಳನ್ನು ಅಳವಡಿಸಿಕೊಳ್ಳುತ್ತಿದ್ದು, ನೂತನ ತಂತ್ರಜ್ಞಾನದ ಜತೆ ಹೆಜ್ಜೆ ಹಾಕುತ್ತಿದೆ ಎಂದು ಹೇಳಿದರು.
ದೇಶದ ಜನ ಆರೋಗ್ಯವಂತರಾಗಿದ್ದರೆ ಸಮಾಜ ಅಭಿವೃದ್ಧಿ ಹೊಂದುತ್ತದೆ. ಆರೋಗ್ಯ ಕಾಪಾಡುವ ವೈದ್ಯರ ಸೇವೆಯನ್ನು ಎಷ್ಟೇ ಪ್ರಶಂಸಿಸಿದರೂ ಅದು ಕಡಿಮೆಯೇ. ನಾನು ಸಹ ವೈದ್ಯನಾಗಿರುವುದರಿಂದ ವೈದ್ಯರು, ಆರೋಗ್ಯ ಸಿಬ್ಬಂದಿ ಎಷ್ಟು ಶ್ರಮಪಟ್ಟು ಸಮಾಜದ ಆರೋಗ್ಯ ಕಾಪಾಡುತ್ತಾರೆ. ಅವರು ಎದುರಿಸುವ ಸವಾಲುಗಳು ಎನೇನು ಎನ್ನುವುದನ್ನು ಚೆನ್ನಾಗಿ ತಿಳಿದುಕೊಂಡಿರುವೆ ಎಂದು ಹೇಳಿದರು.
ನೀತಿ ಆಯೋಗದ ಸದಸ್ಯ ಡಾ.ಆರ್.ಬಾಲಸುಬ್ರಮಣ್ಯಂ ಮಾತನಾಡಿ, ಕೃತಕ ಬುದ್ಧಿಮತ್ತೆಯು ಅನೇಕ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರಲಿದೆ. ಈ ಬದಲಾವಣೆಗಳನ್ನು ನಾವು ಸಮಸ್ಯೆಯಾಗಿ ನೋಡುವುದಕ್ಕಿಂತ ಅವಕಾಶವಾಗಿ ಹೇಗೆ ಪರಿವರ್ತಿಸಬೇಕು ಎಂಬುದೇ ಮುಖ್ಯವಾಗಿದೆ ಎಂದರು.
ಎಐನಿಂದಾಗಿ ಲಕ್ಷಾಂತರ ಜನರು ತಮ್ಮ ಉದ್ಯೋಗಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಅವರಿಗೆ ಹೊಸ ಕೌಶಲಗಳನ್ನು ಕಲಿಸಿ, ಮುಂದಿನ ಹಂತದ ಉದ್ಯೋಗಗಳಿಗೆ ಸಿದ್ಧಗೊಳಿಸುವುದು ಸವಾಲಿನ ಕೆಲಸ ಎಂದು ಹೇಳಿದರು.
ಇದೇ ವೇಳೆ ವೈದ್ಯರ ದಿನಾಚರಣೆ ಅಂಗವಾಗಿ ವಿವಿಧ ವೈದ್ಯರನ್ನು ಸನ್ಮಾನಿಸಲಾಯಿತು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಟಿ.ಎಸ್.ಶ್ರೀವತ್ಸ ಅಧ್ಯಕ್ಷತೆ ವಹಿಸಿದ್ದರು. ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜೆ.ಬೆಟಸೂರ ಮಠ, ಜೆಎಸ್‌ಎಸ್-ಎಎಚ್‌ಇಆರ್‌ನ ಕುಲಪತಿ ಡಾ.ಎಚ್.ಬಸವನಗೌಡಪ್ಪ, ಸಮಕುಲಾಧಿಪತಿ ಡಾ.ಬಿ.ಸುರೇಶ್, ಜೆಎಸ್‌ಎಸ್ ಆಸ್ಪತ್ರೆ ನಿರ್ದೇಶಕ ಡಾ.ಸಿ.ಪಿ.ಮಧು, ಜೆಎಸ್‌ಎಸ್ ಮೆಡಿಕಲ್ ಕಾಲೇಜು ಉಪ ಪ್ರಾಂಶುಪಾಲ ಡಾ.ವಿಕ್ರಮ್ ಪಾಟೀಲ್ ಇತರರು ಇದ್ದರು.