ಸಿಪಿಐ(ಎಂಎಲ್) ರೆಡ್‌ಸ್ಟಾರ್‌ನಿಂದ ನಗರದಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ 12ನೇ ರಾಜ್ಯ ಸಮ್ಮೇಳನದಲ್ಲಿ ಪಿ.ಜೆ.ಜೇಮ್ಸ್ ಮಾತನಾಡಿದರು. ಕಂದೇಗಾಲ ಶ್ರೀನಿವಾಸ್, ಎಂ.ಗಂಗಾಧರ್, ಎಸ್.ಆರ್.ಮಂಜುನಾಥ್, ಕೆ.ಕೆ.ಕೃಷ್ಣಪ್ಪ, ಡಿ.ಕೆ.ಲಿಂಗಸೂರು, ಸಂದೀಪ್, ಚಿಕ್ಕಮಗಳೂರಿನ ಭಾಗ್ಯಾ ಇತರರು ಇದ್ದರು.
- ಎಐ, ವಿಜ್ಞಾನ, ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಆದರೆ ದುಡಿಯುವ ವರ್ಗಕ್ಕೆ ಈ ಆವಿಷ್ಕಾರಗಳಿಂದ ಯಾವುದೇ ಲಾಭವಾಗುತ್ತಿಲ್ಲ
- ಬದಲಾಗಿ ಬಂಡವಾಳ ಶಾಯಿಗಳ ಜೇಬು ತುಂಬಿಸುತ್ತಿದ್ದು ಇದು ಶೋಷಿತರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ
ಮೈಸೂರು:ಕೃತಕ ಬುದ್ಧಿಮತ್ತೆ (ಎಐ), ವಿಜ್ಞಾನ, ತಂತ್ರಜ್ಞಾನಗಳಿಂದ ದುಡಿಯುವ ವರ್ಗಕ್ಕೆ ಯಾವುದೇ ಉಪಯೋಗವಿಲ್ಲದಂತಾಗಿದೆ ಎಂದು ಸಿಪಿಐ (ಎಂಎಲ್) ರೆಡ್‌ಸ್ಟಾರ್ ಕೇಂದ್ರ ಪ್ರಧಾನ ಕಾರ್ಯದರ್ಶಿ ಪಿ.ಜೆ.ಜೇಮ್ಸ್ ಅಭಿಪ್ರಾಯಪಟ್ಟರು.
ಸಿಪಿಐ(ಎಂಎಲ್) ರೆಡ್‌ಸ್ಟಾರ್‌ನಿಂದ ನಗರದ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್‌ನಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ 12ನೇ ರಾಜ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದು ಎಐ, ವಿಜ್ಞಾನ, ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಆದರೆ ದುಡಿಯುವ ವರ್ಗಕ್ಕೆ ಈ ಆವಿಷ್ಕಾರಗಳಿಂದ ಯಾವುದೇ ಲಾಭವಾಗುತ್ತಿಲ್ಲ. ಬದಲಾಗಿ ಬಂಡವಾಳ ಶಾಯಿಗಳ ಜೇಬು ತುಂಬಿಸುತ್ತಿದೆ. ಇದು ಶೋಷಿತರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ ಎಂದರು.
ದೇಶದ ಆಡಳಿತ ವ್ಯವಸ್ಥೆಯನ್ನು ಬಿಜೆಪಿ ಹಾಗೂ ಅದರ ಅಂಗ ಪಕ್ಷಗಳ ಮೂಲಕ ಆರ್‌ಎಸ್‌ಎಸ್ ನಿಯಂತ್ರಿಸುತ್ತಿದೆ. ಎಲ್ಲ ರಂಗಗಳನ್ನು ತಮ್ಮ ಹಿಡಿತ ಸಾಧಿಸಿದ್ದು, ಆರ್‌ಎಸ್‌ಎಸ್ ಮುಖ್ಯಸ್ಥರಾದ ಮೋಹನ್ ಭಾಗವತ್ ಅವರು ಆಹ್ವಾನಿಸುವ ಸಭೆಗೆ ವಿಶ್ವವಿದ್ಯಾಲಯಗಳ ಕುಲಪತಿಗಳು ಹೋಗುವ ಮಟ್ಟಕ್ಕೆ ವ್ಯವಸ್ಥೆ ಬಂದು ನಿಂತಿದೆ ಎಂದು ದೂರಿದರು.
