ಇಎಂಎಂಆರ್‌ಸಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಪ್ರೊ.ಬಿ.ರಮೇಶ್, ಪ್ರೊ.ಆರ್.ಶಿವಪ್ಪ, ಪ್ರೊ.ಎಚ್.ಪಿ ಜ್ಯೋತಿ, ಪ್ರೊ.ಚಂದ್ರಮೌಳಿ ಇದ್ದರು. 
ಮೈಸೂರು

ತಂತ್ರಜ್ಞಾನ ಜಗತ್ತು ಆಳುತ್ತಿರುವ ಎಐ

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • *ಡಾ.ಮನಮೋಹನ್‌ಸಿಂಗ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ರಮೇಶ್ ಹೇಳಿಕೆ
ಮೈಸೂರು: ತಂತ್ರಜ್ಞಾನದ ಆವಿಷ್ಕಾರ ಹೊಸ ರೂಪದಲ್ಲಿ ನಿರಂತರವಾಗಿರುತ್ತದೆ. ಅದೇ ರೀತಿ ಸಮಾಜದಲ್ಲೂ ಅಗತ್ಯತೆಗಳು, ರಚನೆಯಲ್ಲೂ ಬದಲಾಗುತ್ತಿರುತ್ತವೆ. ಅದಕ್ಕೆ ಬೇಕಾದ ಪರಿಹಾರ ಕಂಡುಕೊಳ್ಳಬೇಕು ಎಂದು ಬೆಂಗಳೂರು ನಗರ ಡಾ.ಮನಮೋಹನ್‌ಸಿಂಗ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ರಮೇಶ್ ಹೇಳಿದರು.
ಮೈಸೂರು ವಿಶ್ವವಿದ್ಯಾಲಯ ಸಮಾಜ ಕಾರ್ಯ ಅಧ್ಯಯನ ವಿಭಾಗದಿಂದ ಮಾನಸಗಂಗೋತ್ರಿಯ ಇಎಂಎಂಆರ್‌ಸಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಾಧ್ಯಾಪಕರಿಗೆ ಪುನಶ್ಚೇತನ ಶಿಬಿರ, ವಿದ್ಯಾರ್ಥಿಗಳಿಗೆ ಕಾರ್ಯಾಗಾರದಲ್ಲಿ ಮಾತನಾಡಿದರು. 
ಸಮಾಜದಲ್ಲಿ ಸಮಸ್ಯೆಗಳು, ಸವಾಲುಗಳು, ಅದಕ್ಕೆ ಪರಿಹಾರಗಳು ಪ್ರತಿ ಮೂರು ವರ್ಷಕ್ಕೊಮ್ಮೆ ಬದಲಾಗುತ್ತಿರುತ್ತವೆ. ಅತ್ಯಾಧುನಿಕ ಜಗತ್ತಿನಲ್ಲಿ ತಂತ್ರಜ್ಞಾನಗಳು ನವ ಆವಿಷ್ಕಾರಗಳಾಗುತ್ತಿವೆ. ಕೃತಕ ಬುದ್ಧಿಮತ್ತೆ(ಎಐ), ಮಿಷನ್ ಲರ್ನಿಂಗ್ ತಂತ್ರಜ್ಞಾನ ಜಗತ್ತನ್ನು ಆಳುತ್ತಿದ್ದು, ಮುಂದೆ ಕ್ವಾಂಟಮ್ ಕಂಪ್ಯೂಟರ್ ಮುನ್ನಲೆಗೆ ಬರುತ್ತದೆ. 
ಆದ್ದರಿಂದ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಜ್ಞಾನಾರ್ಜನೆ ವೃದ್ಧಿಸಿಕೊಳ್ಳಬೇಕಿದೆ. ಜ್ಞಾನ ನವೀಕರಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು.
ಸಮಾಜಕಾರ್ಯ ಅಧ್ಯಯನಕ್ಕೆ ಹೆಚ್ಚು ಮನ್ನಣೆ ದೊರೆಯುತ್ತಿದೆ. ಭಾರತದಲ್ಲಿ 100ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಲ್ಲಿ ಸಮಾಜಕಾರ್ಯ ಅಧ್ಯಯನ ಕೋರ್ಸ್‌ಗಳಿವೆ. 450ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಈ ಕೋರ್ಸ್‌ಗಳಿಗೆ ಸ್ನಾತಕೋತ್ತರ ಪದವಿ ಆರಂಭಿಸಿವೆ. 
140ಕ್ಕೂ ಹೆಚ್ಚು ಸಂಸ್ಥೆಗಳಲ್ಲಿ ಸಮಾಜಕಾರ್ಯ ಅಧ್ಯಯನದಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಭಾರತದಲ್ಲಿ ಈ ವಿಭಾಗದಲ್ಲಿ 3 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ 42 ಪಬ್ಲಿಕ್ ವಿಶ್ವವಿದ್ಯಾಲಯಗಳಿವೆ. ಅವಕ್ಕೆಲ್ಲ ಮೈಸೂರು ವಿಶ್ವವಿದ್ಯಾಲಯ ಮಾತೃ ವಿಶ್ವವಿದ್ಯಾಲಯವಾಗಿದ್ದು, ವಿವಿ ಶೈಕ್ಷಣಿಕ ಕ್ಷೇತ್ರದಲ್ಲಿ ನಾಯಕನಿದ್ದಂತೆ ಎಂದರು. ಮೈವಿವಿ ಸಮಾಜಕಾರ್ಯ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಆರ್.ಶಿವಪ್ಪ, ಎಂಎಂಟಿಟಿಸಿ ನಿರ್ದೇಶಕಿ ಮತ್ತು ವಿಭಾಗದ ಪ್ರಾಧ್ಯಾಪಕಿ ಪ್ರೊ.ಎಚ್.ಪಿ. ಜ್ಯೋತಿ, ಪ್ರಾಧ್ಯಾಪಕ ಪ್ರೊ.ಚಂದ್ರಮೌಳಿ ಇದ್ದರು.