ಕೃತಕಬುದ್ಧಿಮತ್ತೆ(ಎಐ) ತಂತ್ರಜ್ಞಾನ 
ಮೈಸೂರು

ಶಾಲಾ ಮಕ್ಕಳಿಗೆ ಎಐ ಕಲಿಕೆ

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ಮೊದಲ ಹಂತವಾಗಿ ಜಿಲ್ಲೆಯ 73 ಸರ್ಕಾರಿ ಶಾಲೆಯಲ್ಲಿ ಜಾರಿ
  • 9ನೇ ತರಗತಿ ವಿದ್ಯಾರ್ಥಿಗಳಿಗೆ ಬೋಧನೆ
  • ಅತಿಥಿ ಶಿಕ್ಷಕರ ನೇಮಕ

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ಸರ್ವಾಂತರ್ಯಾಮಿ ಆಗಿರುವ ಕೃತಕಬುದ್ಧಿಮತ್ತೆ(ಎಐ) ತಂತ್ರಜ್ಞಾನದ ಕುರಿತು ಸರ್ಕಾರಿ ಶಾಲಾ ಮಕ್ಕಳಿಗೂ ಕಲಿಸಲಾಗುತ್ತಿದ್ದು, ಎಐ ಜಮಾನಕ್ಕೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಾಗುತ್ತಿದೆ...!
ಪ್ರಸ್ತಕ ಸಾಲಿನಿಂದಲೇ ಮೊದಲ ಹಂತವಾಗಿ ಜಿಲ್ಲೆಯ 73 ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ಮಕ್ಕಳಿಗೆ ಎಐ ವಿಷಯವನ್ನು ಪರಿಚಯಿಸಲಾಗಿದೆ. ಕರ್ನಾಟಕ ಪಬ್ಲಿಕ್ ಶಾಲೆ, ಪಿಎಂಶ್ರೀ ಶಾಲೆಯಲ್ಲಿ ಇದನ್ನು ಜಾರಿಗೆ ತರಲಾಗಿದ್ದು, ಮಕ್ಕಳಿಗೆ ಎಐ ಶಿಕ್ಷಣ ವಿಷಯ ಬೋಧಿಸಲು ಶಿಕ್ಷಣ ಇಲಾಖೆ ಸಿದ್ಧವಾಗಿದೆ.
ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ ಶೈಕ್ಷಣಿಕ ಜ್ಞಾನದೊಂದಿಗೆ ಭವಿಷ್ಯದ ಶಿಕ್ಷಣ, ಉದ್ಯೋಗ ಮತ್ತು ತಂತ್ರಜ್ಞಾನ ಕ್ಷೇತ್ರಗಳಿಗೆ ಅಗತ್ಯ ಇರುವ ಡಿಜಿಟಲ್ ಸಾಕ್ಷರತೆ, ತಾರ್ಕಿಕ ಚಿಂತನೆ, ಸಮಸ್ಯೆ ಪರಿಹಾರ, ಸೃಜನಶೀಲತೆ, ಕೋಡಿಂಗ್, ಗಣಕಯುಕ್ತ ಚಿಂತನೆ, ಕೌಶಲಾಧಾರಿತ ಸಾಮರ್ಥ್ಯವನ್ನು ಬೆಳೆಸುವ ಉದ್ದೇಶ ಹೊಂದಿದ್ದು, ಇದರ ಭಾಗವಾಗಿ ಎಐ ಕೌಶಲಾಧಾರಿತ ವಿಷಯಗಳನ್ನು ಅನುಷ್ಠಾನಕ್ಕೆ ತರಲಾಗಿದೆ.
ಕೇಂದ್ರ ಶಿಕ್ಷಣ ಮಂತ್ರಾಲಯದ ಯೋಜನಾ ಅನುಮೋದನಾ ಮಂಡಳಿಯ ಅನುಮೋದನೆಯಂತೆ ಆಯ್ದ ಸರ್ಕಾರಿ ಶಾಲೆಯಲ್ಲಿ ತೃತೀಯ ಭಾಷೆಗೆ ಬದಲಾಗಿ ರಾಷ್ಟ್ರೀಯ ಕೌಶಲ ಅರ್ಹತಾ ಚೌಕಟ್ಟು(ಎನ್‌ಎಸ್‌ಕ್ಯೂಎಫ್) ಆಧಾರಿತ ವೃತ್ತಿ ಶಿಕ್ಷಣವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಕಾರ್ಯಕ್ರಮದಡಿ ಎಐ ಕೌಶಲವನ್ನು ಮಕ್ಕಳಿಗೆ ಹೇಳಿಕೊಡಲಾಗುತ್ತದೆ. 