ಅಮೆರಿಕ ಕೂಡಾ ಎಲ್ಲವೂ ತನ್ನ ಹಿಡಿತದಲ್ಲಿಯೇ ಇರಬೇಕು ಎನ್ನುವ ದುರಾಶೆಯಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಯುದ್ಧ ಸಾರುತ್ತಿದೆ. ಇದರಿಂದ ವಿಶ್ವದಲ್ಲಿ ಅಶಾಂತಿ ಉಂಟು ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜನರನ್ನು ಎಚ್ಚರಿಸಬೇಕಾದ ಕಮ್ಯುನಿಸ್ಟ್ ನಾಯಕರಲ್ಲಿ ಸಾಮರಸ್ಯದ ಕೊರತೆ ಎದ್ದು ಕಾಣುತ್ತಿದೆ. ಅವರಲ್ಲಿರುವ ಭಿನ್ನಾಭಿಪ್ರಾಯಗಳಿಂದಾಗಿ ಪಕ್ಷ ಹಲವು ವಿಭಾಗಗಳಾಗಿ ಹೋಗಿವೆ. ನಾಯಕರು ಒಗ್ಗಟ್ಟಿನಿಂದ ಯುವ ಜನಾಂಗಕ್ಕೆ ಸೂಕ್ತ ಮಾರ್ಗದರ್ಶನ ನೀಡುವ ಕೆಲಸ ಅಗಬೇಕು ಎಂದು ಹೇಳಿದರು.
ನಮ್ಮ ದೇಶದಲ್ಲಿ ತಳ ಸಮುದಾಯ ಯಾವ ತೊಂದರೆ ಅನುಭವಿಸುತ್ತಿದೆ ಎನ್ನುವ ಕಡೆಗೆ ಗಮನ ನೀಡಿದೆ. ವಿದೇಶದ ತತ್ವವನ್ನು ಅನುಸರಿಸುತ್ತಿರುವುದು ಕಮ್ಯುನಿಸ್ಟ್ ಪಕ್ಷಗಳ ಹಿನ್ನಡೆಗೆ ಕಾರಣವಾಗಿದೆ. ಈ ಎಲ್ಲದರ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳುವ ಕಾಲ ಬಂದಿದ್ದು, ಸೆಪ್ಟೆಂಬರ್‌ನಲ್ಲಿ ರಾಯಚೂರಿನಲ್ಲಿ 13ನೇ ಮಹಾ ಅಧಿವೇಶನ ಆಯೋಜಿಸಲಾಗಿದೆ. ಅಲ್ಲಿ ಸವಿವರವಾಗಿ ಚರ್ಚೆಗಳು ನಡೆಯಲಿದೆ ಎಂದರು.
ಮುಖಂಡ ಲಕ್ಷ್ಮೀನಾರಾಯಣ ಮಾತನಾಡಿ, ದೇಶದ ಇಂದಿನ ಪರಿಸ್ಥಿತಿಯಲ್ಲಿ ಅಧಿಕಾರ ಇಲ್ಲದೆ ಬದಲಾವಣೆ ತರಲು ಸಾಧ್ಯವಿಲ್ಲ ಎನ್ನುವುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಆದ್ದರಿಂದ ವಿಘಟನೆ ಅಗಿರುವ ಸಂಘಟನೆಗಳು ಒಗ್ಗೂಡಿ ದೇಶದ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಪಾಲಿಟ್ ಬ್ಯೂರೋ ಸದಸ್ಯ ಆರ್.ಮಾನಸಯ್ಯ, ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ, ರಾಜ್ಯ ಸಮಿತಿ ಸದಸ್ಯರಾದ ಕಂದೇಗಾಲ ಶ್ರೀನಿವಾಸ್, ಎಂ.ಗಂಗಾಧರ್, ಎಸ್.ಆರ್.ಮಂಜುನಾಥ್, ಕೆ.ಕೆ.ಕೃಷ್ಣಪ್ಪ, ಡಿ.ಕೆ.ಲಿಂಗಸೂರು, ಸಂದೀಪ್, ಚಿಕ್ಕಮಗಳೂರಿನ ಭಾಗ್ಯಾ ಇತರರು ಇದ್ದರು.