21ನೇ ಶತಮಾನದ ಕೌಶಲಗಳು, ತಾಂತ್ರಿಕ ಜ್ಞಾನ, ಉದ್ಯೋಗಾರ್ಹತೆಯನ್ನು ಅಭಿವೃದ್ಧಿ ಪಡಿಸಲು ಎಐ ಕಲಿಕೆಯನ್ನು ಶಾಲಾ ಶಿಕ್ಷಣದೊಂದಿಗೆ ಸಂಯೋಜಿಸಲಾಗಿದೆ. ಎಐ ವಿಷಯ ಬೋಧನೆಗಾಗಿ ಪ್ರತಿ ಶಾಲೆಗೆ ಒಬ್ಬ ಕೃತಕ ಬುದ್ಧಿಮತ್ತೆ(ಎಐ) ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಶೇ.50ರಷ್ಟು ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದೆ. ಬಾಕಿ ಉಳಿದಿರುವ ನೇಮಕಾತಿ ಈ ತಿಂಗಳ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ.
ಈ ಹುದ್ದೆ 11 ತಿಂಗಳ ಅವಧಿಯದ್ದಾಗಿರುತ್ತದೆ. ಇವರಿಗೆ ಪ್ರತಿ ತಿಂಗಳು 20 ಸಾವಿರ ರೂ. ಗೌರವಧನ ದೊರೆಯಲಿದ್ದು,  ಶಾಲಾ ಎಸ್‌ಡಿಎಂಸಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ರಚಿಸಿ ಸಾರ್ವಜನಿಕವಾಗಿ ಅರ್ಜಿ ಆಹ್ವಾನಿಸಲಾಗಿತ್ತು. ಸರ್ಕಾರ ನಿಗದಿಪಡಿಸಿರುವ ವಿದ್ಯಾರ್ಹತೆಯಾಗಿರುವ ಕಂಪ್ಯೂಟರ್ ಸೈನ್ಸ್ ಅಥವಾ ಇನ್ಫರ್ಮೇಷನ್ ಟೆಕ್ನಾಲಜಿಯಲ್ಲಿ ಡಿಪ್ಲೊಮಾ, ಪದವಿ (ಬಿಸಿಎ, ಬಿಎಸ್ಸಿ, ಸಿ.ಎಸ್, ಬಿಎಸ್ಸಿ, ಐಟಿ) ಪಡೆದಿರುವ ಪದವೀಧರರು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. 
ಮಾನದಂಡಗಳನ್ವಯ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಈ ಪಟ್ಟಿಯನ್ನು ಎಸ್‌ಡಿಎಂಸಿ ಸಭೆಯಲ್ಲಿ ಅನುಮೋದಿಸಿ, ಸಂಬಂಧಿತ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸಲ್ಲಿಸಿದ ನಂತರ ನೇಮಕಾತಿಯನ್ನು ಅಂತಿಮಗೊಳಿಸಲಾಗಿದೆ. ಎಐ ಮತ್ತು ಕೌಶಲ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಲುವಾಗಿ ಈ ಅತಿಥಿ ಶಿಕ್ಷಕರಿಗೆ ಅಗತ್ಯ ತರಬೇತಿ ಸಹ ನೀಡಲಾಗಿದೆ.

ಎಲ್ಲ ಸರ್ಕಾರಿ ಶಾಲೆಗಳಿಗೂ ವಿಸ್ತರಣೆ:

ಈಚೆಗೆ ಎಲ್ಲ ಕ್ಷೇತ್ರಗಳಿಗೂ ಎಐ ಕಾಲಿಟ್ಟಿದ್ದು, ತಂತ್ರಜ್ಞಾನ ಅತಿವೇಗವಾಗಿ ಬೆಳೆಯುತ್ತಿದೆ. ಶಿಕ್ಷಣ ಕ್ಷೇತ್ರದಲ್ಲೂ ಕ್ರಾಂತಿಕಾರಕ ಪರಿವರ್ತನೆಗೆ ಮುನ್ನಡಿ ಬರೆದಿರುವ ಎಐ ತಂತ್ರಜ್ಞಾನವನ್ನು ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಪರಿಚಯಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. 
ಖಾಸಗಿ ಶಾಲಾ ಮಕ್ಕಳಂತೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಎಐ ತಂತ್ರಜ್ಞಾನ ಶಿಕ್ಷಣ ಪಡೆಯಬಹುದಾಗಿದೆ. ಪ್ರಾಯೋಗಿಕವಾಗಿ ಆರಂಭವಾಗಿರುವ ಎಐ ಕಲಿಕೆ ಮುಂದಿನ ದಿನಗಳಲ್ಲಿ ಎಲ್ಲ ಸರ್ಕಾರಿ ಶಾಲೆಗಳಿಗೂ ವಿಸ್ತರಣೆಯಾಗಲಿದೆ.

ಹಿಂದಿ ಭಾಷೆಯ ಬದಲಿಗೆ ಎಐ

ತೃತೀಯ ಭಾಷಾ(ಹಿಂದಿ) ಬದಲಿಗೆ ಎಐ ಶಿಕ್ಷಣವನ್ನು ಕಲಿಸಲಾಗುತ್ತಿದೆ. ಈಗಾಗಲೇ ಶಾಲೆಯಲ್ಲಿ ತೃತೀಯ ಭಾಷಾ ಶಿಕ್ಷಕರು ಇದ್ದು, ವಿದ್ಯಾರ್ಥಿಗಳ ಸಂಖ್ಯೆ ತೀರಾ ಕಡಿಮೆ ಇದ್ದಲ್ಲಿ ಅವರನ್ನು ತೃತೀಯ ಭಾಷಾ ಶಿಕ್ಷಕರು ಇಲ್ಲದ ವಿದ್ಯಾರ್ಥಿಗಳು ಹೆಚ್ಚಾಗಿ ಇರುವ ಕಡೆಗೆ ನಿಯೋಜನೆ ಮಾಡಲಾಗುತ್ತಿದೆ.

ವೃತ್ತಿ ಶಿಕ್ಷಣ ಕೈಬಿಟ್ಟು ಎಐ ಕಲಿಕೆ

ಎನ್‌ಎಸ್‌ಕ್ಯೂಎಫ್ ಆಧಾರಿತ ವೃತ್ತಿ ಶಿಕ್ಷಣ ಬದಲಿಗೆ ಎಐ ಕೌಶಲ ಕಲಿಸಲಾಗುತ್ತಿದೆ. ಸರ್ಕಾರ ಹಿಂದೆ ಪ್ರೌಢಶಿಕ್ಷಣದ ಹಂತದಲ್ಲಿ ವೃತ್ತಿ ಶಿಕ್ಷಣದ ಭಾಗವಾಗಿ ಕೌಶಲ ಶಿಕ್ಷಣ ನೀಡಲು ಮುಂದಾಗಿತ್ತು. ಆಯ್ದ ಕೆಲ ಶಾಲೆಗಳಲ್ಲಿ ಕಲಿಕೆಗೂ ಅವಕಾಶವಿತ್ತು. 
ವಿಶೇಷವಾಗಿ ಬ್ಯೂಟಿ ಆ್ಯಂಡ್ ವೆಲ್‌ನೆಸ್, ರಿಟೇಲ್ ಹಾಗೂ ಅಪರೆಲ್ಸ್, ರಿಟೇಲ್ ಕೋರ್ಸ್ ಆರಂಭಿಸಲು ಸಿದ್ಧತೆ ನಡೆದಿತ್ತು. ಆದರೆ, ಎಐ ಕಲಿಕೆಯ ಮಹತ್ವವನ್ನು ಮನಗಂಡ ಸರ್ಕಾರ ಪ್ರೌಢಶಾಲಾ ಹಂತದಿಂದಲೇ ಮಕ್ಕಳನ್ನು ಜಾಗತಿಕ ಸ್ಪರ್ಧೆಗೆ ಅಣಿಗೊಳಿಸಲಾಗುತ್ತಿದೆ. ಎಐ ಪ್ರಯೋಗಾಲಯ ಸ್ಥಾಪನೆ, ಮೂಲಸೌಕರ್ಯ, ಪಠ್ಯಕ್ರಮ, ಬೋಧನಾ ಮಾರ್ಗಸೂಚಿಗಳ ಕುರಿತು ಸರ್ಕಾರವೇ ನಿಗದಿಪಡಿಸಿದೆ.

ಏನು ಪ್ರಯೋಜನ?

ಎಐ ಕಲಿಯುವುದರಿಂದ ಮಕ್ಕಳಿಗೆ ಹಲವಾರು ಪ್ರಮುಖ ಪ್ರಯೋಜನಗಳು ದೊರೆಯಲಿದೆ. ಹೊಸ ಉದ್ಯೋಗಗಳು, ತಾಂತ್ರಿಕ ನೈಪುಣ್ಯ, ಸ್ಪರ್ಧಾತ್ಮಕ ಶಕ್ತಿ, ಸಮಸ್ಯೆ ಪರಿಹಾರ, ಡೇಟಾ ವಿಶ್ಲೇಷಣೆ ಮಾಡುವ ಕೌಶಲ ಬೆಳವಣಿಗೆ, ಹೊಸ ಆವಿಷ್ಕಾರ ಮಾಡಲು ಮಕ್ಕಳಿಗೆ ಪ್ರೇರಣೆ, ಕೋಡಿಂಗ್ ಕಲಿಯುವುದರಿಂದ ಲಾಜಿಕಲ್ ಥಿಂಕಿಂಗ್ ಸುಲಭ, ಗಣಿತದ ಆಸಕ್ತಿಯೊಂದಿಗೆ ಲೆಕ್ಕಾಚಾರ ಮತ್ತು ಅಂಕಿ-ಅಂಶಗಳ ಮೇಲಿನ ಭಯ ದೂರವಾಗಲಿದೆ. 
ಜತೆಗೆ, ತಂತ್ರಜ್ಞಾನದ ಕಾರ್ಯವೈಖರಿಯನ್ನು ಪ್ರಾಯೋಗಿಕವಾಗಿ ಅರ್ಥೈಸಿಕೊಳ್ಳಲು, ಸ್ವಂತವಾಗಿ ಹೊಸ ವಿಷಯ ಅನ್ವೇಷಿಸಲು, ಡಿಜಿಟಲ್ ಪರಿಕರ ಸರಿಯಾಗಿ ಬಳಸಲು ಹಾಗೂ ಆಧುನಿಕ ಪ್ರಪಂಚಕ್ಕೆ ತಕ್ಕಂತೆ ಅಪ್‌ಡೇಟ್ ಆಗಲು ಸಾಧ್ಯವಾಗಲಿದೆ.
"

ಜಿಲ್ಲೆಯಲ್ಲಿ ಆಯ್ದ ಸರ್ಕಾರಿ ಶಾಲೆಯಲ್ಲಿ ಎಐ ಕಲಿಕೆ ಶುರು ಮಾಡಲಾಗಿದೆ. ಈಗಾಗಲೇ ಅತಿಥಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಬಹುತೇಕ ಅಂತಿಮ ಹಂತಕ್ಕೆ ಬಂದಿದ್ದು, ಈಗಾಗಲೇ ಆಯ್ಕೆಗೊಂಡಿರುವ ಈ ಶಿಕ್ಷಕರಿಗೆ ತರಬೇತಿ ಸಹ ಕೊಡಲಾಗಿದೆ. ಎಐ ಕೌಶಲವನ್ನು ಕಲಿಯಲು ಮಕ್ಕಳು ಸಹ ಉತ್ಸುಕರಾಗಿದ್ದಾರೆ

— ಡಿ.ಉದಯಕುಮಾರ್ ಉಪನಿರ್ದೇಶಕ, ಶಾಲಾ ಶಿಕ್ಷಣ ಇಲಾಖೆ